ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಿಯುತ್ತ ಅಂಗನವಾಡಿಗೆ ಬಂದ ಪುಟಾಣಿಗಳು, ಆರತಿ ಬೆಳಕಿ, ಸಿಹಿ ತಿನ್ನಿಸಿ ಸ್ವಾಗತ

Last Updated 9 ನವೆಂಬರ್ 2021, 5:54 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಅಂಗನವಾಡಿ ಕೇಂದ್ರ ಹಾಗೂ ಕಾನ್ವೆಂಟ್‌ ಶಾಲೆಗಳಲ್ಲೂ ಸೋಮವಾರ ಹಬ್ಬದ ವಾತಾವರಣ ಮನೆ ಮಾಡಿತು. ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ನಿಶಬ್ದವಾಗಿದ್ದ ಕಟ್ಟಡಗಳಲ್ಲಿ ಚಿಣ್ಣರ ಚಿಲಿಪಿಲಿಕೇಳಿಸಿತು.

ಜಿಲ್ಲೆಯಲ್ಲಿ ಒಟ್ಟು 3,140 ಅಂಗನವಾಡಿಗಳಿವೆ, ಇದರಲ್ಲಿ ಕಲಬುರಗಿ ನಗರ ವ್ಯಾಪ್ತಿಯಲ್ಲೇ 499 ಇವೆ. ಅಂಗನವಾಡಿಗಳಿಗೆ ತಳಿರು– ತೋರಣ, ಬಾಳೆದಿಂಡು, ಬಲೂನು ಕಟ್ಟಿ ಅಲಂಕಾರ ಮಾಡಲಾಗಿತ್ತು. ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗ್ರಾಮದ ಯುವತಿಯರು ಕೂಡ ಸ್ವಯಂ ಪ್ರೇರಣೆಯಿಂದ ಬಂದು ಅಂಗನವಾಡಿ ಅಂಗಳದಲ್ಲಿ ಬಣ್ಣಬಣ್ಣದ ರಂಗೋಲಿ
ಬಿಡಿಸಿದರು.

ಮೊದಲ ದಿನವೇ ಪಾಲಕರು ತಮ್ಮ ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹೊತ್ತುಕೊಂಡು ಅಂಗನವಾಡಿಗಳತ್ತ ಹೆಜ್ಜೆ ಹಾಕಿದರು. ಅಪ್ಪ, ಅವ್ವ, ಅಜ್ಜ, ಅಜ್ಜಿ... ಹೀಗೆ ಯಾರೆಲ್ಲ ತಮ್ಮ ಮನೆಯ ಪುಟಾಣಿಯನ್ನು ಕರೆತಂದು ಬಿಟ್ಟುಹೋದರು. ಮತ್ತೆ ಕೆಲವರು ಎರಡು ತಾಸು ಹೊರಗಡೆಯೇ ಕಾದುಕುಳಿತು ಮೆನೆ
ಕರೆದೊಯ್ದರು.

ಬಹುಪಾಲು ಕಾಡೆ ಕಾರ್ಯಕರ್ತೆ ಹಾಗೂ ಸಹಾಯಕಿಯರು ಮನೆಯಿಂದ ಮಾಡಿಕೊಂಡು ಬಂದ ಸಿಹಿ ತಿಂಡಿಗಳನ್ನು ಹಂಚಿದರು.

ಇನ್ನೊಂದೆಡೆ, ಹಳ್ಳಿಗಳಲ್ಲೂ ಮಕ್ಕಳ ಪಾಲಕರು ಕೂಡ ಅಂಗನವಾಡಿಗಳಿಗೆ ಬಂದು ಅಲಂಕಾರ ಮಾಡಿ ಸಂಭ್ರಮಿಸಿದರು. ಆರತಿ ಬೆಳಗಿ, ಚಾಕೊಲೇಟ್‌, ಲಾಲಿಪಾಪ್‌, ಬಿಸ್ಕತ್‌ ಮುಂತಾದ ತಿನಿಸುಗಳನ್ನು ನೀಡಿ ಅವರನ್ನು ಹುರುದುಂಬಿಸಿದರು. ಹೊರಗಡೆಯೇ ನಿಂತುಕೊಂಡು ತಮ್ಮ ಮಕ್ಕಳ ಆಟ, ಹಾಡು, ಕುಣಿತಗಳನ್ನು ಕಂಡು ಖುಷಿಪಟ್ಟರು.

ಇನ್ನೊಂದೆಡೆ, ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮ ಕಾನ್ವೆಂಟ್‌ ಶಾಲೆಗಳಲ್ಲೂ ಸಂಭ್ರಮದ ವಾತಾವರಣ ಮನೆ ಮಾಡಿತು. ಶಿಕ್ಷಕಿಯರು ಶಾಲೆಗಳಲ್ಲಿ ಅಲಂಕಾರ ಮಾಡಿ, ಮಕ್ಕಳಿಗೆ ಸಿಹಿ ನೀಡಿ ಸ್ವಾಗತಿಸಿದರು. ಬೈಕ್‌, ಆಟೊಗಳಲ್ಲಿ ಮಕ್ಕಳನ್ನು ಕರೆದುಕೊಂಡು ಬಂದ ಪಾಲಕರು, ಎರಡು ತಾಸಿನ ತರಗತಿ ಮುಗಿಯುವವರೆಗೆ ಕಾದು ಮರಳಿ ಕರೆದುಕೊಂಡು ಹೋಗುತ್ತಿದ್ದುದು ಕಂಡುಬಂತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್‌ಕುಮಾರ್‌ ಹಾಗೂ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮಾ ಕಲ್ಬುರ್ಗಿ ಅವರು ವಿವಿಧ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡಗಳ ಸ್ಥಿತಿ, ಸುತ್ತಲಿನ ಪರಿಸರ, ಕುಡಿಯುವ ನೀರು ಸೇರಿದಂತೆ ವಿವಿಧ ಸವಲತ್ತುಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT