ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಅವಧಿ ಬದಲಾವಣೆ ಆರೋಪ: ಎಸಿಸಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

Published 4 ಮಾರ್ಚ್ 2024, 5:27 IST
Last Updated 4 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ವಾಡಿ (ಕಲಬುರಗಿ ಜಿಲ್ಲೆ): ಅದಾನಿ ಒಡೆತನದ ವಾಡಿ ಎಸಿಸಿ ಕಾರ್ಖಾನೆಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದೆ ಎಂದು ಆರೋಪಿಸಿದ ಗುತ್ತಿಗೆ ಕಾರ್ಮಿಕರು, ಸೋಮವಾರ ಪ್ರತಿಭಟನೆ ನಡೆಸಿದರು.

ಕಾರ್ಖಾನೆಯ ಗೇಟ್- 1 ಹಾಗೂ ಗೇಟ್- 2ರ ಮುಂಭಾಗ ಕಾರ್ಮಿಕರು ಜಮಾಯಿಸಿ, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.

ಕಾರ್ಮಿಕರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಕೆಲಸ ಅವಧಿ ಬದಲಾವಣೆ ಜತೆಗೆ ದುಡಿಮೆ ಅವಧಿ ಹೆಚ್ಚಳ ಮಾಡಿ ಕಾರ್ಮಿಕರ ಶೋಷಣೆ ಮಾಡುತ್ತಿದ್ದಾರೆ. ಊಟದ ಸಮಯ ಹಾಗೂ ವಿಶ್ರಾಂತಿಗೂ ಅವಕಾಶ ನೀಡುತ್ತಿಲ್ಲ. ನಮ್ಮನ್ನು ಯಂತ್ರಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಈ ಮೊದಲು ಬೆಳಿಗ್ಗೆ 8ರಿಂದ ಮಧ್ಯಾಹ್ನ 4ರ ವರೆಗೆ 8 ಗಂಟೆ ಕೆಲಸದ ಸಮಯ ಇತ್ತು. ಊಟ ಹಾಗೂ ವಿರಾಮಕ್ಕೂ ಸ್ವಲ್ಪ ಅವಕಾಶ ಕೊಡಲಾಗುತ್ತಿತ್ತು. ಈ ಸಮಯಕ್ಕೆ ನಾವೆಲ್ಲಾ ಹೊಂದಿಕೊಂಡಿದ್ದು, ಹೆಚ್ಚುವರಿ ಕೆಲಸಕ್ಕೂ (ಒಟಿ) ಅವಕಾಶವಿತ್ತು. ಈಗ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ 9 ಗಂಟೆ ನಿರಂತರವಾಗಿ ದುಡಿಸಿಕೊಳ್ಳಲಾಗುತ್ತಿದೆ. ಊಟ ಮತ್ತು ವಿಶ್ರಾಂತಿಗೂ ಸಮಯ ಕಡಿಮೆ ಮಾಡಿ, ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಈ ಕೂಡಲೇ ಮೊದಲಿನ ಅವಧಿ ಮುಂದುವರೆಸಬೇಕು. ಪ್ರತಿದಿನ ಕೆಲಸ ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.

ಅಧಿಕಾರಿಗಳು ಸ್ಥಳಕ್ಕೆ ಬಂದು, ನಮ್ಮ ಮನವಿ ಆಲಿಸಬೇಕು. ಮೊದಲಿನ ಕೆಲಸದ ಅವಧಿ ನಿಗದಿಪಡಿಸುವವರೆಗೂ ಕೆಲಸಕ್ಕೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT