ಹಿರೇಕೆರೂರು: ‘ಮುಂಬರುವ ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು. ಚುನಾವಣಾ ಸಂದರ್ಭದಲ್ಲಿ ರಟ್ಟೀಹಳ್ಳಿ ಹಾಗೂ ಹಿರೇಕೆರೂರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಶಾಸಕ ಯು.ಬಿ.ಬಣಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲ್ಲೂಕುಮಟ್ಟದ ಬರ ನಿರ್ವಹಣ ಕಾರ್ಯಪಡೆ ಸಮಿತಿಯ ಸಭೆ ನಡೆಸಿ ಮಾತನಾಡಿದ ಅವರು, ‘ನೀರಿನ ಸಮಸ್ಯೆ ಹೊಂದಿರುವ ಗ್ರಾಮಗಳನ್ನು ಈಗಲೇ ಗುರುತಿಸಿ, ಸಮಸ್ಯೆಗೆ ಪರಿಹಾರ ಕೈಗೊಳ್ಳುಲು ಸಿದ್ಧತೆ ಮಾಡಿಕೊಳ್ಳಬೇಕು. ಬರಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಪೂರೈಕೆ ವಿಷಯವು ಸವಾಲಿನ ಸಂಗತಿಯಾಗಿದೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸದಾ ಸಿದ್ಧರಾಗಬೇಕು’ ಎಂದರು.
‘ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರ ಪರಿಸ್ಥಿತಿಯಿದ್ದು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮವಾರು ನೀರಿನ ಮೂಲಗಳನ್ನು ಗುರುತಿಸಿಕೊಂಡು, ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಯೋಜನೆ ಕೈಗೊಳ್ಳಬೇಕು’ ಎಂದರು.
ಈಗಾಗಲೇ ಹಿರೇಕೆರೂರ ತಾಲ್ಲೂಕಿನಲ್ಲಿ 67 ಕೊಳವೆ ಬಾವಿಗಳನ್ನು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ 24 ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ತಗೆದುಕೊಳ್ಳಲಾಗಿದೆ. ವಿವಿಧ ಗ್ರಾಮಗಳಿಂದ ಹೆಚ್ಚುವರಿ ಕೊಳವೆ ಬಾವಿಗಳಿಗೆ ಹೊಸದಾಗಿ ಅರ್ಜಿಗಳು ಬಂದಿವೆ. ಹೊಸ ಕೊಳಬಾವಿಗಳಿಗಾಗಿ ₹25 ಲಕ್ಷ, ಬಾಡಿಗೆ ಆಧಾರದ ಬೋರ್‌ವೆಲ್ ಪೈಪ್‌ಲೈನ್ ಹಾಗೂ ಬಾಡಿಗೆಗಗಾಗಿ ₹50 ಲಕ್ಷ ಅನುದಾನ ಲಭಿಸಿದೆ’ ಎಂದರು.
ಹಿರೇಕೆರೂರು ತಹಶೀಲ್ದಾರ್ ಎಚ್.ಪ್ರಭಾಕರಗೌಡ, ರಟ್ಟೀಹಳ್ಳಿ ತಹಶೀಲ್ದಾರ್ ಗುರು ಬಸವರಾಜ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ.ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ, ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ತಾಲ್ಲೂಕು ನೋಡಲ್ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.