ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಂಬರ್ಗಾ: ಗ್ರಾ.ಪಂ ಪಿಡಿಒ ಅಮಾನತು

ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ: ಆರೋಗ್ಯ ವಿಚಾರಿಸಿದ ಶಾಸಕ ಪಾಟೀಲ
Published : 2 ಅಕ್ಟೋಬರ್ 2024, 16:07 IST
Last Updated : 2 ಅಕ್ಟೋಬರ್ 2024, 16:07 IST
ಫಾಲೋ ಮಾಡಿ
Comments

ಆಳಂದ: ಕಲುಷಿತ ನೀರು ಕುಡಿದು ವಾಂತಿ– ಭೇದಿ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿ ತಾಲ್ಲೂಕಿನ ನಿಂಬರ್ಗಾ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ.

‘ಶಾಸಕರ ಸೂಚನೆ ಮೇರೆಗೆ ಪಿಡಿಒ ಸುಕನ್ಯಾ ಅವರನ್ನು ಅಮಾನತುಗೊಳಿಸಿ ಆ ಜಾಗಕ್ಕೆ ತಕ್ಷಣ ಪ್ರವೀಣ ಅವರನ್ನು ನಿಯೋಜಿಸಲಾಗಿದೆ’ ಎಂದು ತಾ.ಪಂ ಇಒ ಮಾನಪ್ಪ ಕಟ್ಟಿಮನಿ ತಿಳಿಸಿದರು.

ಗ್ರಾಮ ಪಂಚಾಯಿತಿಯಿಂದ ಪೂರೈಕೆಯಾದ ಕಲುಷಿತ ನೀರು ಕುಡಿದು ವಾಂತಿ, ಭೇದಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ರಾಮಸ್ಥರ ಆರೋಗ್ಯವನ್ನು ಮಂಗಳವಾರ ಶಾಸಕ, ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ ವಿಚಾರಿಸಿದರು.

ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ಮಾಣಪ್ಪ ಕಟ್ಟಿಮನಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಶೀಲಕುಮಾರ ಅಂಬೂರೆ ಜತೆಗಿದ್ದರು.

‘40ಕ್ಕೂ ಹೆಚ್ಚು ಜನರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದು 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಸಮಸ್ಯೆ ಇಲ್ಲ, ಮುನ್ನೆಚ್ಚೆರಿಕೆ ದೃಷ್ಟಿಯಿಂದ ಗ್ರಾಮದ ಮನೆಗಳಿಗೆ ಗ್ರಾ.ಪಂ ವತಿಯಿಂದ ಮಿನರಲ್‌ ನೀರನ್ನು ಸರಬರಾಜು ಮಾಡಲಾಗಿದೆ. ಸ್ಥಳೀಯ ವೈದ್ಯರು, ಗ್ರಾ.ಪಂ ಸಿಬ್ಬಂದಿ ರಾತ್ರಿ ಸ್ಥಳದಲ್ಲಿದ್ದು ನಿಗಾವಹಿಸಲು ತಿಳಿಸಿಲಾಗಿದೆ’ ಎಂದು ತಹಶೀಲ್ದಾರ್‌ ಅಣ್ಣಾರಾವ ಪಾಟೀಲ ಮಾಹಿತಿ ನೀಡಿದರು.

‘ಕುಡಿಯಲು ನಿರಂತರವಾಗಿ ಅಶುದ್ಧ ನೀರನ್ನೇ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ವಾಂತಿ, ಭೇದಿ ಉಲ್ಬಣಿಸಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.  

ಸ್ವಚ್ಛತೆ ಕಾಪಾಡಲು ಸೂಚನೆ: ಶಾಸಕ ಬಿ.ಆರ್.ಪಾಟೀಲ ಅವರು ಸಮುದಾಯ ಆರೋಗ್ಯ ಕೇಂದ್ರ, ನೀರಿನ ಟ್ಯಾಂಕ್ ಹಾಗೂ ಸ್ವಚ್ಛತೆ ಪರಿಶೀಲಿಸಿದ ಬಳಿಕ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿದರು. ‘ಸದಸ್ಯರು, ಪಿಡಿಒ, ಸಿಬ್ಬಂದಿ ಗ್ರಾಮದಲ್ಲಿನ ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಬೀದಿ ದೀಪ ಮತ್ತಿತರ ಮೂಲಸೌಲಭ್ಯ ಒದುಗಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

‘ಸಿಬ್ಬಂದಿ ಕಾರ್ಯ ಚಟುವಟಿಕೆ ಮೇಲೆ ಎಚ್ಚರವಹಿಸಬೇಕು’ ಎಂದು ಗ್ರಾ.ಪಂ ಅಧ್ಯಕ್ಷ, ಪಿಡಿಒ ಅವರಿಗೆ ತಿಳಿಸಿದ ಅವರು, ‘ಪಂಪ್‌ ಆಪರೇಟರ್‌ಗಳು ತಿಂಗಳಿಗೊಮ್ಮೆ ಟ್ಯಾಂಕ್‌ ಸ್ವಚ್ಛಗೊಳಿಸುವದು, ಬ್ಲೀಚಿಂಗ್‌ ಪೌಡರ್‌ ಬಳಕೆ ಮಾಡಬೇಕು. ನಿರ್ಲಕ್ಷಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಗ್ರಾ.ಪಂ ಅಧ್ಯಕ್ಷೆ ರೇಖಾಬಾಯಿ ಅಧಿಕಾರಿಗಳು, ಸದಸ್ಯರು ಹಾಜರಿದ್ದರು.

ಲೋಕಾಯುಕ್ತ ಪಿಎಸ್‌ಐ ಭೇಟಿ: ನಿಂಬರ್ಗಾ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಘಟನೆ ವರದಿಯಾದ ಹಿನ್ನಲೆಯಲ್ಲಿ ಲೋಕಾಯುಕ್ತ ಪಿಎಸ್‌ಐ ಅಕ್ಕಮಹಾದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು.

ಗ್ರಾಮದಲ್ಲಿನ ವಿವಿಧ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಪರಿಶೀಲಿಸಿದರು. ಪಿಎಸ್‌ಐ ರಾಜಶೇಖರ ಮತ್ತಿತರ ಸಿಬ್ಬಂದಿ ಹಾಜರಿದ್ದರು.

ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ನೀರಿನ ಟ್ಯಾಂಕ್‌ನ್ನು ಶಾಸಕ ಬಿ.ಆರ್.ಪಾಟೀಲ ಪರಿಶೀಲಿಸಿದರು
ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ನೀರಿನ ಟ್ಯಾಂಕ್‌ನ್ನು ಶಾಸಕ ಬಿ.ಆರ್.ಪಾಟೀಲ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT