ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ | ಬಹುಗ್ರಾಮ ನೀರಿನ ಯೋಜನೆ ಸ್ಥಗಿತ

ಬರಿದಾದ ವರದಾ ನದಿ: ಶುದ್ಧ ನೀರಿನ ಘಟಕಗಳು ಬಂದ್‌
Published 30 ಮಾರ್ಚ್ 2024, 6:24 IST
Last Updated 30 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನಲ್ಲಿ ಹರಿದಿರುವ ವರದಾ ನದಿ ನೀರು ಬಳಸಿಕೊಂಡು 4 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿವೆ. ಈ ಪೈಕಿ ಉಪ್ಪಣಶಿ, ಕೂಸನೂರ ಮತ್ತು ಕೂಡಲ ಯೋಜನೆಗಳು ವರದಾ ನದಿ ಪಾತ್ರ ಖಾಲಿಯಾದ ಕಾರಣಕ್ಕಾಗಿ ಬಂದ್‌ ಸ್ಥಿತಿಯಲ್ಲಿವೆ. ಚಿಕ್ಕಾಂಶಿಹೊಸೂರ ಯೋಜನೆ ಸದ್ಯ ಚಾಲ್ತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಈ ಯೋಜನೆಯೂ ನಿಸ್ತೇಜಗೊಳ್ಳಲಿದೆ.

ಒಂದೆಡೆ ತಾಪಮಾನ ಏರುಗತಿಯಲ್ಲಿದ್ದರೆ, ಮತ್ತೊಂದೆಡೆ ತಾಲ್ಲೂಕಿನಲ್ಲಿ ಜಲಮೂಲಗಳು ಬತ್ತುತ್ತಿವೆ. ವರದಾ. ಧರ್ಮಾ ನದಿ ಪಾತ್ರ ಬರಿದಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ತಟಸ್ಥಗೊಂಡಿವೆ. ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ.

ತಾಲ್ಲೂಕಿನ 53 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಗುರುತಿಸಿದೆ. ಈಗಾಗಲೇ ಕೆಲವು ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಬಳಸಿಕೊಂಡು ನೀರು ಪೂರೈಕೆಗೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಈ ಬೇಸಿಗೆಗಾಗಿ ಶ್ಯಾಡಗುಪ್ಪಿ, ಹಳ್ಳಿಬೈಲ್‌, ನರೇಗಲ್‌, ಡೊಮ್ಮನಾಳ, ಕೊಪ್ಪಗೊಂಡನಕೊಪ್ಪ ಗ್ರಾಮಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಕೊಳವೆಬಾವಿ ತೋಡಿಸಿದೆ. ಸಮಸ್ಯಾತ್ಮಕ 53 ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಅಗತ್ಯಕ್ಕೆ ತಕ್ಕಂತೆ ನೀರು ಬಳಸಿಕೊಳ್ಳಲು ಟಾಸ್ಕ್‌ಪೋರ್ಸ್‌ ಅಡಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

‘ಆಲದಕಟ್ಟಿ, ಇನಾಂ ನೀರಲಗಿ, ಯಲಿವಾಳ, ಗುರುರಾಯಪಟ್ಟಣ, ಹಳೆಗೆಜ್ಜಿಹಳ್ಳಿ, ಬಮ್ಮನಹಳ್ಳಿ, ಮಲಗುಂದ, ಬೆಳಗಾಲಪೇಟೆ, ಕಲಕೇರಿ, ಸೋಮಸಾಗರ ಅಣಿ, ಇನಾಂದ್ಯಾಮನಕೊಪ್ಪ, ಕಂಚಿನೆಗಳೂರ, ಚೀರನಹಳ್ಳಿ, ಹೊಂಕಣ, ಇನಾಂನೀರಲಗಿ, ಇನಾಂಯಲ್ಲಾಪೂರ ಗ್ರಾಮಗಳಲ್ಲಿ ಖಾಸಗಿ ಮೊಳವೆಬಾವಿ ಆಶ್ರಯಿಸಲಾಗಿದೆ.
ಸಮಸ್ಯಾತ್ಮಕ ಗ್ರಾಮಗಳಲ್ಲಿ ನೀರು ಪೂರೈಕೆಗಾಗಿ 152 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಚಂದ್ರಶೇಖರ ನೆಗಳೂರ ತಿಳಿಸಿದ್ದಾರೆ.

ಜೆಜೆಎಂ:

ತಾಲ್ಲೂಕಿನ 101 ಗ್ರಾಮಗಳಲ್ಲಿ ಜಲ ಜೀವನ್‌ ಮಿಷನ್‌ ಕಾಮಗಾರಿ ಪೂರ್ಣಗೊಂಡಿದ್ದು, ಈ ಯೋಜನೆಯ ಸಾರ್ಥಕತೆಗೆ ಕೆಲವು ನೀರಿನ ಕೊರತೆ ಕಾಡುತ್ತಿದೆ. ಇನ್ನೂ 65 ಗ್ರಾಮಗಳಲ್ಲಿ ಈ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ನೆಗಳೂರ ತಿಳಿಸಿದ್ದಾರೆ.

ಶುದ್ಧ ನೀರು ಇಲ್ಲ:

ತಾಲ್ಲೂಕಿನ 113 ಗ್ರಾಮಗಳಲ್ಲಿ 119 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ ಬಹುತೇಕ ಘಟಕಗಳು ಬಂದ್‌ ಸ್ಥಿತಿಯಲ್ಲಿವೆ. 28 ಘಟಕಗಳು ಮಾತ್ರ ಬಂದ್‌ ಸ್ಥಿತಿಯಲ್ಲಿವೆ. ದುರಸ್ತಿಗಾಗಿ ಹೊಸ ಏಜನ್ಸಿ ನೇಮಕಗೊಂಡಿದ್ದು, ದುರಸ್ತಿಗೆ ಬಂದಿರುವ ಘಟಕಗಳು ಪುನರ್‌ ಆರಂಭಗೊಳ್ಳುತ್ತವೆ ಎಂದು ನೆಗಳೂರ ತಿಳಿಸಿದ್ದಾರೆ.

ಸಮ್ಮಸಗಿ ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ. ಇವು ಬಂದ್‌ ಆಗಿ ಬಹಳ ದಿನಗಳು ಕಳೆದಿವೆ. ಗ್ರಾಮಸ್ಥರು ಈಗ ಈ ಘಟಕದ ನೀರು ಅವಲಂಬನೆಗೆ ಹೊಂದಿಕೊಂಡಿಲ್ಲ ಎಂದು ಗ್ರಾಮಸ್ಥ ಸಿದ್ಧು ಪಾಟೀಲ ಆಪಾಧಿಸಿದ್ದಾರೆ.

ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿ ಹೊಸೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗೊಂದಿ ಬಳಿಯ ವರದಾ ನದಿಗೆ ನಿರ್ಮಾಣಗೊಂಡ ಜಾಕ್‌ವೆಲ್‌ ಬಳಿ ನೀರು ನೆಲಕಚ್ಚಿದೆ
ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿ ಹೊಸೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗೊಂದಿ ಬಳಿಯ ವರದಾ ನದಿಗೆ ನಿರ್ಮಾಣಗೊಂಡ ಜಾಕ್‌ವೆಲ್‌ ಬಳಿ ನೀರು ನೆಲಕಚ್ಚಿದೆ

ಏನಂತಾರೆ...? ತುಂಗಭದ್ರಾ ನದಿ ನೀರು ಬಳಸಿಕೊಂಡು 4 ತಾಲ್ಲೂಕುಗಳ 291 ಗ್ರಾಮಗಳ ವ್ಯಾಪ್ತಿಯ ತಡಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಹಂತದಲ್ಲಿದ್ದು ಹಾನಗಲ್ ತಾಲ್ಲೂಕಿನ 112 ಗ್ರಾಮಗಳು ಈ ಯೋಜನೆಗೆ ಒಳಪಡಲಿವೆ. ಹಂಸಬಾವಿ ಬಹುಗ್ರಾಮ ಯೋಜನೆ ಮೂಲಕ ಹಾನಗಲ್‌ನ 16 ಗ್ರಾಮಗಳು ಕುಡಿಯುವ ನೀರು ಯೋಜನೆಯ ಲಾಭ ಪಡೆದುಕೊಳ್ಳಲಿವೆ.– ಚಂದ್ರಶೇಖರ ನೆಗಳೂರ ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ *** ಧರ್ಮಾ ಜಲಾಶಯದಿಂದ ಆನಿಕೆರೆಗೆ ನೀರು ಹರಿಸಲಾಗುತ್ತಿದೆ. ಈ ನೀರು ಮುಂದಿನ ಎರಡು ತಿಂಗಳು ಪಟ್ಟಣಕ್ಕೆ ನೀರು ಪೂರೈಕೆ ಮಾಡಲಿದೆ. ಜಲಾಶಯದಲ್ಲಿ ಹಾನಗಲ್ ಪಟ್ಟಣಕ್ಕಾಗಿ ಇನ್ನೂ 5 ಅಡಿಯಷ್ಟು ನೀರು ಮೀಸಲಿಡಲಾಗಿದೆ. ಹಾನಗಲ್‌ನ ನೀರು ಶುದ್ಧೀಕರಣ ಘಟಕಕ್ಕೆ ವಿದ್ಯುತ್‌ ಪೂರೈಕೆಯಲ್ಲಿನ ವ್ಯತ್ಯಯದಿಂದ ನಿಗದಿತ ಸಮಯದಲ್ಲಿ ನಲ್ಲಿ ನೀರು ಹರಿಸಲು ಅಡಚಣೆಯಾಗುತ್ತಿದೆ. – ಜಗದೀಶ ವೈ.ಕೆ ಪುರಸಭೆ ಮುಖ್ಯಾಧಿಕಾರಿ

‘ಹಾನಗಲ್‌ ಪಟ್ಟಣಕ್ಕೆ ವಾರಕ್ಕೊಮ್ಮೆ ನೀರು’ ಹಾನಗಲ್ ಪಟ್ಟಣಕ್ಕೆ 5 ದಿನಕ್ಕೊಮ್ಮೆ ಬರುತ್ತಿದ್ದ ನಲ್ಲಿ ನೀರು ಈಗ ವಾರಕ್ಕೊಮ್ಮೆ ಬರುತ್ತಿದೆ. ನೀರು ಪೂರೈಕೆಯ ಆಸರೆಯಾದ ಬೃಹತ್‌ ಆನಿಕೆರೆಯಲ್ಲಿ ನೀರು ನೆಲಕಚ್ಚಿದೆ. ವಾರದಲ್ಲಿ ಒಂದು ಬಾರಿ ಅದು ಒಂದು ಗಂಟೆ ಮಾತ್ರ ನಲ್ಲಿ ನೀರು ಪೂರೈಕೆಯಾಗುತ್ತಿದೆ ಎಂದು ನಿವಾಸಿ ಗಂಗಾಧರ ಹೇಳಿದ್ದಾರೆ. ಮೂರು ಕೊಳವೆಬಾವಿಗಳು ಪಟ್ಟಣದ ಹಲವು ಬಡಾವಣೆಗಳಿಗೆ ನೀರು ಪೂರೈಸುತ್ತಿವೆ. 98 ಕಿರು ನೀರು ಸರಬರಾಜು ಘಟಕಗಳು ಅಲ್ಲಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಹಕಾರಿಯಾಗಿವೆ. ಮುಖ್ಯ ರಸ್ತೆ ನಿರ್ಮಾಣದ ಕಾಮಗಾರಿ ಕಾರಣಕ್ಕಾಗಿ ಆಗಾಗ ನೀರು ಪೂರೈಕೆಯ ಪೈಪ್‌ಲೈನ್‌ ದುರಸ್ತಿಗೆ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT