ಮಂಗಳವಾರ, ಏಪ್ರಿಲ್ 7, 2020
19 °C

ಚರಿತ್ರೆ ಕಟ್ಟುವ ಇಟ್ಟಿಗೆ ಶಾಸನ: ಸಂಶೋಧಕ ಡಾ. ಬಿ. ರಾಜಶೇಖರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ಯಾವುದೇ ಇತಿಹಾಸ ಸಂಶೋಧಕ ಸುಳ್ಳು ಹೇಳುವುದಿಲ್ಲ. ಸತ್ಯ ಹೇಳುವ ಧಾವಂತದಲ್ಲಿ ತಪ್ಪಾಗಬಹುದು ಅಷ್ಟೆ ಎಂದು ಹಿರಿಯ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅಭಿಪ್ರಾಯಪಟ್ಟರು.

ಸಮೀಪದ ತಾಳಗುಂದ ಗ್ರಾಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡ ಶಾಸನಗಳಲ್ಲಿ ಸಾಹಿತ್ಯ’ ವಿಷಯ ಕುರಿತ ಮೂರು ದಿನಗಳ ರಾಜ್ಯಮಟ್ಟದ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

ಶಾಸನಗಳು ಅಮೂಲ್ಯ ವಸ್ತುಗಳು. ಈ ಶಾಸನಗಳು ಚರಿತ್ರೆಯನ್ನು ಕಟ್ಟುವ ಇಟ್ಟಿಗೆಗಳಾಗಿವೆ. ಅವುಗಳನ್ನು ಉಳಿಸ
ಬೇಕಾಗಿದೆ. ಶಾಸನಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ನಡೆಗಳನ್ನು ಕಾಣಬಹುದು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್, ‘ತಾಳಗುಂದ ಈ ನಾಡಿನ ಆಸ್ತಿ. ಇಲ್ಲಿ ಬಗೆದಷ್ಟೂ ಇತಿಹಾಸವನ್ನು ಕಾಣಬಹುದು. ಇತಿಹಾಸದ ಆಳಕ್ಕಿಳಿದು ಕೆದಕಿದಾಗ ನಮ್ಮಲ್ಲಿ ಜಾತಿ, ಧರ್ಮ, ವರ್ಣಗಳ ಭೇದ–ಭಾವ ತೊಡೆದು ಹಾಕಲು ಸಾಧ್ಯವಾಗುತ್ತದೆ. ಚರಿತ್ರೆಯ ರಚನೆಗಿಂತ ಅದರ ಹಿಂದಿನ ತತ್ವಜ್ಞಾನದ ದರ್ಶನವನ್ನು ಮಾನವ ಸಮಾಜಕ್ಕೆ ಮಾಡಿಸಬೇಕಾಗಿದೆ. ದೊಡ್ಡ ನಾಡುಗಳನ್ನು ಕಟ್ಟಬೇಕಾದರೆ ದೊಡ್ಡ ಮನಸ್ಸುಗಳಿರುವ ದೊಡ್ಡ ಮನುಷ್ಯರು ಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ನಿರ್ದೇಶಕಿ ಹನುಮಾಕ್ಷಿ ಗೋಗಿ, ‘ಕರ್ನಾಟಕದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಶಾಸನಗಳನ್ನು ಇಲ್ಲಿಯವರೆಗೂ ಪತ್ತೆಹಚ್ಚಿ ದಾಖಲಿಸಲಾಗಿದೆ. ಆ ಶಾಸನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪದ್ಯಗಳು ಇವೆ. ಈ ಶಾಸನಗಳ ದಾಖಲೀಕರಣವನ್ನು ಮೊದಲು ವಿದೇಶೀಯರು ಪ್ರಾರಂಭ ಮಾಡಿದರು. ನಂತರ ಕರ್ನಾಟಕದಲ್ಲಿ ದಿ. ಚಿದಾನಂದ ಮೂರ್ತಿ, ಎಂ.ಎಂ. ಕಲಬುರ್ಗಿ ರಾಜಮನೆತನಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚರಿತ್ರೆಯನ್ನು ತೆರೆದಿಟ್ಟರು’ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 70ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಾಚಾರ್ಯ ಪ್ರೊ. ಪರಮೇಶ ಹ.ಮಸಲವಾಡ, ರಿಜಿಸ್ಟ್ರಾರ್ ಎನ್. ಕರಿಯಪ್ಪ, ಸಹ ಶಿಬಿರಾಧಿಕಾರಿ ಡಾ.ಟಿ.ಆರ್. ಗುರುಪ್ರಸಾದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಂಭು ಭಾಗವಹಿಸಿದ್ದರು.

ಸೃಷ್ಟಿ ನಿರೂಪಿಸಿದರು. ಎನ್.ಕರಿಯಪ್ಪ ಸ್ವಾಗತಿಸಿದರು. ಪಾಂಡುರಂಗ ಗೌಡ ವಂದಿಸಿದರು.

ಮೊದಲ ದಿನದ ಗೋಷ್ಠಿ: ‘ಕನ್ನಡ ಶಾಸನಗಳಲ್ಲಿ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ‘ಆರಂಭದ ಕನ್ನಡ ಶಾಸನಗಳು ಮತ್ತು ಸಾಹಿತ್ಯ‘ ವಿಷಯದ ಬಗ್ಗೆ ಡಾ. ಪರಶಿವಮೂರ್ತಿ ಹಾಗೂ ‘ಕನ್ನಡ ಶಾಸನಗಳ ಮಹತ್ವ’ ಎಂಬ ವಿಷಯದ ಬಗ್ಗೆ ಡಾ.ಎನ್.ಎಸ್. ತಾರಾನಾಥ್ ಗೋಷ್ಠಿ ನಡೆಸಿಕೊಟ್ಟರು.

ಇಂದಿನ ಗೋಷ್ಠಿ: ಬಳ್ಳಿಗಾವಿ, ತಾಳಗುಂದ ಹಾಗೂ ಬಂದಳಿಕೆಯ ಕ್ಷೇತ್ರ ದರ್ಶನ ನಡೆಯಲಿದೆ. ‘ಬಳ್ಳಿಗಾವೆಯ ಶಾಸನಗಳು ಮತ್ತು ಮಹತ್ವ” ಎಂಬ ವಿಷಯದ ಬಗ್ಗೆ ಮೈಸೂರು ಪ್ರಸಾರಾಂಗದ ನಿರ್ದೇಶಕ ಡಾ. ಎಂ.ಜಿ. ಮಂಜುನಾಥ್, ‘ತಾಳಗುಂದದ ಶಾಸನಗಳು ಮತ್ತು ಮಹತ್ವ’ ಕುರಿತು ಶಾಸನ ತಜ್ಞರು ರಮೇಶ ಹಿರೇಜಂಬೂರು, ‘ಬಂದಳಿಕೆ ಶಾಸನಗಳು ಮತ್ತು ಮಹತ್ವ’ ಕುರಿತು ಶಿವಮೊಗ್ಗದ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ಉಪನ್ಯಾಸ ನೀಡಲಿದ್ದಾರೆ. ಡಾ.ಟಿ.ಆರ್. ಗುರುಪ್ರಸಾದ್ ‘ಶಾಸನ ವಾಚಿಕೆ’ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು