ಬುಧವಾರ, ಸೆಪ್ಟೆಂಬರ್ 29, 2021
20 °C
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ಮಹತ್ವದ ಯೋಜನೆ

ಕಲಬುರ್ಗಿ: ದೇಸಿ ಹಸುವಿನ ತಳಿ ವೃದ್ಧಿಗೆ 100 ಕೇಂದ್ರ

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಬಿಸಿಲನ್ನು ತಾಳಿಕೊಳ್ಳಬಲ್ಲ ಶುದ್ಧ ದೇಸಿ ತಳಿಯ ಹಸುಗಳನ್ನು ಬೆಳೆಸಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘವು ಯೋಜನೆ ರೂಪಿಸಿದೆ. ತಳಿ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯ ಹೊಂದಿದ ರೈತ ಕುಟುಂಬಗಳಿಗೆ ಧನಸಹಾಯ ನೀಡಲಿದೆ.

ಕೆಲ ಕಡೆಗಳಲ್ಲಿ ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ಒಟ್ಟಾರೆ 100 ಕೇಂದ್ರಗಳಿಗೆ ಗರಿಷ್ಟ ತಲಾ ₹ 15 ಲಕ್ಷ ಆರ್ಥಿಕ ನೆರವು ನೀಡಲಿದೆ. ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಗೆ ಎರಡರಂತೆ ಪ್ರಸಕ್ತ ವರ್ಷ 16 ಕಡೆ ದೇಸಿ ಗೋವಿನ ತಳಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಮುಖ್ಯವಾಗಿ ದೇವಣಿ, ಕಿಲಾರಿ, ಹಳ್ಳಿಕಾರ್ ತಳಿಗಳನ್ನು ರೈತರು ಹೆಚ್ಚು ಬಳಕೆ ಮಾಡುತ್ತಿದ್ದು, ಹೈನುಗಾರಿಕೆ ಹಾಗೂ ವ್ಯವಸಾಯಕ್ಕೆ ಇವುಗಳನ್ನೇ ನೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕದ ಹವಾಮಾನಕ್ಕೆ ಹೊಂದಿಕೊಳ್ಳಬಲ್ಲ ದೇವಣಿ ತಳಿಯ ಅಭಿವೃದ್ಧಿಗೆ ಸಂಘವು ವಿಶೇಷ ಆಸಕ್ತಿ ವಹಿಸಿದೆ.

ಮಾನದಂಡಗಳೇನು?: ದೇವಣಿ ಹಸುವಿನ ತಳಿ ಅಭಿವೃದ್ಧಿಗೆ ರೈತರು ಅರ್ಜಿ ಸಲ್ಲಿಸಬಹುದು. ಅದರೆ, ಅವರ ಬಳಿ ಈಗಾಗಲೇ ದೇವಣಿ ತಳಿಯ ಆಕಳು ಅಥವಾ ಹೋರಿ ಇರಬೇಕು. ಅಲ್ಲದೇ, ಹಸು, ಹೋರಿಗಳನ್ನು ಸಾಕಲು ಅಗತ್ಯ ಜಾಗ, ಮೇವು, ಕುಡಿಯುವ ನೀರಿನ ವ್ಯವಸ್ಥೆ ಹೊಂದಿರಬೇಕು. ದೇವಣಿ ತಳಿಯ ಹಸು, ಹೋರಿಗಳನ್ನು ಬೇರೆ ತಳಿಯೊಂದಿಗೆ ಕೂಡಿಸಬಾರದು.

ಅಂತಹ ರೈತರ ಜಮೀನುಗಳಿಗೆ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಪರಿಣಿತರ ತಂಡ ತೆರಳಿ ಪರಿಶೀಲಿಸುತ್ತದೆ. ಆ ರೈತ ಹಸುಗಳನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆ ಬಂದರೆ, ಸಂಘದಿಂದ ಒಂದೇ ಬಾರಿ ಆರ್ಥಿಕ ನೆರವನ್ನು ನೀಡಲಾಗುತ್ತದೆ.

‘ದೇಸಿ ಗೋತಳಿಗಳನ್ನು ವೃದ್ಧಿಪಡಿಸುವ ಮೂಲಕ ಹೈನುಗಾರಿಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಗೋವುಗಳನ್ನು ಸಾಕುವ ಕುಟುಂಬಗಳು ಆರ್ಥಿಕವಾಗಿ ಸಬಲರಾಗಬಹುದು. ಗೋತಳಿಗಳನ್ನು ರಕ್ಷಿಸಲು ಮುಂದೆ ಬರುವ ರೈತರಿಗೆ ಸಂಘದಿಂದ ಒಂದು ಬಾರಿ ಆರ್ಥಿಕ ನೆರವು ನೀಡಲಾಗುವುದು’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರು ಕಡ್ಡಾಯವಾಗಿ ಐದಾರು ವರ್ಷಗಳವರೆಗಾದರೂ ಗೋವುಗಳನ್ನು ಪಾಲನೆ ಮಾಡಬೇಕು. ದೇವಣಿ ತಳಿಯು ಈ ಭಾಗದಲ್ಲಿ ಜನಪ್ರಿಯವಾಗಿದ್ದು, ಗೋವುಗಳನ್ನು ಸಾಕುವವರಿಗೆ ಆ ತಳಿಯ ಗೋವು ಅಥವಾ ಹೋರಿಯನ್ನು ಖರೀದಿಸಲು ಹಣಕಾಸು ನೆರವು ನೀಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು