ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: 360 ‘ಕ್ರೈಸ್’ ಶಾಲೆಗಳ ‘ಶತಕ ಸಾಧನೆ’

ವಸತಿ ಶಾಲೆಗಳ ಶೇ 96ರಷ್ಟು ಮಕ್ಕಳು ತೇರ್ಗಡೆ
Published 3 ಜೂನ್ 2024, 6:26 IST
Last Updated 3 ಜೂನ್ 2024, 6:26 IST
ಅಕ್ಷರ ಗಾತ್ರ

ಕಲಬುರಗಿ: ಬಡತನದ ಜತೆ ಸೆಣಸಿ, ಸತ್ವ ಪರೀಕ್ಷೆಗಳನ್ನು ಎದುರಿಸಿ ‘ಕ್ರೈಸ್’ನ ವಸತಿ ಶಾಲೆಗಳಿಗೆ ಅಡಿ ಇಟ್ಟ ವಿದ್ಯಾರ್ಥಿಗಳು, ಅಲ್ಲಿನ ಮೂಲಸೌಕರ್ಯ ಕೊರತೆಗಳ ನಡುವೆಯೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ‘ಶತಕದ ಸಾಧನೆ’ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ.

2023–24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 8.56 ಲಕ್ಷ ವಿದ್ಯಾರ್ಥಿಗಳ ಪೈಕಿ 1.63 ಲಕ್ಷ ವಿದ್ಯಾರ್ಥಿಗಳು 20 ಕೃಪಾಂಕಗಳಿಂದ ತೇರ್ಗಡೆ ಹೊಂದಿರುವುದು ಚರ್ಚೆಗೆ ಒಳಗಾಗಿತ್ತು. ಇದರ ನಡುವೆಯೇ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) 798 ವಸತಿ ಶಾಲೆಗಳ ಪೈಕಿ 360 ವಸತಿ ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ‘ಭರವಸೆಯ ಬೆಳಕು’ ಮೂಡಿಸಿವೆ.

‘ಕ್ರೈಸ್’ ಸಂಸ್ಥೆ ನಡೆಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಡಾ.ಬಿ.ಆರ್‌.ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ 35,303 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 33,891 ವಿದ್ಯಾರ್ಥಿಗಳು (ಶೇ 96ರಷ್ಟು) ಪಾಸಾಗಿದ್ದಾರೆ. ರಾಜ್ಯದ ಸರಾಸರಿಗಿಂತ ಶೇ 22.6ರಷ್ಟು ಹೆಚ್ಚಿನ ಫಲಿತಾಂಶ ದಾಖಲಿಸಿದ್ದಾರೆ. ಹಲವು ವಸತಿ ಶಾಲೆಗಳಲ್ಲಿ ಅಲ್ಪ ‘ಗೌರವಧನ’ ಪಡೆಯುತ್ತಿದ್ದರೂ ಶ್ರದ್ಧೆಯಿಂದ ಪಾಠ ಮಾಡಿ, ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಿದ ಅತಿಥಿ ಶಿಕ್ಷಕರ ಪಾತ್ರವನ್ನೂ ಈ ಸಂದರ್ಭದಲ್ಲಿ ಮರೆಯುವಂತಿಲ್ಲ. 

ತೇರ್ಗಡೆಯಾದ 33,891 ವಿದ್ಯಾರ್ಥಿಗಳಲ್ಲಿ ‘ಎ+’ ಶ್ರೇಣಿಯಲ್ಲಿ 3,126, ‘ಎ’ ಶ್ರೇಣಿಯಲ್ಲಿ 8,108, ‘ಬಿ+’ ಶ್ರೇಣಿಯಲ್ಲಿ 8,753, ‘ಬಿ’ ಶ್ರೇಣಿಯಲ್ಲಿ 7,603, ‘ಸಿ+’ ಶ್ರೇಣಿಯಲ್ಲಿ 4,992 ಮತ್ತು ‘ಸಿ’ ಶ್ರೇಣಿಯಲ್ಲಿ 1,221 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 33.14ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರೆ. ಕೇವಲ 1,412 (ಶೇ 4ರಷ್ಟು) ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಹಾಗೂ ಮೂರನೇ ಸ್ಥಾನ ಗಳಿಸಿದ ಮಂಡ್ಯ ತಾಲ್ಲೂಕಿನ ತುಂಬಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನವನೀತ್‌, ತಾವು ಪಡೆದ ಅಂಕಗಳಿಂದಲೇ ಓದಿದ ಶಾಲೆಗೆ ಕ್ರಮವಾಗಿ ₹ 1 ಕೋಟಿ ಹಾಗೂ ₹ 50 ಲಕ್ಷ ಪ್ರೋತ್ಸಾಹ ಧನವನ್ನು ಸರ್ಕಾರದಿಂದ ಸಿಗುವಂತೆ ಮಾಡಿದ್ದಾರೆ. ಜೊತೆಗೆ ಪೋಷಕರಲ್ಲಿ ವಸತಿ ಶಾಲೆಗಳ ಮೇಲಿನ ಆಶಾಭಾವವನ್ನು ದುಪ್ಪಟ್ಟುಗೊಳಿಸಿದ್ದಾರೆ.

ಸಮಸ್ಯೆಗಳಿಂದ ಮುಕ್ತವಾಗಿಲ್ಲ: ‘ಸರ್ಕಾರಿ ಶಾಲೆಗಳಂತೆ ವಸತಿ ಶಾಲೆಗಳಿಗೂ ಕಾಯಂ ಬೋಧಕರ ಕೊರತೆ ಕಾಡುತ್ತಿದೆ. ಕೆಲವು ಶಾಲೆಗಳಿಗೆ ಬೆಂಚು, ಡೆಸ್ಕ್‌ಗಳ ಸೌಲಭ್ಯವೂ ಇಲ್ಲ. ಕೊರತೆಗಳ ನಡುವೆಯೂ ನಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಶೇ 60ರಷ್ಟು ಅತಿಥಿ ಶಿಕ್ಷಕರಿದ್ದರೂ ಗುಣಮಟ್ಟದ ಕಲಿಕೆಯಲ್ಲಿ ರಾಜಿಯಾಗಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ‘ಕ್ರೈಸ್’ ಅಧಿಕಾರಿ.

‘ವಸತಿ ಶಾಲೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಬಡ ಕೂಲಿಕಾರ್ಮಿಕರ ಮಕ್ಕಳು ಹೆಚ್ಚಾಗಿ ದಾಖಲಾಗಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ತರಗತಿ ನಡೆಯುತ್ತವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲೆ ನಿಗಾ ಇರಿಸಿ, ಶಿಕ್ಷಕರಿಗೆ ದತ್ತು ನೀಡುತ್ತೇವೆ. ಉತ್ತರ ಪತ್ರಿಕೆಗಳನ್ನು ಬೇರೊಂದು ಶಾಲೆಯ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸುತ್ತೇವೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಬೋಧಕ ಮತ್ತು ಬೋಧಕೇತರರು ಒಂದು ತಂಡವಾಗಿ ಶ್ರಮಿಸುತ್ತಿರುವುದರಿಂದ ಉತ್ತಮ ಫಲಿತಾಂಶ ಬರುತ್ತಿದೆ’ ಎಂದರು.

ಕೂಲಿಕಾರ್ಮಿಕರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ...

ದುಡಿಮೆಗಾಗಿ ಗೋವಾ, ಮುಂಬೈ, ಬೆಂಗಳೂರು, ಹೈದರಾಬಾದ್‌ನಂತಹ ಮಹಾನಗರಗಳಿಗೆ ವಲಸೆ ಹೋದ ಕೂಲಿಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಿಗೆ ವಸತಿ ಶಾಲೆಗಳು ಅನ್ನ ಮತ್ತು ಅಕ್ಷರದೊಂದಿಗೆ ಆಶ್ರಯವನ್ನೂ ನೀಡುತ್ತಿವೆ.

‘ಶೈಕ್ಷಣಿಕವಾಗಿ ಹಿಂದುಳಿದ ಮತ್ತು ಕೆಲವು ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಋತುಮತಿಯಾದ ಬಳಿಕ ರಕ್ಷಣೆಯ ಆತಂಕದಿಂದ ಪೋಷಕರು ದೂರದ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಕೆಲ ಕಾರ್ಮಿಕರು ತಮ್ಮೊಂದಿಗೆ ಮಹಾನಗರಗಳಿಗೆ ಕರೆದ್ಯೊಯುತ್ತಾರೆ. ವಸತಿ ಶಾಲೆಗಳಿಂದಾಗಿ ಶಾಲೆ ಬಿಡಿಸುವುದು ತಪ್ಪಿದೆ. ಕೂಲಿಕಾರ್ಮಿಕರ ಮಕ್ಕಳೂ ಅಗ್ರ ಶ್ರೇಣಿಯಲ್ಲಿ ಪಾಸಾಗುತ್ತಿದ್ದಾರೆ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತರ ಕಚೇರಿ ಅಧಿಕಾರಿ ಚನ್ನಬಸಪ್ಪ ಮುಧೋಳ.

‘ಮುಂಬೈನಲ್ಲಿ ಗಾರೆ ಕೆಲಸ ಮಾಡುತ್ತಿದ್ದು, ಬಡತನದಿಂದಾಗಿ ಮೊದಲ ಮಗಳನ್ನು ಓದಿಸಲು ಆಗದೆ 5ನೇ ತರಗತಿಗೆ ಬಿಡಿಸಿದೆ. ಕಿರಿಯ ಮಗಳು ಸರಿತಾ ಚೆನ್ನಾಗಿ ಓದುತ್ತಾಳೆ ಎಂದು ಶಿಕ್ಷಕರು ತಿಳಿಹೇಳಿದರು. ಸೇಡಂ ತಾಲ್ಲೂಕಿನ ಕೋಡ್ಲಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಆಶ್ರಯ ಸಿಗುತ್ತದೆ ಎಂದು ಸೇರಿಸಿದೆ. ಈಗ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 89ರಷ್ಟು ಅಂಕಗಳಿಸಿದ್ದು ಸಂತಸ ತಂದಿದೆ’ ಎಂದು ಚಿಂಚೋಳಿಯ ವಲಸೆ ಕಾರ್ಮಿಕ ಪ್ರಕಾಶ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.

ಉಡುಪಿಗೆ ಶೇ 100ರಷ್ಟು ಫಲಿತಾಂಶ

ಉಡುಪಿ ಜಿಲ್ಲೆಯಲ್ಲಿ ‘ಕ್ರೈಸ್’ ಸಂಸ್ಥೆಯ ಎಂಟು ವಸತಿ ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ ಅಗ್ರ ಸ್ಥಾನ ಗಳಿಸಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಕನ್ನಡ (11ರಲ್ಲಿ 10) ಇದೆ.

ಯಾದಗಿರಿ ಜಿಲ್ಲೆಯ 21 ವಸತಿ ಶಾಲೆಗಳಲ್ಲಿ ಒಂದು ಶಾಲೆಯೂ ಶೇ 100ರಷ್ಟು ಫಲಿತಾಂಶ ದಾಖಲಿಸಿಲ್ಲ. ಒಟ್ಟಾರೆ ವಸತಿ ಶಾಲೆಗಳ ಪೈಕಿ ಕಲಬುರಗಿಯಲ್ಲಿ 2 (40), ಬೀದರ್‌ನಲ್ಲಿ 3 (29), ಚಾಮರಾಜನಗರದಲ್ಲಿ 4 (21), ರಾಯಚೂರಿನಲ್ಲಿ 9 (35), ಮಂಡ್ಯದಲ್ಲಿ 10 (37), ದಾವಣಗೆರೆಯಲ್ಲಿ 6 (22), ರಾಮನಗರ ಮತ್ತು ವಿಜಯನಗರದಲ್ಲಿ ತಲಾ 8 (23) ಹಾಗೂ ಚಿತ್ರದುರ್ಗದಲ್ಲಿ 13 (35) ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿದ್ದು, ಕೊನೆಯ 10 ಸ್ಥಾನಗಳಲ್ಲಿವೆ.

‘ಫಲಿತಾಂಶ ಪರಿಗಣಿಸಿ ಕನಿಷ್ಠ ವೇತನ ಕೊಡಿ’

‘ಮಕ್ಕಳು ತೇರ್ಗಡೆಯಾದ ವಿಷಯಗಳನ್ನು ಗಮನಿಸಿದರೆ ಕಾಯಂ ಶಿಕ್ಷಕರಿಗಿಂತ ಅತಿಥಿ ಶಿಕ್ಷಕರು ಬೋಧಿಸಿದ ವಿಷಯಗಳಲ್ಲಿಯೇ ಫಲಿತಾಂಶ ವೃದ್ಧಿಯಾಗಿದೆ. ಸರ್ಕಾರ ಈಗಲಾದರೂ ಫಲಿತಾಂಶವನ್ನು ಪರಿಗಣಿಸಿ ಕನಿಷ್ಠ ₹30,000 ವೇತನವನ್ನಾದರೂ ನೀಡಲಿ’ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ರಾಜ್ಯ ಅಧ್ಯಕ್ಷ ನಾಗೇಶ ಒತ್ತಾಯಿಸುತ್ತಾರೆ.

‘ಕ್ರೈಸ್’ ಅಧೀನದಲ್ಲಿ 2,010 ಅತಿಥಿ ಶಿಕ್ಷಕರು, 217 ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿ 3,500 ಜನ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಸೇವಾ ಅಭದ್ರತೆಯಿಂದಾಗಿ ಕಾಯಂ ಶಿಕ್ಷಕರಿಗಿಂತ ಹೆಚ್ಚಿನ ಆಸಕ್ತಿ ವಹಿಸಿ ಬೋಧಿಸುತ್ತಿದ್ದೇವೆ. ಆದರೆ, ಶ್ರಮಕ್ಕೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ಸಂಬಳದಲ್ಲಿನ ತಾರತಮ್ಯ, ಕೆಲವು ಪ್ರಾಂಶುಪಾಲರ ಕಿರಕುಳದಿಂದ ಬೇಸರವಾಗಿದೆ’ ಎಂದರು.

© 2024 All Rights Reserved by The Printers (Mysore) Private Limited. Powered by Summit

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT