ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದ: ಸಂಭ್ರಮದ ಮದ್ದಿನ ಹುಲಿ ಓಡಿಸುವ ಉತ್ಸವ

ದೇಗಾಂವ ಹನುಮಾನ ದೇವರ-ಶೇಖ ಜೀಂದಾವಲಿ ಜಾತ್ರೆ
Published 18 ಮೇ 2024, 15:25 IST
Last Updated 18 ಮೇ 2024, 15:25 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಶನಿವಾರ ಹನುಮಾನ ದೇವರ ಹಾಗೂ ಶೇಖ ಜೀಂದಾವಲಿಯ ಭಾವೈಕ್ಯತೆಯ ಜಾತ್ರೆಯಲ್ಲಿ ನಡೆದ ಮದ್ದಿನ ಹುಲಿ ಓಡಿಸುವ ಉತ್ಸವವು ಸಂಭ್ರಮದಿಂದ ಜರುಗಿತು.

ಗ್ರಾಮದ ಮುಖ್ಯಬೀದಿಗಳಲ್ಲಿ ಮದ್ದಿನ ಹುಲಿ ಓಡಿಸುವ ರೋಮಾಂಚನವು ಕಣ್ತುಂಬಿಕೊಳ್ಳಲು ಸುತ್ತಲಿನ ಗ್ರಾಮದ ಭಕ್ತರು ದೇಗಾಂವ ಗ್ರಾಮಕ್ಕೆ ಬೆಳಿಗ್ಗೆಯೇ ಆಗಮಿಸಿದರು. ಹಿಂದೂ-ಮುಸ್ಲಿಮರು ಒಬ್ಬರೂ ಸಾಮರಸ್ಯದಿಂದ ಎರಡು ಜಾತ್ರೆಯು ಏಕಕಾಲದಲ್ಲಿ ಆಚರಿಸುವುದು ವಿಶೇಷವಾದುದು.

ಈ ಬಾರಿ ಶಾಸಕರ ಪುತ್ರ ಸತ್ಯಜೀತ ಬಿ. ಪಾಟೀಲ, ದೇಗಾಂವನ ಮಲ್ಲಮ್ಮ ಬಿರಾದಾರ, ದೇವರಾಯ ಪಾಟೀಲ, ಶೇಖರ ಬಿರಾದಾರ ಹಾಗೂ ಮಹಾಗಾಂವ, ಬಿಲಗುಂದಿ ಗ್ರಾಮದ ಭಕ್ತರ ಹರಕೆಹೊತ್ತ 6 ಮದ್ದಿನ ಹುಲಿಗಳ ಗೊಂಬೆಗಳನ್ನು ಕಟ್ಟಿಗೆಯಿಂದ ಸಿದ್ಧಪಡಿಸಿ, ಹುಲಿ ಬಣ್ಣದಿಂದ ಸಿಂಗರಿಸಿ ಗ್ರಾಮದ ಮುಖ್ಯಬೀದಿಗೆ ಹಲಗೆ, ವಿವಿಧ ವಾದ್ಯಗಳ ಸಡಗರದೊಂದಿಗೆ ಕರೆತರಲಾಯಿತು.

ಗ್ರಾಮದ ಸರ್ಕಾರಿ ಶಾಲೆ ಎದುರು ರಸ್ತೆಯಿಂದ ಹನುಮಾನ ದೇವಸ್ಥಾನದವರೆಗೂ 400 ಮೀ. ಉದ್ದದ ಹಗ್ಗದ ಕಂಬಿ ಮೇಲೆ ಮದ್ದಿನ ಹುಲಿ ಓಡುವುದು ಜಾತ್ರೆಯ ವಿಶೇಷ. ಈ ಮದ್ದಿನ ಗೊಂಬೆಗೆ ಮದ್ದುಗಾರರು ಪೂಜೆ ಸಲ್ಲಿಸಿ, ಬೆಂಕಿಯ ಕಿಡಿ ಸ್ಪರ್ಶಿಸಿದರೆ ಕ್ಷಣಾರ್ಧದಲ್ಲಿ ಮದ್ದಿನ ಹುಲಿಗಳ ಪಟಾಕಿ ಸದ್ದು, ಹಗ್ಗದ ಮೇಲೆ ಹುಲಿಗೊಂಬೆಯು ವೇಗವಾಗಿ ಸಾಗುತ್ತದೆ. ಜತೆಗೆ ಯುವಕರ ಕೇಕೆ, ಜೈಕಾರಗಳು, ಚಪ್ಪಾಳೆಯು ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಸರದಿಯಲ್ಲಿ 6 ಹುಲಿಗೊಂಬೆಗಳನ್ನು ಓಡಿಸಿದ ನಂತರ ಹುಲಿ ತಯಾರಿಸಿದ ನುರಿತ ಮದ್ದುಗಾರರಾದ ಬಸವರಾಜ ಮಳಕುಂಬೆ, ಶೇಖರ ಬಿರಾದಾರ, ಸುಭಾಷ ಲಾಡವಂತಿ ಅವರನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಕರೆತಂದು ವಿಶೇಷವಾಗಿ ಸತ್ಕರಿಸಿದರು.

ಮುನ್ನೋಳ್ಳಿ, ಬಸವಣ್ಣ ಸಂಗೋಳಗಿ, ತಡಕಲ, ಕಣಮಸ, ಬಿಲಗುಂದಾ, ಸನಗುಂದಾ, ಹಳ್ಳಿ ಸಲಗರ, ನರೋಣಾ, ಬಬಲಾದ, ಕಣಮಸ, ತಂಬಕವಾಡಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

ನಂತರ ಹನುಮಾನ ದೇವಸ್ಥಾನದ ಆವರಣದಲ್ಲಿ ಜನಪದ ಕಲಾವಿದರಿಂದ ಗೀಗೀ ಪದಗಳ ಗಾಯನ ನಡೆಯಿತು. ಸಂಜೆ ಜಂಗೀ ಪೈಲ್ವಾನರ ಕುಸ್ತಿಗಳು ನಡೆದವು.

ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಮದ್ದಿನ ಹುಲಿ ಓಡಿಸುವ ಆಚರಣೆಯು ಸಂಭ್ರಮದಿಂದ ಜರುಗಿತು.
ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಮದ್ದಿನ ಹುಲಿ ಓಡಿಸುವ ಆಚರಣೆಯು ಸಂಭ್ರಮದಿಂದ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT