ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ ಪ್ರಕರಣ | ತನಿಖೆಗೂ ಮುನ್ನವೇ ಸರ್ಟಿಫಿಕೇಟ್‌: ಬೊಮ್ಮಾಯಿ

ಶಾಸಕ ಬಸವರಾಜ ಬೊಮ್ಮಾಯಿ ವಾಗ್ದಾಳಿ
Published 28 ಜುಲೈ 2023, 16:01 IST
Last Updated 28 ಜುಲೈ 2023, 16:01 IST
ಅಕ್ಷರ ಗಾತ್ರ

ಹಾವೇರಿ: ‘ಉಡುಪಿ ಪ್ರಕರಣದಲ್ಲಿ ತನಿಖೆಗೂ ಮುಂಚೆಯೇ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಪೊಲೀಸರು ಪ್ರಕರಣ ಮುಚ್ಚಿ ಹಾಕುವ ಶಂಕೆ ಇದೆ. ಹೆಣ್ಣು ಮಕ್ಕಳ ಗೌರವದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್‌ ನಾಯಕರಿಗೆ ನಾಚಿಕೆಯಾಗಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. 

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಅಲ್ಲಿ ವಿಡಿಯೊ ರೆಕಾರ್ಡ್ ಮಾಡಿಲ್ಲ ಅಂದರೆ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ ಏಕೆ ಸಸ್ಪೆಂಡ್ ಮಾಡಿದೆ? ತಪ್ಪೊಪ್ಪಿಗೆ ಪತ್ರವನ್ನು ಏಕೆ ಬರೆಯಿಸಿಕೊಂಡರು? ಇದು ಕಾಲೇಜಿನಲ್ಲಿ ಮುಗಿದು ಹೋದ ಪ್ರಕರಣ ಅಲ್ಲ, ಮುಚ್ಚಿಹೋದ ಪ್ರಕರಣ’ ಎಂದು ಆರೋಪಿಸಿದರು. 

ದಂಗೆಕೋರರ ರಕ್ಷಣೆ:

‘ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪ್ರಕರಣವೇ ಬೇರೆ. ಕನ್ನಡ ಸಂಘಟನೆಗಳ ಪ್ರಕರಣವೇ ಬೇರೆ. ಪೊಲೀಸ್‌ ಠಾಣೆಗಳಿಗೆ ಕಲ್ಲು ಹೊಡೆದು ಬೆಂಕಿ ಹಚ್ಚಿದ ದಂಗೆಕೋರರನ್ನು ಕಾಂಗ್ರೆಸ್‌ ಸರ್ಕಾರ ರಕ್ಷಣೆ ಮಾಡಲು ಹೊರಟಿದೆ. ಈ ಗಲಭೆ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು’ ಎಂದು ಬೊಮ್ಮಾಯಿ ಹೇಳಿದರು. 

ಸರ್ಕಾರ ಪರಿಹಾರ ನೀಡಲಿ:

‘ನಿರಂತರ ಮಳೆಯಿಂದ ರಾಜ್ಯದಾದ್ಯಂತ ಮನೆ ಹಾನಿ ಮತ್ತು ಬೆಳೆ ಹಾನಿಗಳಾಗಿವೆ. 40ಕ್ಕೂ ಹೆಚ್ಚು ಸಾವುಗಳಾಗಿವೆ. ಪರಿಹಾರ ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿಲ್ಲ. ನೆರೆ ಸಂತ್ರಸ್ತರ ಕಷ್ಟಕ್ಕೆ ಸಚಿವರು ಸ್ಪಂದಿಸುತ್ತಿಲ್ಲ. ಮನೆ ಹಾನಿ ಪ್ರಕರಣದಲ್ಲಿ ಮನೆಗಳಿಗೆ ₹3 ಲಕ್ಷ ಮತ್ತು ₹5 ಲಕ್ಷ ಪರಿಹಾರ ನೀಡಬೇಕು. ಬೆಳೆ ನಾಶವಾದರೆ ಹೆಕ್ಟೇರ್‌ಗೆ ₹13 ಸಾವಿರ ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ’ ಎಂದರು. 

‘ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ ಮಾಡಿಕೊಂಡೇ ಬಂದಿದೆ. ಈಗಲೂ ಸ್ಪಷ್ಟತೆ ಇಲ್ಲ. ನಾವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ. ಮೊದಲಿನಿಂದಲೂ ಕಾಂಗ್ರೆಸ್ ವಿರೋಧ ಇದೆ. ಆದರೆ ಅವರ ಬಣ್ಣ ಈಗ ಬಯಲಾಗಿದೆ’ ಎಂದು ಕುಟುಕಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT