ಭ್ರಷ್ಟಾಚಾರದಲ್ಲಿ ತೊಡಗಿದ ಪುರಸಭೆ ಮುಖ್ಯಾಧಿಕಾರಿ: ಶಾಸಕ ಗುತ್ತೇದಾರ ಆರೋಪ

ಗುರುವಾರ , ಜೂಲೈ 18, 2019
23 °C
‘ಅಧಿಕಾರಿಗಳಿಗೆ ಮಾಜಿ ಶಾಸಕ ಬಿ.ಆರ್‌.ಪಾಟೀಲ ಅಭಯ’

ಭ್ರಷ್ಟಾಚಾರದಲ್ಲಿ ತೊಡಗಿದ ಪುರಸಭೆ ಮುಖ್ಯಾಧಿಕಾರಿ: ಶಾಸಕ ಗುತ್ತೇದಾರ ಆರೋಪ

Published:
Updated:
Prajavani

ಕಲಬುರ್ಗಿ: ‘ಆಳಂದ ಪುರಸಭೆಗೆ ಪೌರಕಾರ್ಮಿಕರನ್ನು ನೇಮಕ ಮಾಡುವ ಸಂದರ್ಭದಲ್ಲಿ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಅವರು ಸಾಕಷ್ಟು ಭ್ರಷ್ಟಾಚಾರ ಎಸಗಿದ್ದು, ಕಾರ್ಮಿಕರ ಪೈಕಿ ಕೆಲವರನ್ನು ಸ್ವಚ್ಛತಾ ಕೆಲಸದ ಬದಲು ಕಚೇರಿ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಆಳಂದ ಪಟ್ಟಣ ಗಬ್ಬು ನಾರುತ್ತಿದೆ’ ಎಂದು ಶಾಸಕ ಸುಭಾಷ್‌ ಆರ್‌. ಗುತ್ತೇದಾರ ಟೀಕಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‍ಮುಖ್ಯಾಧಿಕಾರಿ ಬೇಜವಾಬ್ದಾರಿಯಿಂದಾಗಿ ಪಟ್ಟಣ ಗಬ್ಬೆದ್ದು ನಾರುತ್ತಿದೆ. ಮಳೆಗಾಲ ಶುರುವಾಗಿದ್ದರಿಂದ ಮಳೆ ನೀರಿನಿಂದ ಅಲ್ಲಲ್ಲಿ ಚರಂಡಿಗಳು ಕಟ್ಟಿಕೊಂಡು ರಸ್ತೆ, ಮನೆಗಳಲ್ಲಿ ನೀರು ಹರಿದಾಡುತ್ತಿದೆ. ಈ ಕುರಿತು ಸಾರ್ವಜನಿಕರು ಪ್ರಶ್ನಿಸಿದರೆ ಮುಖ್ಯಾಧಿಕಾರಿ ಕಾರ್ಮಿಕರ ಕೊರತೆ ಎಂಬ ಸಿದ್ಧ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2017–18ರ ಸಾಲಿನ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಮಂಜೂರಾದ ₹ 80 ಲಕ್ಷ ಮೊತ್ತದ ಶೌಚಾಲಯಗಳನ್ನು ನಿರ್ಮಿಸದೇ ಗುತ್ತಿಗೆದಾರನೊಂದಿಗೆ ಶಾಮೀಲಾಗಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದೂ ಗುತ್ತೇದಾರ ಆರೋಪಿಸಿದರು.

ಡಿವೈಎಸ್ಪಿ ಟಿ.ಎಸ್‌.ಸುಲ್ಫಿ ಅವರು ದಲಿತ ಯುವಕ ರಾಹುಲ್‌ ಬೀಳಗಿ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದ ಸುನೀಲ ಪಾಟೀಲ, ಸಂಜೀವಕುಮಾರ್‌ ಪಾಟೀಲ, ಬಸವರಾಜ ಪಾಟೀಲ, ಗುಂಡೇರಾವ್‌ ‍ಪಾಟೀಲ ಹಾಗೂ ಗುರುಗೌಡ ಪಾಟೀಲ ಅವರನ್ನು ಲಂಚ ಪಡೆದು ಆರೋಪ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿ ಸುಲ್ಫಿ ಅವರು ಮುಂದುವರಿದರೆ ಬಡ ದಲಿತ ಕುಟುಂಬಕ್ಕೆ ಅನ್ಯಾಯವಾಗುವುದು ಶತಃಸಿದ್ಧ ಎಂದು ಎಚ್ಚರಿಸಿದರು.

‘ತಾಲ್ಲೂಕಿನ ಆಹಾರ ಧಾನ್ಯಗಳನ್ನು ಹೊರರಾಜ್ಯಕ್ಕೆ ಅಕ್ರಮವಾಗಿ ಸಾಗಣಿಕೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲವನ್ನು ಶಿವಾನಂದ ಜಮಾದಾರ ಎಂಬುವವರು ನಡೆಸಿಕೊಂಡು ಬರುತ್ತಿದ್ದು, ಸ್ವತಃ ನಾನೇ ದಾಳಿ ಮಾಡಿ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮತ್ತು ಅದರ ಸಿಬ್ಬಂದಿಯನ್ನು ಆಹಾರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರಿಗೆ ಒಪ್ಪಿಸಲಾಗಿತ್ತು. ಆಹಾರ ಇಲಾಖೆ ಉಪನಿರ್ದೇಶಕರರೂ ಅಕ್ರಮ ಸಾಗಾಣಿಕೆದಾರರ ವಿರುದ್ಧ ಲಿಖಿತ ದೂರು ನೀಡಿದ್ದರೂ ಆರೋಪಿಗಳಿಂದ ಹಣ ಪಡೆದು ಪ್ರಕರಣ ರದ್ದುಗೊಳಿಸಿದ್ದಾರೆ’ ಎಂದು ಟೀಕಿಸಿದರು.

ಇದಕ್ಕೆಲ್ಲ ಮಾಜಿ ಶಾಸಕ ಬಿ.ಆರ್‌.ಪಾಟೀಲ ಕುಮ್ಮಕ್ಕಿದೆ ಎಂದು ಆರೋಪಿಸಿದರು.

‘ಈಗ ಶಾಸಕರಲ್ಲದಿದ್ದರೂ ತಮ್ಮ ಅವಧಿಯಲ್ಲಿ ನಿರ್ಮಾಣಗೊಂಡ ಚೆಕ್‌ ಡ್ಯಾಮ್‌ ತುಂಬಿದ್ದಕ್ಕೆ ಬಾಗಿನ ಬಿಡುತ್ತಿದ್ದಾರೆ. ಅದಕ್ಕೆ ಅಧಿಕಾರಿಗಳೂ ಹೋಗಿಲ್ಲ. ಚೆಕ್‌ ಡ್ಯಾಮ್ ನಿರ್ಮಾಣಕ್ಕೆ ಖರ್ಚಾದ ಹಣವನ್ನು ತಮ್ಮ ಜೇಬಿನಿಂದ ಹಾಕಿದರೇ’ ಎಂದು ಗುತ್ತೇದಾರ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿ.ಆರ್‌.ಪಾಟೀಲ, ‘ನನ್ನ ಖುಷಿಗಾಗಿ ಬಾಗಿನ ಅರ್ಪಿಸಿದ್ದೇನೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ನಾನು ಶಾಸಕ ಅಲ್ಲದೇ ಇರುವುದರಿಂದ ನಾ ಕರೆದರೂ ಅಧಿಕಾರಿಗಳು ಬರುವುದಿಲ್ಲ. ಹಾಗಾಗಿ ನನ್ನ ಬೆಂಬಲಿಗರೊಂದಿಗೆ ತೆರಳಿ ಬಾಗಿನ ಅರ್ಪಿಸಿದ್ದೇನೆ‍’ ಎಂದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಐಜಿಪಿ, ಎಸ್ಪಿ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !