ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಅಧ್ಯಕ್ಷರಿಂದ ಶಿಕ್ಷಕರ ಸಂಘದ ಹಣ ದುರ್ಬಳಕೆ: ಆರೋಪ‍

Last Updated 30 ಅಕ್ಟೋಬರ್ 2020, 10:08 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲಾ ‍ಪ್ರಾಥಮಿಕ ಶಿಕ್ಷಕರ ಸಂಘದ ಸದಸ್ಯತ್ವ ಹಣವನ್ನು ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಅವರು ನಾಲ್ಕು ವರ್ಷಗಳಿಂದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸುಮಾರು ₹ 25ಲಕ್ಷದಷ್ಟು ಹಣವನ್ನು ಲಪಟಾಯಿಸಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಮ ಗುಣಾರಿ ಆರೋಪಿಸಿದರು.

ಮಲ್ಲಯ್ಯ ಗುತ್ತೇದಾರ ಅವರು 2014ರಿಂದ 2019ರ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕಾರಣಾಂತರಗಳಿಂದ ಪ್ರಸಕ್ತ ವರ್ಷ ಕೂಡ ಮುಂದುವರಿದಿದ್ದಾರೆ. ಸದಸ್ಯತ್ವಕ್ಕೆ ಪ್ರತಿ ವರ್ಷ ₹ 200ರಂತೆ ಸಂಬಳದಲ್ಲಿ ಕಡಿತವಾಗುತ್ತಿದೆ. ಈ ಸಂಘದಲ್ಲಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದೇವೆ. ಮೂರು ಹಂತದಲ್ಲಿ ಇದರಹಣ ವಿನಿಮಯ ಆಗುತ್ತದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ₹ 75 ರಾಜ್ಯ ಶಿಕ್ಷಕರ ಸಂಘಕ್ಕೆ, ಎರಡನೇ ಹಂತದಲ್ಲಿ ₹ವ 75 ತಾಲ್ಲೂಕು ಘಟಕಕ್ಕೆ ಹಾಗೂ ₹ 50 ಜಿಲ್ಲಾ ಘಟಕಕ್ಕೆ ಸಂದಾಯ ಆಗುತ್ತದೆ. ರಾಜ್ಯ ಸಂಘಕ್ಕೆ ಸರಿಯಾಗಿ ಮುಟ್ಟಿದೆ. ಅದರಲ್ಲಿ ಏನೂ ಅಭ್ಯಂತರವಿಲ್ಲ. ಆದರೆ, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಲ್ಲಿ ಗೋಲ್‌ಮಾಲ್‌ ನಡೆದಿದೆ ಎಂದೂ ದೂರಿದರು.

ಎರಡು ಹಂತದಲ್ಲಿ ಕಡಿತವಾದ ಹಣ ಸಂಘದ ಜಂಟಿ ಖಾತೆಗೆ ಸೇರಬೇಕು. ಆದರೆ, ಆ ಹಣ ಚೆಕ್‌ ಮತ್ತು ನಗದು ರೂಪದಲ್ಲಿ ನಾಲ್ಕು ವರ್ಷಗಳಿಂದ ಅವರ ಬಳಿಯೇ ಉಳಿದಿದೆ. ಮೇಲಾಗಿ,ಈ ಹಣದ ಬಗ್ಗೆ ಮಲ್ಲಯ್ಯ ಅವರು ಕಾರ್ಯಕಾರಿ ಸಮಿತಿ ಸಭೆಯಲ್ಲೂ ದಾಖಲೆ ನೀಡಿಲ್ಲ. ಶಿಕ್ಷಕರ ಸಂಘದ ವಾರ್ಷಿಕ ಸಭೆ ಕೂಡ ಕರೆದಿಲ್ಲ. ನಿಯಮಾವಳಿ ಪ್ರಕಾರ ಆಡಿಟ್‌ ಕೂಡ ಮಾಡಿಸಿಲ್ಲ. ಸಭೆ ಕರೆಯುವಂತೆ ಹಲವು ಬಾರಿ ಕೋರಿದರೂ ನಿರ್ಲಕ್ಷ್ಯ ತೋರಿದ್ದಾರೆ. ಸಂಘದ ಇತರ ಪದಾಧಿಕಾರಿಗಳನ್ನು ಕಡೆಗಣಿಸಿ ತಾವೇ ಸರ್ವಾಧಿಕಾರಿಯ ಧೋರಣೆ ಅನುಸರಿಸಿಕೊಂಡು ಬಂದಿದ್ದಾರೆ ಎಂದು ಉಪಾಧ್ಯಕ್ಷ ಪರಮೇಶ ವ. ಬಿ. ದೇಸಾಯಿ ಕೂಡ ಕಿಡಿ ಕಾರಿದರು.

‌ಸಂಘದ ಬೈಲಾ ಪ್ರಕಾರ ನಾಮನಿರ್ದೇಶನ ಮಾಡದೇ, ತಮಗೆ ಬೇಕಾದವರನ್ನೇ ಏಕಪಕ್ಷೀಯವಾಗಿ ನಾಮ ನಿರ್ದೇಶನ ಮಾಡಿದ್ದಾರೆ. ಪ್ರತಿ ವರ್ಷ ನಡೆಯಬೇಕಿದ್ದ ಕಾರ್ಯಾಗಾರ, ವಿಚಾರಸಂಕಿರಣ, ಸಭೆ ಯಾವುದೂ ನಡೆದಿಲ್ಲ. ಕಳೆದ ಆರು ವರ್ಷಗಳಲ್ಲಿ ಕೇವಲ ಎರಡು ಕಾರ್ಯಕ್ರಮ ಮಾತ್ರ ಮಾಡಲಾಗಿದೆ. ಈ ಸಮಾರಂಭಗಳ ಹಣವನ್ನೂ ದಾನಿಗಳೇ ಭರಿಸಿದ್ದಾರೆ.

ಆರೋಪ ಹೊತ್ತವರು ತಕ್ಷಣ ಲೆಕ್ಕಪತ್ರ ನೀಡಬೇಕು. ರಾಜ್ಯ ಸಂಘಕ್ಕೆ ಸಂದಾಯ ಆದ ಹಣವನ್ನು ಜಿಲ್ಲಾ ಘಟಕಕ್ಕೆ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಸಂಘದ ಮುಖಂಡರು ಆರೋಪಿತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.

ಸಂಘದ ಖಜಾಂಚಿ ಶಿವುಕುಮಾರ ಬಿರಾದಾರ, ಸಹ ಕಾರ್ಯದರ್ಶಿ ಬಾಬು ನಾಯಕ, ಸಂಘಟನಾ ಕಾರ್ಯದರ್ಶಿ ಮಲ್ಲಣ್ಣ ಮೇತ್ರಿ ಇದ್ದರು.

‘ಜಿಲ್ಲಾ ಘಟಕಕ್ಕೆ ಸದಸ್ಯತ್ವ ಹಣವೇ ಬಂದಿಲ್ಲ’

ಆರೋಪಕ್ಕೆ ಪ್ರತಿಕ್ರೆಯೆ ನೀಡಿರುವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ‘ಸಂಘಕ್ಕೆ ಸಂದಾಯವಾಗುವ ಸಸ್ಯತ್ವ ಹಣವು ನೇರವಾಗಿ ರಾಜ್ಯ ಸಮಿತಿಗೆ ಹೋಗುತ್ತದೆ. ಅಲ್ಲಿಂದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗೆ ಬರಬೇಕು. ಆದರೆ, ಕಳೆದ ಆರು ವರ್ಷಗಳಲ್ಲಿ ಒಂದು ರೂಪಾಯಿ ಕೂಡ ರಾಜ್ಯ ಸಮಿತಿಯಿಂದ ಜಿಲ್ಲಾ ಘಟಕಕ್ಕೆ ಬಂದಿಲ್ಲ. ದುರ್ಬಳಕೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಸದ್ಯ ಸಂಘದ ಚುನಾವಣೆ ಸಮೀಪಿಸಿದ್ದರಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT