ಸೋಮವಾರ, ಜನವರಿ 24, 2022
28 °C
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 600 ವಿದ್ಯಾರ್ಥಿಗಳು– ಸಿಬ್ಬಂದಿಯಲ್ಲಿ ಆತಂಕ

ಕಲಬುರಗಿ: ಜಿಲ್ಲೆಯಲ್ಲಿ 88 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 16 ವಿದ್ಯಾರ್ಥಿಗಳು ಹಾಗೂ ವಾಡಿ ಪಟ್ಟಣದ ಅಲ್‌ ಅಮೀನ್‌ ಪ್ರೌಢಶಾಲೆಯ ಮೂವರು ಸೇರಿದಂತೆ ಒಟ್ಟು 19 ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 88 ಮಂದಿಗೆ ವೈರಾಣು ಅಂಟಿಕೊಂಡಿದ್ದು ಸೋಮವಾರ ಗೊತ್ತಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಯುಕೆನಲ್ಲಿ ಶನಿವಾರ ಏಳು ಮಂದಿಗೆ ವೈರಾಣು ತಗುಲಿತ್ತು. ಇವರ ಸಂಪರ್ಕಕ್ಕೆ ಬಂದ ಮತ್ತೆ 16 ಮಂದಿಗೆ ಈಗ ಪಾಸಿಟಿವ್‌ ದೃಢಪಟ್ಟಿದೆ. ಇದರಿಂದಾಗಿ ವಿಶ್ವವಿದ್ಯಾಲಯದ ಆವರಣದಲ್ಲಿರುವ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿದೆ.

ಆಳಂದ ತಾಲ್ಲೂಕು ಆರೋಗ್ಯಾಧಿ ಕಾರಿ ಡಾ.ಸುಶೀಲಕುಮಾರ ಅಂಬೂರೆ ಸೋಮವಾರ ವಿವಿ ಕ್ಯಾಂಪಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಾಧ್ಯಾಪಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು, ಆತಂಕಕ್ಕೆ ಒಳಗಾಗದಂತೆ ತಿಳಿಹೇಳಿದರು.

‘ಸೋಂಕಿತರಲ್ಲಿ ನಾಲ್ವರಿಗೆ ಕೆಮ್ಮು–ಶೀತ ಕಂಡುಬಂದಿದ್ದು ಅವರನ್ನು ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಲಕ್ಷಣಗಳು ಇಲ್ಲದವರನ್ನು ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ಐಸೋಲೇಷನ್‌ ಮಾಡಲಾಗಿದೆ. ಅಲ್ಲಿ ಪುರುಷ, ಮಹಿಳಾ ನರ್ಸ್‌ ನಿಯೋಜಿಸ ಲಾಗಿದೆ. ಇತರ ವಿದ್ಯಾರ್ಥಿಗಳು ಅವರ ಉರುಗಳಿಗೆ ಹೋಗಲು ಇಚ್ಚಿಸಿದರೆ ವ್ಯವಸ್ಥೆ ಮಾಡಲಾಗುವುದು’ ಎಂದು ಸಿಯುಕೆ ಕುಲಸಚಿವ ಬಸವರಾಜ ಡೋಣೂರ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಸೋಂಕು
ವಾಡಿ:
ಪಟ್ಟಣದ ಆಲ್ ಅಮೀನ್ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೊವೀಡ್ ತಗುಲಿದೆ ಎಂದು ಸೋಮವಾರ ಗೊತ್ತಾಗಿದೆ. 16 ವರ್ಷ ವಯಸ್ಸಿನ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿಗೆ ಸೋಂಕು ತಗುಲಿದೆ.

ಜನವರಿ 6ರಂದು ಈ ಶಾಲೆಯ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ ನಡೆಸಲಾಗಿತ್ತು. ವರದಿ ಬಂದಿದೆ. ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದ್ದರಿಂದ ಅವರನ್ನು ಹೋಂ ಐಸೋಲೇಷನ್‌ ಮಾಡಲಾಗಿದೆ. ಉಳಿದ ಎಲ್ಲ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅಮರದೀಪ ಪವಾರ ತಿಳಿಸಿದ್ದಾರೆ.

9 ಬ್ಯಾಂಕ್‌ ಸಿಬ್ಬಂದಿಗೆ ಕೋವಿಡ್‌
ಶಹಾಬಾದ್‌:
 ನಗರದ ಕೆನರಾ ಬ್ಯಾಂಕಿನ ನಾಲ್ವರು ಹಾಗೂ ಎಸ್‍ಬಿಐ ಬ್ಯಾಂಕಿನ ಐವರು ಸಿಬ್ಬಂದಿಗೆ ಕೋವಿಡ್‌ ತಗುಲಿದ್ದು ಸೋಮವಾರ ಗೊತ್ತಾಗಿದೆ. ಈ ಎರಡೂ ಬ್ಯಾಂಕ್‌ ಶಾಖೆಗಳನ್ನು ಬಂದ್‌ ಮಾಡಲಾಗಿದ್ದು ‘ಸಿಬ್ಬಂದಿಗೆ ಕೋವಿಡ್ ತಗುಲಿದ್ದರಿಂದ ಜನರು ಸಹಕರಿಸಬೇಕು’ ಎಂದು ಬೋರ್ಡ್‌ ಹಾಕಲಾಗಿದೆ.

ಇದಲ್ಲದೇ, ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೂ ಪಾಸಿಟಿವ್‌ ಬಂದಿದೆ ಎಂದು ಸೋಮವಾರ ತಿಳಿಸಲಾಗಿದೆ. ಇದರೊಂದಿಗೆ ಮೂರು ದಿನಗಳಲ್ಲಿ ನಗರದಲ್ಲಿ ಸೋಂಕಿತರ ಸಂಖ್ಯೆ 16 ಏರಿಕೆಯಾಗಿದೆ. ಸೋಂಕಿತ ಬ್ಯಾಂಕ್‌ ಸಿಬ್ಬಂದಿ ಹಾಗೂ ಪೊಲೀಸರಲ್ಲಿ ಕಡಿಮೆ ಲಕ್ಷಣಗಳು ಇರುವ ಕಾರಣ ಎಲ್ಲರನ್ನೂ ಹೋಂ ಐಸೋಲೇಷನ್‌ ಮಾಡಲಾಗಿದೆ. ಇವರ ಸಂಪರ್ಕಕ್ಕೆ ನೂರಾರು ಜನ ಬಂದಿದ್ದು ಎಲ್ಲರೂ ಸ್ವಯಂ ಕ್ವಾರಂಟೈನ್‌ ಆಗುವಂತೆ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲಿದೆ. ಇದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ಆದರೆ, ಹಲವರು ಮಾಸ್ಕ್‌ ಧರಿಸದೇ, ಅಂತರ ಕಾಪಾಡಿಕೊಳ್ಳದೇ ಹೊರಗಡೆ ಓಡಾಡುತ್ತಿದ್ದಾರೆ. ಇದು ಅಪಾಯಕಾರಿ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ನಮ್ಮ ಆರೋಗ್ಯದ ಜತೆಗೆ ಇತರರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯವಾಗಿದೆ’ ಎಂದು ತಹಶೀಲ್ದಾರ್‌ ಸುರೇಶ ವರ್ಮಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.