ಸೋಮವಾರ, ಜನವರಿ 27, 2020
26 °C
ಪೀಪಲ್ಸ್‌ ಫೋರಂನ ಮಾರುತಿ ಮಾನ್ಪಡೆ, ಮೊಹಮ್ಮದ್‌ ಅಸಗರ ಚುಲಬುಲ್‌ ಹೇಳಿಕೆ

ರಾಜ್ಯ ಸರ್ಕಾರ ದಿಂದ ಮುಸ್ಲಿಂ ವಿರೋಧಿ ಧೋರಣೆ: ಮಾರುತಿ ಮಾನ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಮಂಗಳೂರಿನಲ್ಲಿ ಪೊಲೀಸ್‌ ಗೋಲಿಬಾರ್‌ನಿಂದ ಮೃತಪಟ್ಟ ಜಲೀಲ್ ಮತ್ತು ಮೊಹಮ್ಮದ್‌ ಮೊಹಸೀನ್‌ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ ತಲಾ ₹ 10 ಲಕ್ಷ ಪರಿಹಾರ ಹಿಂದಕ್ಕೆ ಪಡೆಯುವುದರ ಮೂಲಕ ಮುಸ್ಲಿಂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಪೀಪಲ್ಸ್‌ ಫೋರಂ ಆರೋಪಿಸಿದೆ.

ನಗರದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಸಂಚಾಲಕ ಮಂಡಳಿಯ ಮಾರುತಿ ಮಾನ್ಪಡೆ, ಮೊಹಮ್ಮದ್ ಅಸಗರ ಚುಲಬುಲ್ ಹಾಗೂ ಉಸ್ತಾದ್‌ ನಾಸಿರ್‌ ಹುಸೇನ್‌, ‘ಒಮ್ಮೆ ಘೋಷಿಸಿದ್ದ ಪರಿಹಾರವನ್ನು ಹಿಂದಕ್ಕೆ ಪಡೆಯುವುದು ಮಾನವೀಯತೆಗೆ ವಿರುದ್ಧವಾದುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರ ಒತ್ತಡಕ್ಕೆ ಮಣಿದು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಮೂಲಕ ಮುಸ್ಲಿಮರ ಮೇಲೆ ದ್ವೇಷ ಸಾಧಿಸುತ್ತಿರುವುದು ಖಂಡನೀಯ‌’ ಎಂದರು.

‘ಗೋಲಿಬಾರ್‌ಗೆ ಆದೇಶ ನೀಡಿದ ಮಂಗಳೂರು ಪೊಲೀಸ್‌ ಕಮಿಷನರ್‌ ಹರ್ಷ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಿ ತನಿಖೆ ನಡೆಸುವ ಮೂಲಕ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ. ಕೂಡಲೇ ಕಮಿಷನರ್‌ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ತಕ್ಷಣವೇ ಗೋಲಿಬಾರ್‌ ಘಟನೆಯ ಬಗ್ಗೆ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನೆಡೆಸಬೇಕು. ತಪ್ಪಿತಸ್ಥ ಅಧಿಕಾರಿಯನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

‘ದೇಶದ ಅರ್ಥವ್ಯವಸ್ಥೆ ಅಧಃಪತನದ ಹಾದಿ ಹಿಡಿದಿದೆ. 7.5 ಲಕ್ಷ ಕೋಟಿ ಖೋತಾ ಬಜೆಟ್ ಎದುರಾಗಿದೆ. ಅದನ್ನು ಸರಿಪಡಿಸುವ ಯಾವುದೇ ಯೋಜನೆಗಳು ಸರ್ಕಾರದ ಬಳಿ ಇಲ್ಲ. ಜಿಡಪಿ 4.5 ಕ್ಕೆ ಇಳಿದಿದೆ. ಈರುಳ್ಳಿ, ಬೆಳ್ಳುಳ್ಳಿ, ಪ್ರೆಟ್ರೋಲ್ ದರ ಗಗನಕ್ಕೇರಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಅಗ್ಗದ ದರಕ್ಕೆ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಬ್ಯಾಂಕ್, ಎಲ್‌ಐಸಿಗಳಲ್ಲಿ ಖಾಸಗಿ ಷೇರುಗಳ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ತಮ್ಮ ಲೋಪಗಳನ್ನು ಮುಚ್ಚಿಡಲು ಜನರ ಗಮನವನ್ನು ಬೇರೆಡೆ ಸೆಳೆಯಲು ಕೀಳು ರಾಜಕೀಯ ತಂತ್ರಗಾರಿಕೆಯನ್ನು ಬಿಜೆಪಿ ಸರಕಾರ ಮಾಡುತ್ತಿದೆ’ ಎಂದು ಟೀಕಿಸಿದರು. 

ಸೈಯ್ಯದ್ ಅಜರ್ ಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು