ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ: ಎರಡು ಬೈಕ್‌ಗಳ ಮಧ್ಯೆ ಅಪಘಾತ: ಗಾಯಾಳು ನೆರವಿಗೆ ಧಾವಿಸಿದ ಸಚಿವ

Published 3 ಸೆಪ್ಟೆಂಬರ್ 2024, 16:05 IST
Last Updated 3 ಸೆಪ್ಟೆಂಬರ್ 2024, 16:05 IST
ಅಕ್ಷರ ಗಾತ್ರ

ಸೇಡಂ: ಬೈಕ್‌ಗಳು ಡಿಕ್ಕಿಯಾಗಿ ಗಾಯಗೊಂಡು ರಸ್ತೆ ಮೇಲೆ ಚಿಕಿತ್ಸೆಗಾಗಿ ಪರದಾಡುತ್ತಿದ್ದ ಗಾಯಾಳುವಿನ ನೆರವಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಧಾವಿಸಿದ ಘಟನೆ ತಾಲ್ಲೂಕಿನ ಕುರಕುಂಟಾ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ತಾಲ್ಲೂಕಿನ ಸಂಗಾವಿ(ಟಿ) ನಾಲಾದಲ್ಲಿ ಮೀನು ಹಿಡಿಯಲು ಹೋಗಿ ನಾಲಾದಲ್ಲಿ ಕೊಚ್ಚಿ ಹೋದ ಕುರಕುಂಟಾ ಗ್ರಾಮದ ಅಮೆರಿಕ ಬಡಾವಣೆ ನಿವಾಸಿ ರಾಜು ನಾಮವಾರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಕುರಕುಂಟಾದಿಂದ ಸೇಡಂ ಕಡೆ ಬರುತ್ತಿದ್ದರು. ಅದೇ ಮಾರ್ಗದಲ್ಲಿ ಬೈಕ್‌ಗಳು ಡಿಕ್ಕಿಯಾಗಿ ಸಿದ್ದಪ್ಪ ಭೀಮರಾಯ ಮಂಗದ್ (55) ಗಾಯಗೊಂಡಿದ್ದರು. ಕಾಲಿಗೆ ಪೆಟ್ಟಾಗಿ ರಕ್ತಗಾಯವಾಗಿತ್ತು. ಎಡಗಾಲು ಮುರಿದಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದರು. ಕಾರು ನಿಲ್ಲಿಸಿ, ಕಾರಿನಿಂದ ಕೆಳಗಡೆ ಇಳಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಗಾಯಾಳು ನೆರವಿಗೆ ಧಾವಿಸಿದರು. ಸ್ವತಃ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಿಂದ ಹತ್ತಿ ನೀಡಿ ಗಾಯಾಳುವಿಗೆ ಸ್ಪಂದಿಸಿ, ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಸ್ಥಳದಲ್ಲಿಯೇ ಇದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ಪಾಟೀಲ ಅವರನ್ನು ಕರೆದು ಗಾಯಾಳುವಿಗೆ ಆಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ಕೊಡಿಸುವಂತೆ ಸೂಚಿಸಿದರು.

‘ಕಾಲು ಮುರಿದಿದ್ದರೆ, ಕಲಬುರಗಿ ಟ್ರಾಮಾ ಕೇಂದ್ರಕ್ಕೆ ತೆರಳುವಂತೆ ಸೂಚಿಸಿ, ನಾನು ಕಾಲ್ ಮಾಡಿ ಹೇಳುವೆ. ನೇರವಾಗಿ ಕಲಬುರಗಿಗೆ ಹೋಗಿ’ ಎಂದು ಗಾಯಾಳುವಿನ ಪತ್ನಿ ಮಂಜುಳಾ ಅವರಿಗೆ ಸಚಿವರು ಹೇಳಿದರು. ಸೇಡಂ ಸಿಪಿಐ ಮಹಾದೇವ ದಿಡ್ಡಿಮನಿ, ಪಿಎಸ್ಐ ಮಂಜುನಾಥರೆಡ್ಡಿ ಅವರು ಕುರಕುಂಟಾ ಮುಖ್ಯಪೇದೆ ನಾಗರಾಜ ಅವರನ್ನು ಕರೆದು, ವಾಹನಗಳ ಜಪ್ತಿ ಮಾಡಿ, ದೂರು ದಾಖಲಿಸಿಕೊಳ್ಳುವಂತೆ ಸೂಚಿಸಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ, ಗಾಯಾಳುವಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.

ಘಟನೆ ವಿವರ: ಸೇಡಂ ಪಟ್ಟಣದ ವೆಂಕಟೇಶ ನಗರ ನಿವಾಸಿ ಸಿದ್ದಪ್ಪ ಮಂಗದ್ ಎನ್ನುವವರು ಪತ್ನಿ ಮಂಜುಳಾ ಜೊತೆಗೆ ಕುಸುಬೆ ಗಾಣದ ಎಣ್ಣೆ ತರಲು ಕುರಕುಂಟಾ ಕಡೆಗೆ ತೆರಳುತ್ತಿದ್ದರು. ಹಿಂಬದಿಯಿಂದ ಬಂದ ಸುಭಾಷ ಎಂಬ ಬೈಕ್ ಸವಾರ ವೇಗದಲ್ಲಿ ಸಿದ್ದಪ್ಪ ಮಂಗದ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಕೋಡ್ಲಿ ಗ್ರಾಮದ ನಿವಾಸಿ ಸುಭಾಷ ಎನ್ನುವವರಿಗೆ ಗಾಯವಾಗಿದೆ. ಈ ಕುರಿತು ಕುರಕುಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT