ಮಂಗಳವಾರ, ಮೇ 17, 2022
24 °C
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಏಕನಾಥ ಬಾನುವಳ್ಳಿ ಎಚ್ಚರಿಕೆ

‘ಅನುದಾನ ಕಡಿತಗೊಂಡರೆ ಸಂಬಳದಿಂದ ವಸೂಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಈ ಆರ್ಥಿಕ ವರ್ಷದ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಬಿಡುಗಡೆಯಾದ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕು. ಅನುದಾನ ಬಳಕೆ ಮಾಡದಿದ್ದರೆ ಕಡಿತಗೊಂಡ ಅನುದಾನವನ್ನು ಸಂಬಂಧಿಸಿದ ಅಧಿಕಾರಿಗಳ ಸಂಬಳದಿಂದ ವಸೂಲು ಮಾಡಲಾಗುವುದು’ ಎಂದು ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

‘ಕಾಡಾದಿಂದ ರಾಣೆಬೆನ್ನೂರು ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ನೀಡುವುದಿಲ್ಲ. ಪ್ರಗತಿ ಪರಿಶೀಲನಾ ಸಭೆಗಳಿಗೂ ಹಾಜರಾಗುವುದಿಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿದ ಅಧ್ಯಕ್ಷರು, ಕಾಡಾ ಎಂಜಿನಿಯರ್‌ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ಆರೋಪಗಳು ಕೇಳಿಬರುತ್ತಿವೆ. ಎಲ್ಲೆಲ್ಲಿ ಕಾಮಗಾರಿ ನಡೆಸಲಾಗಿದೆ’ ಎಂದು ಮಾಹಿತಿ ಸಲ್ಲಿಸಲು ತಾಕೀತು ಮಾಡಿದರು.

ತುಂಗಾ ಮೇಲ್ದಂಡೆ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯ ಪ್ರಗತಿ ಮಾಹಿತಿ ಪಡೆದ ಅವರು ಕೆರೆ ತುಂಬಿಸುವ ಯೋಜನೆಗಳಲ್ಲಿ ಕೆಲ ಲೋಪಗಳು ಕಂಡುಬಂದಿದ್ದು, ಸರಿಪಡಿಸುವಂತೆ ಸೂಚನೆ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣ ಮಾಡಿರುವ ರಸ್ತೆಗಳ ನಿರ್ವಹಣೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಯೋಜನೆಯಡಿ ನಿರ್ಮಾಣ ಮಾಡಿರುವ ರಸ್ತೆಗಳು, ಬಿಡುಗಡೆಯಾದ ಅನುದಾನ, ನಿರ್ವಹಣಾ ವೆಚ್ಚ, ಪ್ರಸ್ತುತ ಕಾಮಗಾರಿಗಳ ಸ್ಥಿತಿಗತಿಗಳ ಕುರಿತಂತೆ ವರದಿ ನೀಡುವಂತೆ ಎಂಜಿನಿಯರ್‌ಗೆ ಸೂಚನೆ ನೀಡಿದರು.

ನಿರ್ಮಿತಿ ಕೇಂದ್ರಕ್ಕೆ ವಹಿಸಲಾದ ಆರೋಗ್ಯ ಇಲಾಖೆಯ ಉಪಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಮಗಾರಿಗಳ ವಿಳಂಬ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಮೊಹಮ್ಮದ್‌ ರೋಶನ್‌ ಅವರು, ಕೆಲ ಕಾಮಗಾರಿಗಳು ತೀವ್ರ ಕಳಪೆಯಾಗಿರುವ ಕುರಿತಂತೆ ಆಕ್ಷೇಪಣೆ ವ್ಯಕ್ತಪಡಿಸಿದರು. ಗುಣಮಟ್ಟ ಹಾಗೂ ಯೋಜಿತ ಮಾದರಿಯಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಒಂದು ವಾರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜನಾ ನಿರ್ದೇಶಕರಿಗೆ ತಾಕೀತು ಮಾಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ವೋಲ್ಟೆಜ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಒಪ್ಪಂದ ಪ್ರಕಾರ ಡೆಡಿಕೇಟೆಡ್ ಎಕ್ಸಪ್ರೆಸ್ ಮಾರ್ಗದಿಂದ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು. ಈ ಕುರಿತಂತೆ ಕ್ರಮವಹಿಸಿ ಇಲ್ಲವಾದರೆ ಸರ್ಕಾರದ ಗಮನ ಸೆಳೆಯುವುದಾಗಿ ಹೆಸ್ಕಾಂ ಎಂಜಿನಿಯರ್‌ಗೆ ಸಿಇಒ ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು