ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಭ್ಯರ್ಥಿಗೆ ದೂರುಗಳ ಸುರಿಮಳೆ

ರಾಮನಗರದಲ್ಲಿ ಅನಿತಾ ಪ್ರಚಾರ: ಸಂಸದ ಸುರೇಶ್‌ ಸಾಥ್‌
Last Updated 30 ಅಕ್ಟೋಬರ್ 2018, 13:59 IST
ಅಕ್ಷರ ಗಾತ್ರ

ರಾಮನಗರ: ಮೈತ್ರಿಕೂಟದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಗರ ವ್ಯಾಪ್ತಿ ಹಾಗೂ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರೊಡನೆ ಮಂಗಳವಾರ ಪ್ರಚಾರ ನಡೆಸಿದರು.

ಇಲ್ಲಿನ ವಿಜಯನಗರದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅವರು ಪ್ರಚಾರ ಆರಂಭಿಸಿದರು. ಈ ಸಂದರ್ಭ ಮಾತನಾಡಿ ‘ನಗರ ವ್ಯಾಪ್ತಿಯಲ್ಲಿ ₹4 ಕೋಟಿ ವೆಚ್ಚದಲ್ಲಿ ಓವರ್ ಹೆಡ್‌ ಟ್ಯಾಂಕ್‌ಗಳ ನಿರ್ಮಾಣ, ₨25 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದೆ’ ಎಂದರು.

‘₹5100 ಹಣ ಕಟ್ಟಿದವರಿಗೆ ಮನೆ ಮಂಜೂರು ಮಾಡಲಾಗುವುದು. ಕೊತ್ತೀಪುರದ ಬಳಿ 7.5 ಏಕರೆ ಪ್ರದೇಶದಲ್ಲಿ 1400 ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಹಳ್ಳಿಮಾಳ ಗ್ರಾಮದ ಬಳಿ 65 ಏಕರೆ ಪ್ರದೇಶವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು 3 ಸಾವಿರ ನಿವೇಶನಗಳನ್ನು ಉಚಿತವಾಗಿ ಬಡವರಿಗೆ ವಿತರಿಸಲಾಗುವುದು’ ಎಂದು ತಿಳಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ ‘ರಾಮನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿ ಪಾತ್ರವನ್ನು ಅಭಿವೃದ್ದಿ ಪಡಿಸಿ, ಸುಂದರ ಹಾಗೂ ವಿಹಾರ ತಾಣವನ್ನಾಗಿ ರೂಪಿಸಲು ಮುಖ್ಯಮಂತ್ರಿ ಅವರು ಸಂಕಲ್ಪಿಸಿದ್ದಾರೆ. ನದಿ ಪಾತ್ರದ ಎರಡೂ ದಡಗಳಲ್ಲಿ ಉದ್ಯಾನವನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ದೂರುಗಳ ಸುರಿಮಳೆ: ಒಂದನೇ ವಾರ್ಡಿನ ಚಾಮುಂಡಿಪುರದ ನಾಗರಿಕರು ಸ್ಮಶಾನ ಕೊರತೆ ಇರುವ ಬಗ್ಗೆ ಏರುದನಿಯಲ್ಲೇ ಪ್ರಶ್ನಿಸಿದರು. ಹದಗೆಟ್ಟು ಹೋಗಿರುವ ರಸ್ತೆಯ ಬಗ್ಗೆಯೂ ಗಮನ ಸೆಳೆದರು.

ವಿವಿಧ ವಾರ್ಡ್‌ಗಳಲ್ಲಿ ಪ್ರಚಾರದ ವೇಳೆ ಜನರು ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. 5 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಲಮಂಡಳಿ ತಾವು ಪೂರೈಸುತ್ತಿರುವ ನೀರು ಕುಡಿಯಲು, ಅಡುಗೆಗೆ ಯೋಗ್ಯವಲ್ಲ ಎಂದು ಎಚ್ಚರಿಸಿದ್ದಾರೆ. ಇತ್ತ ಕುಡಿಯಲು ಯೋಗ್ಯವಲ್ಲದ ನೀರಿಗೆ ಮಾಸಿಕ ₹220 ನೀಡುತ್ತಿದ್ದೇವೆ ಎಂದು ತಿಳಿಸಿದರು.

ದಿನನಿತ್ಯ ಕುಡಿಯುವ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಹೊತ್ತು ತರುವುದೇ ಕುಟುಂಬದಲ್ಲಿ ಒಬ್ಬರಿಗೆ ಕಾಯಕವಾಗಿದೆ, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ನಗರಸಭೆ ಮತ್ತು ಶಾಸಕರ ಪ್ರಯತ್ನ ಇಲ್ಲವೇ ಇಲ್ಲ ಎಂದು ಹರಿಹಾಯ್ದರು.

ಮನೆ ರಹಿತ ಕುಟುಂಬಗಳ ಸದಸ್ಯರು ತಾವು ದಶಕದ ಹಿಂದೆ ₹5100 ಪಾವತಿಸಿದರುವುದಾಗಿ ಮನೆಯನ್ನು ಕೊಟ್ಟಿಲ್ಲ. ನಿವೇಶನ ಇಲ್ಲದ ಕುಟುಂಬಗಳಿಗೆ ನಿವೇಶನವನ್ನು ಕೊಟ್ಟಿಲ್ಲ, ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿಲ್ಲ ಎಂದು ಹಲವು ಸಮಸ್ಯೆಗಳನ್ನು ಅಭ್ಯರ್ಥಿಗೆ ತಿಳಿಸಿದರು.

ನಗರ ವ್ಯಾಪ್ತಿಯ 31 ವಾರ್ಡ್‌ಗಳು ಹಾಗೂ ಕಸಬಾ ಹೋಬಳಿಯ ಹಲವು ಗ್ರಾಮಗಳಲ್ಲಿ ಪ್ರಚಾರ ನೆಡೆಸಿದರು. ನಗರಸಭೆ ಸದಸ್ಯ ಡಿ.ಕೆ. ಶಿವಕುಮಾರ್, ಮುಖಂಡರಾದ ರಾಜಶೇಖರ್, ವೆಂಕಟೇಶ್ ಇದ್ದರು.

*
₹5100 ಹಣ ಕಟ್ಟಿದವರಿಗೆ ಮನೆ ಮಂಜೂರು ಮಾಡಲಾಗುವುದು. ಬಡವರಿಗೆ ನಿವೇಶನ ಹಂಚಲು ಸಿದ್ಧತೆ ನಡೆದಿದೆ.
–ಅನಿತಾ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT