ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಸಚಿವರ ಕ್ಷೇತ್ರದಲ್ಲಿ ಅಧ್ವಾನ ರಸ್ತೆ

ರಾಜ್ಯ ಹೆದ್ದಾರಿಯಲ್ಲಿ ಕೆಸರು ಗದ್ದೆ ಹಾಗೂ ಹೊಂಡಗಳದ್ದೇ ಕಾರುಬಾರು
Published 17 ಆಗಸ್ಟ್ 2024, 5:42 IST
Last Updated 17 ಆಗಸ್ಟ್ 2024, 5:42 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಕ್ರಾಸ್‌ನಿಂದ ಬುರುಗಪಳ್ಳಿವರೆಗೆ ಮುರ್ಕಿ ಹಂದರಕಿ ರಾಜ್ಯ ಹೆದ್ದಾರಿ 122ರಲ್ಲಿ ಹೊಂಡಗಳು ನಿರ್ಮಾಣವಾಗಿವೆ.

ರಸ್ತೆಯ ತುಂಬಾ ಬೃಹತ್ ಹೊಂಡಗಳು ತಲೆ ಎತ್ತಿದ್ದು, ಒಂದೊಂದು ಹೊಂಡ ಮೊಳಕಾಲುದ್ದ ಆಳ ಹೊಂದಿದ್ದರಿಂದ ಈ ರಸ್ತೆಯಲ್ಲಿ ಸಂಚಾರವೇ ಸಂಚಕಾರ ಉಂಟು ಮಾಡುವಂತಾಗಿದೆ. ಈ ಹೆದ್ದಾರಿಯಿಂದ ಕಲಬುರಗಿ ಸಿಮೆಂಟ್ ಕಂಪನಿಯ ವಾಹನಗಳು ಜತೆಗೆ ಚೆಟ್ಟಿನಾಡ ಸಿಮೆಂಟ್ ಕಂಪೆನಿಯ ವಾಹನಗಳು ಸಂಚರಿಸುತ್ತವೆ. ಹೀಗಾಗಿ ರಸ್ತೆಯ ಹೊಂಡಗಳು ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿಕೊಡಲು ಚೆಟ್ಟಿನಾಡ್ ಸಿಮೆಂಟ್ ಕಂಪೆನಿಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ನಿನ್ನೆಯಿಂದ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಎಇಇ ಬಸವರಾಜ ಬೈನೂರು ತಿಳಿಸಿದರು.

ಬುರುಗಪಳ್ಳಿಯಿಂದ ಕುಂಚಾವರಂ(ಕಲ್ಲೂರು) ಕ್ರಾಸ್ ವರೆಗೆ ರಸ್ತೆ ಅಪಾಯ ಆಹ್ವಾನಿಸುವಂತಿದೆ. ಮಳೆಗಾಲದಲ್ಲಿ ಹೊಂಡಗಳು ನೀರು ತುಂಬಿಕೊಂಡಿದ್ದರಿಂದ ಅವುಗಳ ಗಾತ್ರ ಅರಿಯದೇ ವಾಹನ ಸವಾರರು ಬೀಳುತ್ತಿದ್ದಾರೆ. ಚಿಕ್ಕ ಕಾರುಗಳು ಸಂಚರಿಸುವುದೇ ಸಾಹಸ ಎನ್ನುವಂತಾಗಿದೆ. ಇದರಿಂದ ಇಲ್ಲಿಗೆ ಸಂಚರಿಸುವ ಬಸ್ ನಿತ್ಯ ಫಾಟಾ ಮುರಿಯುತ್ತಿವೆ. ಆದರೂ ಮಕ್ಕಳ ಹಿತದೃಷ್ಟಿಯಿಂದ ಬಸ್ ಓಡಿಸುತ್ತಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರು ಪ್ರತಿನಿಧಿಸುವ ಸೇಡಂ ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ಚಿಂಚೋಳಿ ಸೇಡಂ ಮತ್ತು ತಾಂಡೂರು ಸಂಪರ್ಕ ಬೆಸೆಯುವ ಈ ಹೆದ್ದಾರಿ ಕುಂಚಾವರಂ ಕ್ರಾಸ್‌ನಿಂದ ನಿಡಗುಂದಾವರೆಗೆ ಸಂಪೂರ್ಣ ಕೆಟ್ಟು ಹೋಗಿತ್ತು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರು ಅವರ ಅವಧಿಯಲ್ಲಿ ನಿಡಗುಂದಾದಿಂದ ಚತ್ರಸಾಲ ಗ್ರಾಮದ ಗಡಿವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಆದಷ್ಟು ಬೇಗ ಈ ಹೆದ್ದಾರಿಗೆ ಕಾಯಕಲ್ಪ ನೀಡಬೇಕು ಎಂದು ಸ್ಥಳೀಯ ಜನರು ಒತ್ತಾಯಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಗಣಾಪುರ ಬಳಿ ರಾಜ್ಯ ಹೆದ್ದಾರಿಯೂ ಗದ್ದೆಯಂತೆ ಗೋಚರಿಸಿತು
ಚಿಂಚೋಳಿ ತಾಲ್ಲೂಕಿನ ಗಣಾಪುರ ಬಳಿ ರಾಜ್ಯ ಹೆದ್ದಾರಿಯೂ ಗದ್ದೆಯಂತೆ ಗೋಚರಿಸಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT