ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳಿಗೆ ಸಾಮಾಜಿಕ ಅರಿವು ಅಗತ್ಯ: ಪ್ರೊ. ರಮೇಶ್ ಲಂಡನಕರ್

Published 17 ಡಿಸೆಂಬರ್ 2023, 4:20 IST
Last Updated 17 ಡಿಸೆಂಬರ್ 2023, 4:20 IST
ಅಕ್ಷರ ಗಾತ್ರ

ಕಲಬುರಗಿ: ‘ವಿದ್ಯಾರ್ಥಿಗಳು ಸಮಾಜದ ಕುರಿತು ಅರಿವು ಮೂಡಿಸಿಕೊಳ್ಳಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಲಂಡನಕರ್ ಸಲಹೆ ನೀಡಿದರು.

ನಗರದಲ್ಲಿ ಶನಿವಾರ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಒ) ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞಾಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ’ ಎಂದರು.

ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ ಬೆಟ್ಟದಕೊಪ್ಪ ಮಾತನಾಡಿ, ‘ವಿದ್ಯಾರ್ಥಿಗಳ ಹೋರಾಟದಿಂದಾಗಿ ಬಡವರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವಂತಹ ನೂತನ ಶಿಕ್ಷಣ ನೀತಿ 2020 ರಾಜ್ಯದಲ್ಲಿ ತೆಗೆದು ಹಾಕಲು ಸಾಧ್ಯವಾಯಿತು’ ಎಂದು ಹೇಳಿದರು.

‘ರಾಜ್ಯ ಶಿಕ್ಷಣ ನೀತಿಯಲ್ಲಿ ಸರ್ಕಾರಿ ಶಾಲಾ– ಕಾಲೇಜುಗಳ ನಿರ್ವಹಣೆಯ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳ ಹಣದ ಮೇಲೆ ಅವಲಂಬನೆ ಆಗಬಾರದು. ಕಡಿಮೆ ದಾಖಲಾತಿಯ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಹಾಗೂ ಮುಚ್ಚುವುದನ್ನು ನಿಲ್ಲಿಸಬೇಕು’ ಎಂದರು.

‘ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಂಸ್ಥಿಕ ಕಂಪನಿಗಳ ಬಳಿ ಧನ ಸಹಾಯ ಪಡೆಯುವ ಬದಲು, ಜನರಿಂದ ಸಂಗ್ರಹಿಸಿರುವ ತೆರಿಗೆಯ ಹಣವನ್ನೇ ಭರಿಸಬೇಕು. ವಿದೇಶಿ ನೇರ ಬಂಡವಾಳ ಹೂಡಿಕೆ ಹೆಸರಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳನ್ನು ತೆರೆಯಲು ಅವಕಾಶ ಕೊಡಬಾರದು. ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಶಿಕ್ಷಣದ ಹೆಸರಿನಲ್ಲಿ ಮೌಲ್ಯಗಳನ್ನು ಕಡೆಗಣಿಸಬಾರದು’ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಐಡಿಎಸ್ಒ ಜಿಲ್ಲಾ ಅಧ್ಯಕ್ಷ ಎಸ್.ಎಚ್. ಹಣಮಂತ ಮಾತನಾಡಿ, ‘ವಿದ್ಯಾರ್ಥಿಗಳ ಬೇಡಿಕೆಗಳಂತೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ವಾಡಿ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ತೆರೆಯಬೇಕು. ಜಿಲ್ಲೆಯಾದ್ಯಂತ ಪ್ರತಿ ಗ್ರಾಮಕ್ಕೂ ವಿದ್ಯಾರ್ಥಿಗಳ ಸಮಯಕ್ಕೆ ಅನುಗುಣವಾಗಿ ಬಸ್‌ಗಳನ್ನು ಓಡಿಸುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ತುಳಜರಾಮ, ಜಿಲ್ಲಾ ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ, ಸದಸ್ಯರಾದ ವೆಂಕಟೇಶ ದೇವದುರ್ಗ, ಪ್ರೀತಿ ದೊಡ್ಡಮನಿ, ಗೋವಿಂದ ಯಳವಾರ, ನಾಗರಾಜ್, ಸಿದ್ಧಾರ್ಥ, ಅಜಯ್, ಸ್ಪೂರ್ತಿ, ರಾಹುಲ್, ಯುವರಾಜ್, ಬಾಬು ಪಾಲ್ಗೊಂಡಿದ್ದರು.

ನೂತನ ಜಿಲ್ಲಾ ಸಮಿತಿ ರಚನೆ
ಜಿಲ್ಲಾ ಮಟ್ಟದ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು. ಸ್ನೇಹಾ ಕಟ್ಟಿಮನಿ (ಜಿಲ್ಲಾಧ್ಯಕ್ಷೆ) ಪ್ರೀತಿ ದೊಡ್ಡಮನಿ ಗೋವಿಂದ ಯಳವಾರ ನಾಗರಾಜ ರಾವೂರ (ಜಿಲ್ಲಾ ಉಪಾಧ್ಯಕ್ಷರು) ಎನ್.ಕೆ. ತುಳಜರಾಮ (ಕಾರ್ಯದರ್ಶಿ) ವೆಂಕಟೇಶ ದೇವದುರ್ಗ (ಖಜಾಂಚಿ) 23 ಜನರ ಕಾರ್ಯದರ್ಶಿ ಮಂಡಳಿ ಹಾಗೂ 42 ಜನ ವಿದ್ಯಾರ್ಥಿಗಳ ಸಮಿತಿಯನ್ನು ರಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT