ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | 1,500 ಕ್ಯುಸೆಕ್ ಒಳ ಹರಿವು: ಭರ್ತಿ ಅಂಚಿನಲ್ಲಿ ನಾಗರಾಳ‌ ಜಲಾಶಯ

Published 14 ಜೂನ್ 2024, 4:51 IST
Last Updated 14 ಜೂನ್ 2024, 4:51 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ‌ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ‌ ಜಲಾಶಯ ಭರ್ತಿ ಅಂಚಿಗೆ ತಲುಪಿದ್ದು, ಜಲಾಶಯಕ್ಕೆ 1,500 ಕ್ಯುಸೆಕ್ ಒಳ ಹರಿವಿದೆ.

ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 491 ಮೀಟರ್ ಹೊಂದಿದ್ದು ಸದ್ಯ ಜಲಾಶಯದ ನೀರಿನ‌ ಮಟ್ಟ 490 ಮೀಟರ್ ತಲುಪಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ‌ ಮಳೆಯಾಗಿದ್ದರಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಈಗಿರುವ ಒಳ ಹರಿವು ಮುಂದುವರಿದರೆ ಶನಿವಾರ ಸಂಜೆಗೆ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.

ಮಳೆಗಾಲ‌ ಪೂರ್ವದಲ್ಲಿ ಜಲಾಶಯದ ನೀರಿನ‌ಮಟ್ಟ 488 ಮೀಟರ್ ತಲುಪಿತ್ತು. ಗುರುವಾರ ರಾತ್ರಿ ಚಿಂಚೋಳಿ 105 ಕುಂಚಾವರಂ 70, ಚಿಮ್ಮನಚೋಡ 64, ಐನಾಪುರ 56, ಸುಲೇಪೇಟದಲ್ಲಿ 38 ಮಿ.ಮೀ. ಮಳೆಯಾಗಿದೆ. ಮಳೆಯಿಂದ ನದಿ ನಾಲೆ, ತೊರೆಗಳು ಜೀವ ಪಡೆದಿವೆ. ಮಳೆಯಿಂದ ಚಿಂಚೋಳಿಯ ಚಂದಾಪುರದ ಆಶ್ರಯ ಬಡಾವಣೆಯ ಕೆಲ‌ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ: ನಾಗರಾಳ ಜಲಾಶಯ ಭರ್ತಿಯಾಗುತ್ತಿರುವುದರಿಂದ ನದಿ ಪಾತ್ರದ ಹಳ್ಳಿಗಳು ಮತ್ತು ಚಿಂಚೋಳಿ ಚಂದಾಪುರ ಅವಳಿ ಪಟ್ಟಣಗಳ ಜನರು ಎಚ್ಚರದಿಂದಿರಬೇಕೆಂದು ಯೋಜನಾಧಿಕಾರಿ ತ್ರಿಲೋಚನ ಜಾಧವ ಮತ್ತು ಸಹಾಯಕ ಎಂಜಿನಿಯರ್ ವಿನಾಯಕ ಚವ್ಹಾಣ ತಿಳಿಸಿದ್ದಾರೆ. ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನೀರು ನದಿಗೆ ಬಿಡಬಹುದಾಗಿದೆ. ಹೀಗಾಗಿ‌ ಮಹಿಳೆಯರು ಬಟ್ಟೆ ತೊಳೆಯಲು, ಕೃಷಿಕರು ನದಿ ದಾಟುವಾಗ ಮತ್ತು ಮೀನುಗಾರರು ಮೀನು ಹಿಡಿಯಲು ನದಿಗೆ ಇಳಿಯುವ ಮೊದಲು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT