ಹಾವೇರಿ: ಪಶ್ಚಿಮಘಟ್ಟ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುತ್ತಿರುವ ಬೇಡ್ತಿ (ಗಂಗಾವಳಿ) ನದಿಯನ್ನು ವರದಾ ನದಿಯೊಂದಿಗೆ ಜೋಡಿಸುವ ಯೋಜನೆಗಾಗಿ ಹಾವೇರಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಗೊಂದಲದ ಗೂಡಾಗಿದ್ದ ಯೋಜನೆಗೆ ಈಗ ‘ಡಿಪಿಆರ್’ ರೂಪ ಸಿಕ್ಕಿರುವುದು, ಸ್ಥಳೀಯ ಜನರಲ್ಲಿ ಹರ್ಷ ತಂದಿದೆ. ವರದಾ ಒಡಲಿಗೆ ಬೇಡ್ತಿಯ ನೀರನ್ನು ಸೇರಿಸಿದರೆ ಬರಗಾಲದಿಂದ ಶಾಶ್ವತ ಪರಿಹಾರ ಸಿಗಬಹುದೆಂದು ರೈತರು ಖುಷಿಯಲ್ಲಿದ್ದಾರೆ.

ಮಳೆಯಾಶ್ರಿತ ಬಯಲು ಸೀಮೆ ಪ್ರದೇಶವೇ ಹೆಚ್ಚಿರುವ ಹಾವೇರಿ ಜಿಲ್ಲೆಯಲ್ಲಿ, ಕೆಲ ಸ್ಥಳಗಳು ಮಾತ್ರ ಮಲೆನಾಡಿನ ಸೆರಗಿನಲ್ಲಿವೆ. ಬೇಸಿಗೆ ಬಂದರೆ ಜಿಲ್ಲೆಯ ಬಹುತೇಕ ಕಡೆ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುತ್ತದೆ. ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳು ಬೇಸಿಗೆಯಲ್ಲಿ ಬತ್ತುವುದರಿಂದ, ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ.

ಜಿಲ್ಲೆಯ ಎಲ್ಲ ಪ್ರದೇಶಗಳನ್ನು ಒಳಗೊಂಡು ಸುಸಜ್ಜಿತ ನೀರಾವರಿ ಯೋಜನೆ ಇರದಿದ್ದರಿಂದ, ಮಳೆಯಾಶ್ರಿತವಾದ ಕೃಷಿ ವಲಯ ಬೇಸಿಗೆಯಲ್ಲಿ ತತ್ತರಿಸುತ್ತಿದೆ. ಮುಂಗಾರಿನಲ್ಲಿ ಮಳೆ ಕೈಕೊಟ್ಟರೆ ರೈತರು ಕಂಗಾಲಾಗುತ್ತಿದ್ದಾರೆ. ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬತ್ತಿದ್ದರೆ, ಅನ್ನದಾತರು ಹೈರಾಣಾಗುತ್ತಿದ್ದಾರೆ.

ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಶಿಗ್ಗಾವಿ ಹಾಗೂ ಸವಣೂರು ಜನರು ಕುಡಿಯುವ ನೀರಿಗಾಗಿ ವರದಾ ನದಿ ನೀರನ್ನೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಕೇವಲ 5 ತಿಂಗಳು ಮಾತ್ರ ತುಂಬಿ ಹರಿಯುವ ನದಿ, ನಂತರ ಬರಿದಾಗುತ್ತಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜಾರಿಯಾದರೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ಆಶಯ ಜನರದ್ದಾಗಿದೆ.

ವರ್ಷ ಬಿಟ್ಟು ವರ್ಷ, ಜಿಲ್ಲೆಯ ತಾಲ್ಲೂಕುಗಳು ಬರಗಾಲ ಪೀಡಿತ ಪಟ್ಟಿಗೆ ಸೇರುತ್ತಿವೆ. ಎರಡು ನದಿಗಳು ಹರಿಯುತ್ತಿದ್ದರೂ ಬರಗಾಲ ಪೀಡಿತ ಹಣೆಪಟ್ಟಿ ಮಾತ್ರ ತಪ್ಪುತ್ತಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯ ರೈತರು, ಬೇಡ್ತಿ–ವರದಾ ನದಿ ಜೋಡಣೆಗೆ ಹೋರಾಟ ಆರಂಭಿಸಿದ್ದಾರೆ. ಕುಡಿಯುವ ನೀರು ಹಾಗೂ ಕೃಷಿಗೆ ಅತೀ ಅಗತ್ಯವಾಗಿರುವ ನದಿಗಳ ಜೋಡಣೆ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಿ ಕಾಮಗಾರಿ ಆರಂಭಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

ವರದಾ ನೀರು ಮೂರು ತಿಂಗಳಿಗೆ ಖಾಲಿ: ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಳೆಯಾದರೆ ಜಿಲ್ಲೆಯ ವರದಾ ಹಾಗೂ ತುಂಗಭದ್ರಾ ನದಿಗಳು ತುಂಬಿ ಹರಿಯುತ್ತವೆ. ಮಳೆಗಾಲ ಮುಗಿದು ಮೂರೇ ತಿಂಗಳಿಗೆ ಎರಡೂ ನದಿಗಳು ಬತ್ತಿ ಹೋಗುತ್ತವೆ. ಚಳಿಗಾಲದಿಂದ ಬೇಸಿಗೆ ಕಾಲದವರೆಗೂ ನದಿಯಲ್ಲಿ ನೋಡಲು ನೀರು ಸಿಗುವುದಿಲ್ಲ. ಕೆಲವೆಡೆ ನಿರ್ಮಿಸಿರುವ ಸಣ್ಣ ಬಾಂದಾರದಲ್ಲಿ ಮಾತ್ರ ಅಲ್ಪ–ಸ್ವಲ್ಪ ನೀರು ಇರುತ್ತದೆ ಎಂದು ರೈತರು ಹೇಳುತ್ತಾರೆ.

ಅಣೆಕಟ್ಟು ಕಟ್ಟಿದರೆ ವರ್ಷಪೂರ್ತಿ ನೀರು: ‘ಬೇಡ್ತಿ– ವರದಾ ನದಿ ಜೋಡಣೆಯಿಂದ ಸಿಗುವ ಹೆಚ್ಚುವರಿ ನೀರನ್ನು ಅಣೆಕಟ್ಟು ಮೂಲಕ ಸಂಗ್ರಹಿಸಿಟ್ಟುಕೊಂಡರೆ, ಹಾವೇರಿ ಜಿಲ್ಲೆಗೆ ವರ್ಷಪೂರ್ತಿ ನೀರು ಸಿಗುತ್ತದೆ’ ಎಂದು ರೈತ ಮುಖಂಡ ರಮೇಶ ಕೆಂಚಳ್ಳೇರ ತಿಳಿಸಿದರು.

‘ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾದರೂ ಇಲ್ಲಿ ಸುಸಜ್ಜಿತ ನೀರಾವರಿ ವ್ಯವಸ್ಥೆಯಿಲ್ಲ. ಮಳೆ ನಂಬಿಕೊಂಡೇ ರೈತರು ಕೃಷಿ ಮಾಡಬೇಕು. ಹೀಗಾಗಿ, ಯಾರೊಬ್ಬ ರೈತರು ಆರ್ಥಿಕವಾಗಿ ಸದೃಢವಾಗಿಲ್ಲ. ನದಿ ಜೋಡಣೆಯಾದರೆ, ಜಮೀನು ನೀರಾವರಿಯಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆ ಬಾವಿಯಲ್ಲಿ ಉತ್ತಮ ನೀರು ಸಿಗುತ್ತದೆ. ನಮ್ಮೂರಿಗೆ ಆಗಾಗ ಅಂಟುವ ಬರಗಾಲವನ್ನು ಶಾಶ್ವತವಾಗಿ ಹೋಗಲಾಡಿಸಬಹುದು’ ಎಂದು ಹೇಳಿದರು.

ಪ್ರತಿ ವರ್ಷವೂ ಬರಗಾಲದಿಂದ ತತ್ತರಿಸುತ್ತಿರುವ ಹಾವೇರಿ ಜಿಲ್ಲೆಯನ್ನು ಬರಗಾಲ ಮುಕ್ತಗೊಳಿಸಲು ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜಾರಿ ಅತೀ ಅವಶ್ಯ
ಮಲ್ಲಿಕಾರ್ಜುನ ಬಳ್ಳಾರಿ ರೈತ ಮುಖಂಡ

‘ಉಪಮುಖ್ಯಮಂತ್ರಿ ಆಸಕ್ತಿ’

ವರದಾ–ಬೇಡ್ತಿ ನದಿ ಜೋಡಣೆಯಿಂದ 10.6 ಟಿಎಂಸಿ ಹಾಗೂ ವರದಾ–ಧರ್ಮಾ–ಬೇಡ್ತಿ ನದಿ ಜೋಡಣೆಯಿಂದ 7.84 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದೆ. ಹಾವೇರಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಇರುವ ಬೇಡ್ತಿ–ವರದಾ ನದಿ ಜೋಡಣೆಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆಸಕ್ತಿ ವಹಿಸಿದ್ದಾರೆ. ಇತ್ತೀಚೆಗೆ ನಡೆದ ಹಿಮ್ಸ್ ಉದ್ಘಾಟನಾ ಸಮಾರಂಭದಲ್ಲೂ ಡಿ.ಕೆ. ಶಿವಕುಮಾರ ಅವರು ಡಿಪಿಆರ್ ನಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕರು ಸಹ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

‘ಜನಜಾಗೃತಿ ಸಮಾವೇಶ ಶೀಘ್ರ’

‘ಹಾವೇರಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕೆ ವರದಾ–ಬೇಡ್ತಿ ನದಿ ಜೋಡಣೆ ಅತೀ ಅವಶ್ಯಕವಾಗಿದೆ. ಅರಣ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ಜಾರಿಗೆ ಡಿಪಿಆರ್ ಮಾಡಲಾಗುತ್ತಿದೆ. ಜಿಲ್ಲೆಗೆ ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ಚರ್ಚಿಸಲು ಹಾಗೂ ಹೋರಾಟವನ್ನು ರೂಪಿಸುವ ಸಲುವಾಗಿ ಶೀಘ್ರದಲ್ಲೇ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜಿಲ್ಲೆಯಲ್ಲಿರುವ ಮಠಾಧೀಶರು ಜನಪ್ರತಿನಿಧಿಗಳು ಹಾಗೂ ಮುಖಂಡರ ನೇತೃತ್ವದಲ್ಲಿ ಜನರನ್ನು ಜಾಗೃತಿಗೊಳಿಸಲು ಸಮಾವೇಶ ಮಾಡಲಾಗುವುದು. ಯೋಜನೆ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿದ್ದು ಅವುಗಳ ನಿವಾರಣೆಗಾಗಿ ರಾಜ್ಯ ಸರ್ಕಾರವೇ ಸಭೆ ಕರೆಯಬೇಕು’ ಎಂದು ಅವರು ಒತ್ತಾಯಿಸಿದರು. ‘ವರದಾ–ಬೆಡ್ತಿ ನದಿ ಜೋಡಣೆ ಯೋಜನೆ ಇಂದಿನದಲ್ಲ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ ಅರಣ್ಯ ನಾಶ ಏನೂ ಆಗುವುದಿಲ್ಲ. ಬೇಡ್ತಿ ನದಿಯಿಂದ ಕಡಿಮೆ ನೀರು ಎತ್ತುವ ಉದ್ದೇಶವಿದೆ. ಯಾವುದೇ ನೀರಿನ ನಷ್ಟವೂ ಆಗುವುದಿಲ್ಲ’ ಎಂದರು. ‘ಕುಡಿಯುವ ನೀರು ಜನರ ಮೂಲಭೂತ ಹಕ್ಕು. ಅದನ್ನು ಪೂರೈಸುವುದು ಸರ್ಕಾರದ ಕರ್ತವ್ಯವೂ ಹೌದು. ಹಾವೇರಿ ಜಿಲ್ಲೆಯ ಹಾವೇರಿ ಹಾನಗಲ್ ಬ್ಯಾಡಗಿ ಶಿಗ್ಗಾವಿ ಹಾಗೂ ಸವಣೂರು ಜನರೂ ಇಂದಿಗೂ ಕುಡಿಯುವ ನೀರಿಗೆ ವರದಾ ನದಿ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಕೇವಲ 5 ತಿಂಗಳು ಮಾತ್ರ ವರದಾ ನದಿಯಲ್ಲಿ ನೀರು ಸಿಗುತ್ತಿದೆ. ಉಳಿದ ಸಮಯದಲ್ಲಿ ನೀರು ಬತ್ತುತ್ತಿದೆ. ಇದೇ ಕಾರಣಕ್ಕೆ ಬೇಡ್ತಿ ಮೂಲಕ ಸಮುದ್ರ ಸೇರುತ್ತಿರುವ ನೀರಿನಲ್ಲಿ ಕೇವಲ ಶೇ 8ರಷ್ಟು ನೀರನ್ನು ಮಾತ್ರ ವರದಾ ನದಿಗೆ ಹರಿಸಲು ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ಯಾರೂ ಭಾವನಾತ್ಮಕವಾಗಿ ತೆಗೆದುಕೊಳ್ಳಬಾರದು. ವಸ್ತುಸ್ಥಿತಿ ಅರಿತು ಒಬ್ಬರಿಗೊಬ್ಬರು ಸಹಕಾರ ನೀಡಬೇಕು’ ಎಂದು ಕೋರಿದರು. ‘ನೀರಾವರಿ ಯೋಜನೆಗಳ ಜಾರಿಯಲ್ಲಿ ಈಗ ಹೊಸ ತಂತ್ರಜ್ಞಾನಗಳು ಬಂದಿವೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಶಿರಸಿ–ಸಿದ್ದಾಪುರ ಹಾಗೂ ಹಾವೇರಿ ಜಿಲ್ಲೆಯ ಜನರ ನಡುವೆ ನಿಕಟವಾದ ಸಂಬಂಧವಿದೆ. ಇದಕ್ಕೆ ಯಾರೂ ಧಕ್ಕೆ ತರಬಾರದು. ಇದು ಜನರ ಕುಡಿಯುವ ನೀರಿಗೆ ಸಂಬಂಧಪಟ್ಟ ವಿಷಯ. ಜನರು ಸಹ ಡಿಪಿಆರ್ ಅಂತಿಮವಾಗುವವರೆಗೂ ಕಾಯಬೇಕು. ಆತುರದ ನಿರ್ಧಾರ ಕೈಗೊಂಡರೆ ಯಾರಿಗೂ ಲಾಭವಾಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.