ಸೋಮವಾರ, ಸೆಪ್ಟೆಂಬರ್ 26, 2022
22 °C
10 ಸಾವಿರ ಮಂದಿಯಿಂದ ಯೋಗ ಪ್ರದರ್ಶನದ ನಿರೀಕ್ಷೆ : ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಸೆ.17ರಂದು ವಿಶ್ವ ದಾಖಲೆಗಾಗಿ ಯೋಗಥಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ವಿಶ್ವದಾಖಲೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಯೋಗಥಾನ್ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಸೆ.17ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಮರಣಾರ್ಥವಾಗಿ ಯೋಗಾಸನ ವಿಶ್ವ ಗಿನ್ನಿಸ್ ದಾಖಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಯೋಗಥಾನ್ ಆಯೋಜನೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಕನಿಷ್ಠ 10 ಸಾವಿರ ಜನರು ಯೋಗಥಾನ್ ಪ್ರದರ್ಶನದಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಯೋಗಥಾನ್‍ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಸಂಘ-ಸಂಸ್ಥೆಗಳು ಹಾಗೂ ಯೋಗ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಸ್ವ–ಇಚ್ಛೆಯಿಂದ ಭಾಗವಹಿಸಬೇಕು. ಯೋಗ ಪ್ರದರ್ಶನಕ್ಕೆ ಅಗತ್ಯವಾದ ಮ್ಯಾಟ್‍ಗಳನ್ನು ಯೋಗಪಟುಗಳೇ ತರಬೇಕು. ಯೋಗ ಪ್ರದರ್ಶನದಲ್ಲಿ ಭಾಗವಹಿಸುವವರಿಗೆ ಯಾವುದೇ ಪ್ರಯಾಣ ಭತ್ಯೆಯಾಗಲಿ, ವಾಹನ ವ್ಯವಸ್ಥೆಯಾಗಲಿ ಇರುವುದಿಲ್ಲ ಎಂದು ತಿಳಿಸಿದರು.

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಥಾನ್ ಕಾರ್ಯಕ್ರಮವನ್ನು ಆಯೋಜಿಸಲು ಪೂರ್ವ ನಿಗದಿ ಮಾಡಲಾಗಿತ್ತು. ಆದರೆ ಅಗ್ನಿಪಥ್ ಸೇನಾ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ರಾಣೆಬೆನ್ನೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಯೋಗಥಾನ್ ಕಾರ್ಯಕ್ರಮವನ್ನು ಸೆ.17 ರಂದು ನಡೆಸಲು ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. 45 ನಿಮಿಷಗಳ ಕಾಲ ವಿವಿಧ ಯೋಗ ಆಸನಗಳನ್ನು ಯೋಗ ಮಾಸ್ಟರ್‌ಗಳ ಮಾರ್ಗದರ್ಶನದಲ್ಲಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಕ್ರೀಡಾಂಗಣದಲ್ಲಿ ಸ್ವಚ್ಛತೆ, ಸಮತಟ್ಟು, ಮಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣದ ಒಳಪ್ರದೇಶ ಹಾಗೂ ಹೊರ ಹೋಗಲು ಮಾರ್ಗಸೂಚಿಗಳ ಅಳವಡಿಕೆ, ಬ್ಯಾರಿಕೇಡ್ ವ್ಯವಸ್ಥೆ, ಮೊಬೈಲ್ ಶೌಚಾಲಯ ವ್ಯವಸ್ಥೆ, ಸ್ಟೇಜ್, ಬ್ಯಾನರ್, ಮೈಕಿಂಗ್, ಚೇರ್, ಪೊಲೀಸ್ ಬಂದೋಬಸ್ತ್‌, ಆಂಬುಲೆನ್ಸ್‌ ವ್ಯವಸ್ಥೆ, ತಾತ್ಕಾಲಿಕ ವೈದ್ಯಕೀಯ ಕ್ಲಿನಿಕ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಭಾಗವಹಿಸುವ ಯೋಗಪಟುಗಳಿಗೆ, ಹಾಲು, ಬಿಸ್ಕಿಟ್‌, ಹಣ್ಣಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು, ಯೋಗ ಮಾಸ್ಟರ್, ಎನ್.ಸಿ.ಸಿ., ಎನ್.ಎಸ್.ಎಸ್. ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ನಿಯೋಜಿಸಿ ವ್ಯವಸ್ಥಿತವಾಗಿ ಯೋಗಥಾನ್ ಕಾರ್ಯಕ್ರಮವನ್ನು ಆಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌, ಜಿಲ್ಲಾ ಆಯುಷ್ ಅಧಿಕಾರಿ ನಿಡಗುಂದಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ, ಯೋಗ ಮಾಸ್ಟರ್ ಪ್ರೇಮಕುಮಾರ ಮುದ್ದಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.