ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಸಿದ್ದನ್ನು ಬರೆಯಲಾಗದ ಕಾಲದಲ್ಲಿದ್ದೇವೆ: ಜಿ.ಎನ್‌.ಮೋಹನ್‌

ತಂತಿ ತಂತಿಗೆ ತಾಗಿ ಕವನ ಸಂಕಲನ ಬಿಡುಗಡೆ: ಜಿ.ಎನ್‌.ಮೋಹನ್‌ ಅಭಿಮತ
Last Updated 20 ಡಿಸೆಂಬರ್ 2020, 13:52 IST
ಅಕ್ಷರ ಗಾತ್ರ

ಹಾವೇರಿ: ‘ಅನಿಸಿದ್ದನ್ನು ಆಡಲಾಗದ ಉಸಿರುಗಟ್ಟಿಸುವ ಸಂದರ್ಭದಲ್ಲಿ ಕವಿತೆಯನ್ನೂ ಬರೆಯಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಹಸಿವಿನಿಂದಾಗಿ ಜನರು ಬೀದಿಗೆ ಬರುತ್ತಿದ್ದಾರೆ. ಮಾತಿನ ಮೇಲೆ ಭಯ ಆವರಿಸಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಕಾವ್ಯ ನಮ್ಮ ಕೈದೀಪವಾಗಬೇಕು’ ಎಂದು ಲೇಖಕ ಹಾಗೂ ‘ಅವಧಿ’ ಸಂಪಾದಕ ಜಿ.ಎನ್‌.ಮೋಹನ್‌ ಹೇಳಿದರು.

ನಗರದ ನಂದಿ ಬಡಾವಣೆಯಲ್ಲಿರುವ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಭಾನುವಾರ ಏರ್ಪಡಿಸಿದ್ದ ದೀಪಾ ಗೋನಾಳ ಅವರ ಚೊಚ್ಚಲ ಕವನಸಂಕಲ ‘ತಂತಿ ತಂತಿಗೆ ತಾಗಿ...’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕವಿತೆ ಸದಾ ಕನಸುಗಳ ಕೋಟೆಯಲ್ಲಿ ಇರಲು ಸಾಧ್ಯವಿಲ್ಲ. ಭ್ರಮೆಯ ಲೋಕದಿಂದ ಆಚೆ ಬಂದು ವಾಸ್ತವಕ್ಕೆ ಸ್ಪಂದಿಸಿ, ಪ್ರಚಲಿತ ಸಮಸ್ಯೆಗಳಿಗೆ ಕನ್ನಡಿ ಹಿಡಿಯಬೇಕು. ಇಂದಿನ ಕಾಲಘಟ್ಟ ಎಲ್ಲರನ್ನೂ ಬೀದಿಗೆ ತಂದು ನಿಲ್ಲಿಸಿದೆ. ರೈತರು ಹೊಲ– ಗದ್ದೆ ಬಿಟ್ಟು ರಸ್ತೆ ಮೇಲೆ ನಿಂತಿದ್ದಾರೆ. ಕವಿತೆಯ ಮೇಲೆ ಭಯದ ಪಹರೆ ಹರಡುವ ಕಾಲದಲ್ಲಿದ್ದೇವೆ. ಇಂಥ ಹೊತ್ತಿನಲ್ಲಿ ದೀಪಾ ಅವರು ಅನಿಸಿದ್ದನ್ನು ಗಟ್ಟಿ ಧ್ವನಿಯಲ್ಲಿ ಕಾವ್ಯದ ಮೂಲಕ ಪ್ರಸ್ತುತಪಡಿಸಿರುವುದು ಮೆಚ್ಚುವಂಥದ್ದು’ ಎಂದರು.

ಹಿರಿಯ ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಯಾವುದೇ ಸಾಹಿತ್ಯ ಅಥವಾ ಕಲೆಯೇ ಆಗಲಿ ಹೊಸತನದಿಂದ ಬರಬೇಕು. ಯುವ ಕವಯತ್ರಿ ದೀಪಾ ಅವರು ಸಮಕಾಲೀನ ಸ್ಥಿತ್ಯಂತರಗಳಿಗೆ ಸ್ಪಂದಿಸಿ ಕಾವ್ಯ ರಚಿಸಿದ್ದಾರೆ’ ಎಂದರು.

ಪುಸ್ತಕ ಪರಿಚಯವನ್ನು ಮಾಡಿಕೊಟ್ಟ ಹಿರಿಯ ಕವಿ ಸತೀಶ ಕುಲಕರ್ಣಿ ಅವರು ‘ನಿಜ ಜೀವನದಲ್ಲಿರುವಂತೆ ದೀಪಾ ಗೋನಾಳ ಕವಿತೆಗಳಲ್ಲೂ ನಿರ್ಭೀತಿಯಿಂದ ಅಭಿವ್ಯಕ್ತಿ ಕೊಟ್ಟಿದ್ದಾರೆ. ಪ್ರಾದೇಶಿಕ ಭಾಷಾ ಸೊಗಡು ಮತ್ತು ನುಡಿಗಟ್ಟುಗಳೇ ದೀಪಾ ಕಾವ್ಯದ ಛಂದಸ್ಸು’ ಎಂದರು.

ಕವಯತ್ರಿ ದೀಪಾ ಗೋನಾಳ ಮಾತನಾಡಿ, ‘ನಾನು ನೋಡಿದ ನಿತ್ಯ ಜೀವನದ ಸಮಯ ಸಂದರ್ಭ ಸನ್ನವೇಶಗಳೇ ನನ್ನ ಕಾವ್ಯದ ವಸ್ತುಗಳು. ನನ್ನ ಕವಿತೆ ನನ್ನ ಅಂತರಂಗದ ಮಾತು. ಹಾವೇರಿ ನೆಲ ನನಗೆ ಸಾಕಷ್ಟು ಪ್ರೇರಣೆ ಕೊಟ್ಟಿದೆ’ ಎಂದರು.

ನಾಗೇಂದ್ರ ಕಟಕೋಳ, ನಿವೃತ್ತ ಅಂಚೆ ಇಲಾಖೆಯ ಅಧಿಕಾರಿ ಆರ್.ಜೆ ಬ್ಯಾಟಪ್ಪನವರ, ಯುವ ಕವಿ ರಾಜಕುಮಾರ ಮಡಿವಾಳರ, ಅಂಕಣಕಾರ್ತಿ ಹೇಮಾ ಖುರ್ಸಾಪೂರ ಹಾಗೂ ಪ್ರವೀಣ ಸುಲಾಖೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT