ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ತಂಪು ಪಾನೀಯ ಇರಿಸಿದ ಮಳಿಗೆ ಮಾಲೀಕರಿಗೆ ನೋಟಿಸ್ ನೀಡಲು ಸೂಚನೆ

ಗಂಜ್‌ನಲ್ಲಿ ತಂಪು ಪಾನೀಯ ದಾಸ್ತಾನು ಮಾಡಿದ ಮಳಿಗೆಗಳ ಮಾಲೀಕರು
Published 27 ನವೆಂಬರ್ 2023, 5:44 IST
Last Updated 27 ನವೆಂಬರ್ 2023, 5:44 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಗಂಜ್‌ನ ಪ್ರದೇಶದ ಎಪಿಎಂಸಿ ಆವರಣದ ಕೆಲ ಮಳಿಗೆಗಳಲ್ಲಿ ಪೆಪ್ಸಿ, ಫಂಟಾದಂತಹ ತಂಪು ಪಾನೀಯಗಳನ್ನು ಸಂಗ್ರಹಿಸಿಡಲಾಗಿದೆ. ಎಪಿಎಂಸಿ ಇರುವುದು ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ. ಹೀಗಾಗಿ, ನಿಯಮಬಾಹಿರವಾಗಿ ತಂಪು ಪಾನೀಯ ಇರಿಸಿದ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ನಿರ್ದೇಶಕ ಗಂಗಾಧರಸ್ವಾಮಿ ಜಿ.ಎಂ. ಅವರು ಎಪಿಎಂಸಿ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಇಲ್ಲಿನ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಕೆಸಿಸಿಐ) ಆಯೋಜಿಸಿದ್ದ ಎಪಿಎಂಸಿ ವರ್ತಕರೊಂದಿಗಿನ ಸಂವಾದದಲ್ಲಿ ವಿವಿಧ ವಲಯದ ವರ್ತಕರ ಅಹವಾಲು ಆಲಿಸಿದ ಬಳಿಕ ಮಾತನಾಡುವ ಸಂದರ್ಭದಲ್ಲಿ ಈ ಸೂಚನೆ ನೀಡಿದರು.

‘ಕೆಲವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಎರಡು, ಮೂರು ಲೈಸೆನ್ಸ್ ಮಾಡಿಕೊಂಡಿದ್ದಾರೆ. ಎಪಿಎಂಸಿ ಆವರಣದಲ್ಲಿ ತಮ್ಮ ಅಂಗಡಿಯ ಮುಂಭಾಗದಲ್ಲಿಯೇ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡುತ್ತಾರೆ. ಧಾನ್ಯ ಸಂಗ್ರಹಾಗಾರವನ್ನು ಪಾರ್ಕಿಂಗ್ ಮಾಡಿಕೊಂಡಿದ್ದಾರೆ. ಹೀಗಾದರೆ ಹೇಗೆ? ಇಲಾಖೆಯಿಂದ ಆಗಬೇಕಾದ ಕೆಲಸಗಳ ಬಗ್ಗೆ ಹಕ್ಕಿನಿಂದ ಕೇಳುವವರು ಕರ್ತವ್ಯಗಳನ್ನೂ ಮಾಡಬೇಕಲ್ಲವೇ?’ ಎಂದು ಸಭೆಯಲ್ಲಿದ್ದ ವರ್ತಕರನ್ನು ಪ್ರಶ್ನಿಸಿದರು.

‘ನಿಯಮಗಳು ನನಗೂ ಒಂದೇ, ನಿಮಗೂ ಒಂದೇ, ರೈತರಿಗೂ ಒಂದೇ. ಕೆಲ ದಿನಗಳಲ್ಲಿ ಇನ್ನಷ್ಟು ಬಿಗಿ ನಿಯಮಗಳನ್ನು ಕೈಗೊಳ್ಳಲಾಗುವುದು. ಲೈಸೆನ್ಸ್ ವಿತರಣೆಯಲ್ಲಿ ಪಾರದರ್ಶಕತೆ ಇಲ್ಲದ್ದಕ್ಕೆ ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಕೆಲ ವ್ಯಾಪಾರಿಗಳು ತಪ್ಪು ಮಾಹಿತಿ ನೀಡಿ ಅತ್ಯಂತ ಕಡಿಮೆ ಸೆಸ್ ಪಾವತಿಸುತ್ತಾರೆ. ಒಂದು ಲಕ್ಷ ಸೆಸ್ ಸಂಗ್ರಹಿಸಬಹುದಾದ ಸಂದರ್ಭಗಳಲ್ಲಿ ಕೇವಲ ₹ 300 ಸೆಸ್ ಪಡೆದರೂ ಅದಕ್ಕೂ ತಕರಾರು ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲ ಬೇಡಿಕೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಈಡೇರಿಸಲಾಗುವುದು. ಈ ಕುರಿತು ಮುಖಾಮುಖಿ ಚರ್ಚಿಸಲು ಬೆಳಗಾವಿ ಅಧಿವೇಶನ ಮುಗಿದ ಬಳಿಕ ಕಲಬುರಗಿಗೆ ಬರುತ್ತೇನೆ‘ ಎಂದು ಭರವಸೆ ನೀಡಿದರು.

‘ಸಂಗ್ರಹವಾಗುವ ತ್ಯಾಜ್ಯವನ್ನು ಬಳಸಿ ಇಂಧನ ತಯಾರಿಸಲು ರಾಜ್ಯದ ಆರು ಎಪಿಎಂಸಿಗಳಲ್ಲಿ ಬಯೊ ಸಿಎನ್‌ಜಿ ಘಟಕ ಆರಂಭಿಸುವ ಪ್ರಸ್ತಾವ ಇದೆ’ ಎಂದರು.

ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ, ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ ಮಾನಕರ ಇದ್ದರು.

ಗಂಜ್‌ನಲ್ಲಿ ಕಳ್ಳತನವಾಗುವುದನ್ನು ತಡೆಯಲು ಬೀಟ್ ಪೊಲೀಸರನ್ನು ನಿಯೋಜಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆಯುತ್ತೇನೆ
–ಗಂಗಾಧರಸ್ವಾಮಿ ಜಿ.ಎಂ. ಎಪಿಎಂಸಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT