ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಗಾ ನ್ಯಾಯಾಧಿಕರಣ ಐ–ತೀರ್ಪು ಜಾರಿ ಮಾಡಿ

ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್‌ ಆಗ್ರಹ
Last Updated 11 ಜನವರಿ 2021, 14:11 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಮಾಡುವಾಗ ಕೈಗಾರಿಗಾ ನ್ಯಾಯಾಧಿಕರಣವು ನೀಡಿದ ಐ–ತೀರ್ಪನ್ನು ಯಥಾವತ್ತಾಗಿ ಜಾರಿಗೆ ತರಬೇಕು’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್‌ ಆಗ್ರಹಿಸಿದರು.

‘ಸಾರಿಗೆ ನೌಕರರ ಬೇಡಿಕೆಗಳ ಪರಿಶೀಲನೆಗೆ ರಾಜ್ಯ ಸರ್ಕಾರವು 2005ರಲ್ಲಿ ಬೆಂಗಳೂರಿನಲ್ಲಿರುವ ಕೈಗಾರಿಕಾ ನ್ಯಾಯಾಧಿಕರಣಕ್ಕೆ ಒಪ್ಪಿಸಿತು. ನ್ಯಾಯಾಧಿಕರಣವು 12 ವರ್ಷ ವಿಚಾರಣೆ ನಡೆಸಿ, 2017ರಲ್ಲಿ ಐ– ತೀರ್ಪು ನೀಡಿತು. ಅದರಂತೆ, ಸಾರಿಗೆ ನಿಗಮಗಳ ನೌಕರರ ವೇತನವನ್ನು 2004ರಿಂದಲೇ ಹೆಚ್ಚಳ ಮಾಡಬೇಕು. ಬಾಕಿಯನ್ನು ಶೇ 6ರ ಬಡ್ಡಿ ದರದಲ್ಲಿ ನೀಡಬೇಕು ಎಂದು ಆದೇಶಿಸಿತು. ಆದರೆ, ರಾಜ್ಯ ಸರ್ಕಾರ ಇದನ್ನು ಜಾರಿಗೆ ತರುವ ಬದಲು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿತು. ಒಂದುವೇಳೆ ಈ ಐ–ತೀರ್ಪನ್ನು ಜಾರಿ ಮಾಡಿದ್ದರೆ ನೌಕರರು ಇಂದು ಹೋರಾಟ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲ. 2020ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡುವಾಗಲೂ ರಾಜ್ಯ ಸರ್ಕಾರವು ಐ–ತೀರ್ಪಿನ ಅಂಶಗಳನ್ನು ಸಂಪೂಣರ್ವಾಗಿ ಪರಿಗಣಿಸಬೇಕು’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

’ರಾಜ್ಯ ಸರ್ಕಾರವು ಸಾರಿಗೆ ನಿಗಮಗಳ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನೂ ತಡೆ ಹಿಡಿದಿದೆ. ಇದರಿಂದ 1.2 ಲಕ್ಷ ನೌಕರರು 18 ತಿಂಗಳ ತುಟ್ಟಿಭತ್ಯೆ ಕಳೆದುಕೊಳ್ಳುವಂತಾಗಿದೆ. ಈ ವಿಚಾರದಲ್ಲಿ ಸರ್ಕಾರದ ನಡೆಯು ಕಾಯ್ದೆಯ ಉಲ್ಲಂಘನೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಯಾವುದೇ ನೆಪ ಹೇಳಿ ಕಡಿತ ಮಾಡದೇ ತುಟ್ಟಿಭತ್ಯೆ ನೀಡಬೇಕು’ ಎಂದರು.

‘ಗ್ರಾಚ್ಯುಯಿಟಿ ವಿಚಾರದಲ್ಲಿ ಸರ್ಕಾರ ಕೈಗೊಂಡ ಏಕಪಕ್ಷೀಯ ನಿರ್ಧಾರವನ್ನು ಕೈ ಬಿಡಬೇಕು. ನಿಗಮಗಳ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗೆ ಅನ್ವಯ ಆಗುವಂತೆ ಇಎಸ್‌ಐ ಮಾದರಿಯಲ್ಲಿ ವೈದ್ಯಕೀಯ ಸೌಲಭ್ಯ ಕೊಡಬೇಕು. ಸಾವಿರಾರು ನೌಕರರು ಅಂತರ ನಿಗಮಗಳ ವರ್ಗಾವಣೆಗಾಗಿ ಕಾದು ಕುಳಿತಿದ್ದಾರೆ. ಅಂತರ ನಿಗಮಗಳ ವರ್ಗಾವಣೆಗಾಗಿ ಸರ್ಕಾರವೇ ಒಂದು ಸಮಿತಿ ರಚಿಸಿದೆ. ಕೂಡಲೇ ಇದರ ಪ್ರಕ್ರಿಯೆಗಳನ್ನು ಆರಂಭಿಸಬೇಕು’ ಎಂದೂ ಅವರು ಒತ್ತಾಯಿಸಿದರು.

‘ಘಟಕ ಮಟ್ಟದಿಂದ ವಿಭಾಗ ಮಟ್ಟದವರೆಗೆ ಎಲ್ಲ ಕಡೆಯೂ ಪ್ರತಿ ದಿನ ಕಾರ್ಮಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ನಡೆಯುತ್ತಿದೆ. ಘಟಕ, ವಿಭಾಗ ಮತ್ತು ಕೇಂದ್ರ ಕಚೇರಿ ಮಟ್ಟದಲ್ಲಿ ಆಡಳಿತ ವರ್ಗ ಮತ್ತು ನೌಕರ ಪ್ರತಿನಿಧಿಗಳ ಮಧ್ಯೆ ಕಾಲಕಾಲಕ್ಕೆ ಸಭೆ ನಡೆಸದಿರುವುದೇ ಇದಕ್ಕೆ ಕಾರಣ. ಆದ್ದರಿಂದ ಈ ಸಭೆಗಳನ್ನು ಪುನಃ ಆರಂಭಸಿಬೇಕು’ ಎಂದು ಅನಂತಸುಬ್ಬರಾವ್ ಕೋರಿದರು.

ಕೋವಿಡ್‌–19; ಹಾಜರಾತಿ ನೀಡಿ

ಕಲಬುರ್ಗಿ: ‘ಕೋವಿಡ್‌–19 ಕಾರಣ ಎಲ್ಲ ಬಸ್‌ಗಳು ಸಂಚರಿಸುತ್ತಿಲ್ಲ. ಇದರಿಂದ ನಾಲ್ಕೂ ನಿಗಮಗಳ ಹಲವಾರು ಸಿಬ್ಬಂದಿಗೆ ಕೆಲಸ ಕೊಡದೇ, ರಜೆಯ ಮೇಲೆ ಕಳುಹಿಸಲಾಗಿದೆ. ರಜೆ ಇಲ್ಲದವರಿಗೆ ಅವರ ವೇತನ ಕಡಿತ ಮಾಡಲಾಗುತ್ತಿದೆ. ಇದರಿಂದ ನೌಕರರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಎಲ್ಲ ನೌಕರರಿಗೂ ಕೆಲಸ– ವೇತನ ಕೊಡಬೇಕು. ಆಗದಿದ್ದಲ್ಲಿ ನಿಗದಿತ ಸಂಬಳ ನೀಡಬೇಕು’ ಎಂದು. ಎಚ್‌.ವಿ.ಅನಂತಸುಬ್ಬರಾವ್‌ ಆಗ್ರಹಿಸಿದರು.

’ಸಾರಿಗೆ ನಿಗಮಗಳನ್ನು ಒಂದು ಮಾಡಬೇಕು, ನಿಗಮಗಳಿಗೆ ಪ್ರತಿ ಆಯವ್ಯಯದಲ್ಲಿ ₹ 1 ಸಾವಿರ ಕೋಟಿ ಕೊಡಬೇಕು, ಮೋಟಾರು ವಾಹನ ತೆರಿಗೆ ರದ್ದುಮಾಡಬೇಕು, ಹೆದ್ದಾರಿ ಸುಂಕದಿಂದ ವಿನಾಯಿತಿ ನೀಡಬೇಕು, ಇಂಧನದ ಮೇಲೆ ಹಾಕಿರುವ ಸುಂಕವನ್ನು ಶೇ 50 ಭಾಗ ಕಡಿಮೆ ಮಾಡಬೇಕು, ವಿದ್ಯಾರ್ಥಿಗಳ ಬಸ್‌ ಪಾಸ್‌ ಹಾಗೂ ಇತರ ಸಾಮಾಜಿಕ ಹೊಣೆಗಾರಿಕೆಯ ಸುಂಕಗಳನ್ನು ಕೂಡಲೇ ಪಾವತಿಸಬೇಕು’ ಎಂದೂ ಒತ್ತಾಯಿಸಿದರು.

ಫೆಡರೇಷನ್‌ ಮುಖಂಡರಾದ ಪ್ರಭುದೇವ ಯಳಸಂಗಿ, ಸಿದ್ದಪ್ಪ ಪಾಲ್ಕಿ, ಹಣಮಂತರಾಯ ಅದ್ದೂರ,ಎಚ್.ಎಸ್‌. ಪತಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT