ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮಗು ಅಪಹರಿಸಿದ್ದ ಮಹಿಳೆಯಿಂದಲೇ ಪೋಷಕರ ಮಡಿಲು ಸೇರಿದ ಹಸುಗೂಸು

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಗು ಅಪಹರಣ ಸುಖಾಂತ್ಯ
Last Updated 12 ಮಾರ್ಚ್ 2023, 13:04 IST
ಅಕ್ಷರ ಗಾತ್ರ

ಹಾವೇರಿ: ನರ್ಸ್ ವೇಷ ಧರಿಸಿದ್ದ ಅಪರಿಚಿತ ಮಹಿಳೆಯೊಬ್ಬಳು ಹಸುಗೂಸನ್ನು ಅಪಹರಿಸಿದ್ದ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ನಡೆದಿತ್ತು. ಅಪಹರಿಸಿದ್ದ ಮಹಿಳೆಯೇ ಮಗುವನ್ನು ಭಾನುವಾರ ಪೊಲೀಸರಿಗೆ ಒಪ್ಪಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಹಾವೇರಿಯ ನಾಗೇಂದ್ರನಮಟ್ಟಿಯ ಗೀತಾ ಮಗುವನ್ನು ಅಪಹರಿಸಿದ್ದ ಮಹಿಳೆ. ಮದುವೆಯಾಗಿ ಐದು ವರ್ಷವಾದರೂ ಈಕೆಗೆ ಮಕ್ಕಳಿರಲಿಲ್ಲ. ಬೆಂಗಳೂರಿನಲ್ಲಿ ಹೋಮ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಗೀತಾ ಶನಿವಾರ ಹಾವೇರಿ ಜಿಲ್ಲಾಸ್ಪತ್ರೆಗೆ ಬಂದಿದ್ದ ವೇಳೆ ಮಗುವನ್ನು ಅಪಹರಿಸಿದ್ದರು. ಮಗು ಅಪಹರಣವಾದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಭೀತಿಗೊಂಡ ಗೀತಾ ಮಗುವನ್ನು ಶಹರ ಪೊಲೀಸ್‌ ಠಾಣೆಗೆ ಭಾನುವಾರ ಮಧ್ಯಾಹ್ನ ನೀಡಿದ್ದಾರೆ. ಗೀತಾಳನ್ನು ಪೊಲೀಸರು ವಶಕ್ಕೆ ಪಡೆದು, ಮಗುವನ್ನು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.

ಘಟನೆ ಹಿನ್ನೆಲೆ:

ಹಾವೇರಿ ಜಿಲ್ಲಾಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಶಂಕಿತ ನರ್ಸ್‌ ಚಿತ್ರ
ಹಾವೇರಿ ಜಿಲ್ಲಾಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಶಂಕಿತ ನರ್ಸ್‌ ಚಿತ್ರ

ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಹುಟ್ಟಿದ್ದ ಮಗುವಿಗೆ ಅಲರ್ಜಿ ಕಾಣಿಸಿಕೊಂಡಿತ್ತು. ಬ್ಯಾಡಗಿ ತಾಲ್ಲೂಕಿನ ಮತ್ತೂರು ಗ್ರಾಮದ ಗದಿಗೆಪ್ಪ ಕಂಬಾರ ಎಂಬುವರ ಪತ್ನಿ ತನ್ನ ಮೊಮ್ಮಗಳನ್ನು ಎತ್ತಿಕೊಂಡು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಲು ಪರದಾಡುತ್ತಿದ್ದರು.

ಆಗ ನರ್ಸ್ ವೇಷ ಧರಿಸಿದ್ದ ಗೀತಾ, ಮಗುವನ್ನು ಜಿಲ್ಲಾಸ್ಪತ್ರೆಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಅಜ್ಜಿಯೊಂದಿಗೆ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ಚಿಕಿತ್ಸೆ ಕೊಡಿಸಿದ ನಂತರ ಅಜ್ಜಿಯನ್ನು ಹಣ್ಣು ತರಲು ಹೇಳಿ ಮಗುವನ್ನು ತನ್ನೊಂದಿಗೆ ಕರೆದುಕೊಂಡು ಪರಾರಿಯಾಗಿದ್ದಾಳೆ.

‘ತನ್ನ ಮೊಮ್ಮಗು ಅಪಹರಣವಾಗಿದೆ, ಹುಡುಕಿಕೊಡಿ’ ಎಂದು ಮಗುವಿನ ತಾತ ಗದಿಗೆಪ್ಪ ಕಂಬಾರ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಭದ್ರತಾ ವೈಫಲ್ಯ:

‘ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹುಟ್ಟಿದ ಮಕ್ಕಳನ್ನು ಯಾರೋ ಬಂದು ಎತ್ತಿಕೊಂಡು ಹೋಗುತ್ತಾರೆ ಅಂದರೆ ಅಲ್ಲಿನ ಭದ್ರತಾ ವೈಫಲ್ಯ ಎದ್ದು ಕಾಣುತ್ತದೆ. ನವಜಾತ ಶಿಶುಗಳಿಗೆ ಸೂಕ್ತ ಭದ್ರತೆ ನೀಡುವುದು ಆಸ್ಪತ್ರೆ ಆಡಳಿತ ಮಂಡಳಿಯ ಕರ್ತವ್ಯ’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT