ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಪ್ರಕರಣ: 9 ಮಂದಿ ಬಂಧನ

Last Updated 8 ನವೆಂಬರ್ 2020, 5:21 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಪ್ರತ್ಯೇಕ ಕಡೆ ನಡೆದ ಎರಡು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.‌

ಇಲ್ಲಿನ ಕೈಲಾಸ ನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.‌ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದವರಾದ ಶರಣಬಸಪ್ಪ ಅಲಿಯಾಸ್‌ ಶರಣು ಮಾದಗುಂಡ, ಯೋಗಿನಾಥ ಮಾದಗುಂಡ, ಸಾಯಿನಾಥ ಮಾದಗುಂಡ ಹಾಗೂ ಅಶೋಕ ರಾಜಾಪುರ ಬಂಧಿತ ಆರೋಪಿಗಳು. ಕಡಗಂಚಿ ಗ್ರಾಮ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಭೋಗಶೆಟ್ಟಿ ಎನ್ನುವವರನ್ನು ನಗರದಲ್ಲಿ ಈಚೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಹೊಲ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಮೃತನ ಕುಟುಂಬದವರು ನೀಡಿದ ದೂರು ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌

‌ಆರ್.ಜಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತನ ಕೊಲೆ: ಐವರ ಬಂಧನ

ಕಲಬುರ್ಗಿ: ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕಟ್ಟಡದಿಂದ ಕೆಡವಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಐವರು ಗೆಳೆಯರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಶಾಬಾಸ್, ಸೋಹೆಲ್, ನದೀಮ್, ಜುಬೇರ್ ಹಾಗೂ ಸಮೀರ್ ಬಂಧಿತ ಆರೋಪಿಗಳು. ಕಲಬುರ್ಗಿಯ ಎಂ.ಜಿ. ರಸ್ತೆಯಲ್ಲಿ ಅಕ್ಟೋಬರ್ 9ರಂದು ಸಲಾಂ ದಸ್ತಗೀರ್‌ ಎಂಬ ವಿದ್ಯಾರ್ಥಿ ಕೊಲೆ ನಡೆದಿತ್ತು. ಅದರಲ್ಲಿ ಈ ಐವರೂ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದಸ್ತಗೀರ್‌ನಲ್ಲಿ ಮದ್ಯಪಾನ ಸೇವನೆಗೆ ಕರೆದುಕೊಂಡು ಹೋದ ಗೆಳೆಯರು ಪಾರ್ಟಿ ಮಾಡಿದ್ದರು. ನಂತರ ಗೆಳೆಯರ ಮಧ್ಯೆ ಜಗಳ ನಡೆದಿದ್ದು. ನಿರ್ಮಾಣ ಹಂತದಲ್ಲಿ ಕಟ್ಟಡದ ಮೇಲಿಂದ ದಸ್ತಗೀರ್‌ನನ್ನು ತಳ್ಳಿದ್ದರು. ಕುಡಿದ ಅಮಲಿನಲ್ಲಿ ಇದ್ದ ವಿದ್ಯಾರ್ಥಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಡಿಸಿಪಿ ಕಿಶೋರ ಬಾಬು ತಿಳಿಸಿದ್ದಾರೆ.

ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣಾಧೀನ ಕೈದಿ ಸಾವು

ಕಲಬುರ್ಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಎಂಟು ದಿನಗಳ ಹಿಂದಷ್ಟೇ ಒಬ್ಬ ಕೈದಿ ಮೃತಪಟ್ಟಿದ್ದನ್ನು ‌ಇಲ್ಲಿ ಸ್ಮರಿಸಬಹುದು.

ಸಿದ್ಧಪ್ಪ ವರಗಿ (24) ಮೃತಪಟ್ಟವರು. ದೇವಲ ಗಾಣಗಾಪುರದಲ್ಲಿ ಜನವರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದರು. ರಕ್ತಹೀನತೆಯಿಂದ ಬಳಲುತ್ತಿದ್ದ ಅವರನ್ನು ಐದು ದಿನಗಳ ಹಿಂದೆ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಸುಕಿನ ಜಾವ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.‌

ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್ ತಮ್ಮರಾಯ ಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ವಾರಸುದಾರರಿಗೆ ಶವ ಹಸ್ತಾಂತರಿಸಲಾಯಿತು. ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಡಿಕ್ಕಿ ಬೈಕ್ ಸವಾರ ಸಾವು

ಕಲಬುರ್ಗಿ: ಇಲ್ಲಿನ ಜೇವರ್ಗಿ ರಸ್ತೆಯಲ್ಲಿರುವ ಶಹಾಬಾದ್‌ ಕ್ರಾಸ್ ಹತ್ತಿರ ಶನಿವಾರ ಬೈಕಿಗೆ ಲಾರಿ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಿಣಜಗಿಯ ನಿವಾಸಿ ಬೀರಪ್ಪ ಮೃತಪಟ್ಟವರು. ಕೆಲಸ ನಿಮಿತ್ತ ಬೈಕ್ ಮೇಲೆ ಮಲ್ಲಾ ಕಡೆಗೆ ಹೋಗುತ್ತಿದ್ದಾಗ ವಿಜಯಪುರ ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಇನ್‍ಸ್ಪೆಕ್ಟರ್ ರಮೇಶ ಕಾಂಬಳೆ, ಪಿಎಸ್‍ಐ ಭಾರತಿಬಾಯಿ ಧನ್ನಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಸಂಚಾರ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.

ಬಾಕ್ಸ್–1

ವರದಕ್ಷಿಣೆ ಕಿರುಕುಳ: ಗು.ವಿ.ವಿ ಸಿಂಡಿಕೇಟ್ ಸದಸ್ಯೆ ದೂರು

ಕಲಬುರ್ಗಿ: ‘ನನ್ನ ಅತ್ತೆ, ಮಾವ, ಪತಿಯ ಸಹೋದರಿಯರು ಸೇರಿಕೊಂಡು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ. ವರದಕ್ಷಿಣೆಗಾಗಿ ಪೀಡಿಸಿ ಮನೆಯಿಂದ ಹೊರಹಾಕಿದ್ದಾರೆ’ ಎಂದು ಆರೋಪಿಸಿ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿರುವ ಡಾ.ಪಲ್ಲವಿ ಪಾಟೀಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ನನ್ನ ಪತಿ ವಿವೇಕ ಕರಂಜೆ ಅವರಿಗೆ ಅವರ ತಾಯಿ ಪ್ರತಿದಿನವೂ ಮಬ್ಬು ಬರಿಸುವ ಮಾತ್ರೆ ನುಂಗಿಸುತ್ತಿದ್ದಾರೆ. ಅಲ್ಲದೇ ಮಗನಿಂದ ವಿಚ್ಚೇದನ ಕೊಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

‘ಪಲ್ಲವಿ ಹಾಗೂ ಕಲಬುರ್ಗಿಯ ವಿಠಲ ನಗರದ ವಿವೇಕ ಕರಂಜೆ ಅವರ ವಿವಾಹ 2020ರ ಫೆಬ್ರುವರಿ 12ರಂದು ನಡೆದಿದೆ. ಆಗ 40 ತೊಲೆ ಚಿನ್ನ, ಐದು ಕೆ.ಜಿ ಬೆಳ್ಳಿ ನೀಡಿ ಮದುವೆ ಮಾಡಿಕೊಡಲಾಗಿದೆ. ಆದರೆ, ಅತ್ತೆ ಪುಷ್ಪಲತಾ, ಮಾವ ವೈಜನಾಥ ಕರಂಜೆ, ನಾದಿಯರಾದ ಡಾ.ನಿವೇದಿತಾ, ದಿವ್ಯದೀಪ, ಸ್ನೇಹಲತಾ ಸೇರಿಕೊಂಡು ನಿತ್ಯವೂ ಹೊಡೆದು ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ತವರು ಮನೆಯಿಂದ ₹ 40 ಲಕ್ಷ ಹಣ, ಅರ್ಧ ಕೆ.ಜಿ ಚಿನ್ನ, 25 ಕೆ.ಜಿ ಬೆಳ್ಳಿ ತರುವಂತೆ ಪೀಡಿಸುತ್ತಿದ್ದಾರೆ. ಹಲವು ಸಲ ಹೊಡೆದು ಮನೆಯ ಹೊರಗಡೆ ಹಾಕಿದ್ದಾರೆ’ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

‘ನನ್ನ ಪತಿ ವಿವೇಕ ಒಳ್ಳೆಯವರಿದ್ದು, ಅವರ ಮುಗ್ದತೆಯನ್ನು ಗಂಡನ ಮನೆಯವರೆಲ್ಲರೂ ದುರುಪಯೋಗ ಮಾಡಿಕೊಂಡು ಹಿಂಸೆ ನೀಡುತ್ತಿದ್ದಾರೆ. ಹಲವು ಸಲ ಪತಿ ಹಾಗೂ ನನ್ನ ಬಳಿ ಇದ್ದ ಚಿನ್ನಾಭರಣ, ಹಣವನ್ನು ಕಿತ್ತುಕೊಂಡು ಹಿಂಸಿಸಿದ್ದಾರೆ’ ಎಂದೂ ಅವರು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT