ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಕುಡಿಯುವ ನೀರಿಗಾಗಿ ನಿತ್ಯ ಪರದಾಟ

ಮಾಶಾಳ: ಬತ್ತಿದ ಜಲಮೂಲಗಳು
Published 2 ಏಪ್ರಿಲ್ 2024, 4:54 IST
Last Updated 2 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನಲ್ಲಿ ದೊಡ್ಡ ಗ್ರಾಮ ಮತ್ತು ಕೊನೆಯ ಗ್ರಾಮವಾಗಿರುವ ಮಾಶಾಳದಲ್ಲಿ ಜಲಮೂಲಗಳು ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ನಿತ್ಯ ಸುಮಾರು 18 ಸಾವಿರ ಜನ ಪರದಾಡುವಂತೆ ಆಗಿದೆ.

ಮಾಶಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 28 ವಾರ್ಡ್‌ಗಳಿದ್ದು ಪ್ರತಿ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿದು ಹೋಗಿದೆ. ಗ್ರಾಮ ಪಂಚಾಯಿತಿಯವರು ವಾರಕ್ಕೆ ಒಂದು ಬಾರಿ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಇನ್ನೂ ಎರಡು ವಾರ ಕಳೆದರೆ ಅದೂ ಅಸಾಧ್ಯವಾಗಲಿದೆ. ಅದಕ್ಕಾಗಿ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು’ ಎಂದು ಹೇಳುತ್ತಿದ್ದಾರೆ.

ಈ ಬಗ್ಗೆ ಎಂಜಿನಿಯರ್‌ ಬಾಬುರಾವ್ ಜ್ಯೋತಿ ಅವರನ್ನ ವಿಚಾರಿಸಿದಾಗ, ‘ಮಾಶಾಳ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತೇನೆ. ಹೊಸದಾಗಿ ಕೊಳವೆಬಾವಿ ಕೊರೆಯಲು ಅವಕಾಶವಿದ್ದರೆ ಕೊರೆಯಲಾಗುವುದು. ಯಾರಾದರೂ ಖಾಸಗಿಯಾಗಿ ನೀರು ಕೊಡುತ್ತಿದ್ದರೆ, ಅವರಿಂದ ಪಡೆದು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಬಗ್ಗೆ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಶಿವು ಪ್ಯಾಟಿ ಮಾಹಿತಿ ನೀಡಿ, ‘ಈಗಾಗಲೇ ಗ್ರಾಮಕ್ಕೆ ತಹಶೀಲ್ದಾರ್‌ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ದಾರೆ. ಆದರೆ ಇನ್ನೂ ಯಾವುದೇ ವ್ಯವಸ್ಥೆ ಮಾಡಿಲ್ಲ. ಗ್ರಾಮದಲ್ಲಿ ಖಾಸಗಿಯವರು ನೀರು ಕೊಡಲು ಮುಂದೆ ಬಂದಿದ್ದು, ಆ ಬಗ್ಗೆ ತಹಶೀಲ್ದಾರರು ನಿರ್ಧಾರ ತೆಗೆದುಕೊಳ್ಳಬೇಕು. ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಬೇಕು. ಗ್ರಾಮದಲ್ಲಿ ಸುಮಾರು 18 ಸಾವಿರ ಜನಸಂಖ್ಯೆ ಇದೆ. ಅದಕ್ಕಾಗಿ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎಂದರು. 

ಕೊಳವೆಬಾವಿಗಳ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅದಕ್ಕಾಗಿ ತಾಲ್ಲೂಕು ಆಡಳಿತ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು

-ಶಿವ ಪ್ಯಾಟಿ ಗ್ರಾ.ಪಂ. ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT