ಗುರುವಾರ , ಆಗಸ್ಟ್ 22, 2019
21 °C
₹ 8.1 ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಘಟಕ

ಉಳಿದ ಆಹಾರದಿಂದ ಬಯೋಗ್ಯಾಸ್!

Published:
Updated:
Prajavani

ಹಾವೇರಿ: ಹಾಸ್ಟೆಲ್‌ನಲ್ಲಿ ಊಟ ಮಾಡಿ ಉಳಿದ ಆಹಾರ, ಹಾಳಾದ ತರಕಾರಿ–ಸೊಪ್ಪುಗಳಿಂದ ಜೈವಿಕ ಅನಿಲ ಉತ್ಪಾದಿಸುವ ಮಹತ್ವದ ಹೆಜ್ಜೆ ಇಟ್ಟಿರುವ ಹಾವೇರಿ ನಗರಸಭೆ, ಸರ್ಕಾರದ ಅನುದಾನದಲ್ಲಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಅನಿಲ ತಯಾರಿಕಾ ಘಟಕ ಸ್ಥಾಪಿಸಿದೆ. 

ಕೊಳೆತ ಹಣ್ಣು, ತರಕಾರಿ, ಗಟ್ಟಿ ಆಹಾರ ಪದಾರ್ಥಗಳನ್ನು ದ್ರವರೂಪಕ್ಕಿಳಿಸಿ, ಅದನ್ನು ಘಟಕಕ್ಕೆ ಹಾಕಲಾಗುತ್ತದೆ. ಅವುಗಳನ್ನು  ಬ್ಯಾಕ್ಟೀರಿಯಾಗಳು ತಿಂದು ಮಿಥೇನ್‌ ಹಾಗೂ ಇಂಗಾಲದ ಡೈ ಆಕ್ಸೈಡ್ ಮಿಶ್ರಣದಿಂದ ಬಯೋಗ್ಯಾಸ್‌ ಉತ್ಪತ್ತಿಯಾಗುತ್ತದೆ.

‘₹ 8.1 ವೆಚ್ಚದಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ ನಿತ್ಯ ಟನ್‌ಗಟ್ಟಲೇ ಕಸ ಉತ್ಪತ್ತಿ ಆಗುತ್ತಿದೆ. ಪ್ರತಿ ಮನೆಯಿಂದ ದಿನಕ್ಕೆ ಮುಕ್ಕಾಲು ಕೆ.ಜಿ ಕಸ ಹೊರ ಬರುತ್ತಿದೆ. ಹಾಸ್ಟೆಲ್‌ನಲ್ಲಿ ಮಿಕ್ಕ ಆಹಾರವನ್ನು ಮೊದಲು ಎಲ್ಲೆಂದರಲ್ಲಿ ಎಸೆಯಲಾಗುತ್ತಿತ್ತು. ಇದು ಹಂದಿ–ನಾಯಿಗಳ ಕಾಟದ ಜತೆಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣವಾಗುತ್ತಿತ್ತು. ಕಸಮರುಬಳಕೆಗೆ ಈ ಘಟಕ ಸಹಕಾರಿ ಆಗಿದೆ’ ಎಂದು ನಗರಸಭೆ ಪರಿಸರ ಅಧಿಕಾರಿ ಚಂದ್ರಕಾಂತ ಗುಡ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಜರಾತ್‌ನಿಂದ ದೊಡ್ಡ ಟ್ಯಾಂಕ್‌ ತರಿಸಲಾಗಿದೆ. ಅದರಲ್ಲಿ 250 ರಿಂದ 400 ಕೆ.ಜಿವರೆಗೆ ಅಡುಗೆ ಕಸ ಹಾಕಬಹುದು. ಇದರಲ್ಲಿ ಉತ್ಪತ್ತಿಯಾಗುವ ಗ್ಯಾಸ್‌ ಬೇರೆ ಕಡೆ ವಿತರಿಸುವ ಉದ್ದೇಶವಿಲ್ಲ. ಅದನ್ನು ಹಾಸ್ಟೆಲ್‌ಗಳ ಬಳಕೆಗೇ ನೀಡಲಾಗಿದೆ. ಹೋಟೆಲ್‌, ಕಲ್ಯಾಣ ಮಂಟಪಗಳಿಂದಲೂ ಅಡುಗೆ ಕಸ ಸಂಗ್ರಹಿಸುವ ಯೋಜನೆ ಇತ್ತು. ಕಾರಣಾಂತರಗಳಿಂದ ಆ ಪ್ರಕ್ರಿಯೆ ಸದ್ಯಕ್ಕೆ ಬಿಟ್ಟಿದ್ದೇವೆ’ ಎಂದೂ ಹೇಳಿದರು.  ‌

‘ಇದನ್ನು ಅಳವಡಿಸಿ ಆರು ತಿಂಗಳು ಕಳೆದಿದೆ. ನಗರದಲ್ಲಿರುವ ಹಾಸ್ಟೆಲ್‌ಗಳಿಂದ ನಿತ್ಯ ಸಂಗ್ರಹಿಸಲಾಗುವ 70 ಕೆ.ಜಿಯಷ್ಟು ಅಡುಗೆ ಕಸವನ್ನು ಘಟಕಕ್ಕೆ ಹಾಕುತ್ತೇವೆ. ಇದರಿಂದ ಶೇ 40 ರಷ್ಟು ಎಲ್‌ಪಿಜಿ ಹೊರೆ ಕಡಿಮೆಯಾಗಿದೆ. ನಿರ್ವಹಣೆಯನ್ನು ನಗರಸಭೆಯೇ ಮಾಡುತ್ತಿದೆ. ಶೀಘ್ರದಲ್ಲಿ ಹಾಸ್ಟೆಲ್‌ಗೆ ವಹಿಸಿಕೊಡಲಾಗುವುದು’ ಎಂದು ಅವರು ವಿವರಿಸಿದರು.

‘ಹಾನಗಲ್‌ ತಾಲ್ಲೂಕಿನಲ್ಲಿ ಎರಡು ಹಾಸ್ಟೆಲ್‌ಗಳಿಗೆ ತಲಾ ಒಂದು ಬಯೋಗ್ಯಾಸ್‌ ಘಟಕ ಸ್ಥಾಪಿಸಲಾಗಿದೆ. ಯಾವುದೇ ಅಪಾಯವಿಲ್ಲದೇ ನೇರವಾಗಿ ಕಸವನ್ನು ಹಾಕಬಹುದಾದ ಕಾರಣ, ನಿರ್ವಹಣೆಯನ್ನು ಹಾಸ್ಟೆಲ್‌ನವರಿಗೇ ವಹಿಸಿದ್ದೇವೆ. ದೊಡ್ಡ ಗಾತ್ರದ ತರಕಾರಿಗಳನ್ನು ಹಾಕುವ ಬದಲು ಕತ್ತರಿಸಿ ಹಾಕಿದರೆ ಬೇಗನೆ ಗ್ಯಾಸ್‌ ಉತ್ಪನ್ನವಾಗುತ್ತದೆ’ ಎಂದು ಹಾನಗಲ್‌ ಪುರಸಭೆ ಎಂಜಿನಿಯರ್‌ ಎನ್‌.ಕೆ. ಮಿರ್ಜಿ ತಿಳಿಸಿದರು.

ಹೆಚ್ಚು ಲಾಭ ಹಣ ಉಳಿತಾಯ

‘ಒಂದೇ ಬಾರಿ ಇದಕ್ಕೆ ಇಷ್ಟೆಲ್ಲ ಬಂಡವಾಳ ಹಾಕಿದರೆ ನಷ್ಟವಾಗುತ್ತದೆ ಎಂದು ತಿಳಿಯುವುದಕ್ಕಿಂತ, ಭವಿಷ್ಯದಲ್ಲಿರುವ ಇದರ ಉಪಯೋಗವನ್ನು ಅರಿಯಬೇಕು. ಹೋಟೆಲ್‌, ಲಾಡ್ಜ್‌ಗಳ ಮಾಲೀಕರೂ ಘಟಕ ಅಳವಡಿಸಿಕೊಂಡರೆ ಹೆಚ್ಚಿನ ಲಾಭ, ಹಣ ಉಳಿತಾಯವಾಗುತ್ತದೆ’ ಎಂದು ನಗರಸಭೆ ಪರಿಸರ ಅಧಿಕಾರಿ ಚಂದ್ರಕಾಂತ ಗುಡ್ನವರ ತಿಳಿಸಿದರು.

Post Comments (+)