ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಂದನ ಗ್ರಂಥ ಹೊಸ ಪ್ರಕಾರದ ಸಾಹಿತ್ಯ; ಗೊ.ರು. ಚನ್ನಬಸಪ್ಪ

Last Updated 8 ಆಗಸ್ಟ್ 2022, 5:02 IST
ಅಕ್ಷರ ಗಾತ್ರ

ಕಲಬುರಗಿ: ‘ವ್ಯಕ್ತಿಯ ಪರಿಚಯದ ಜತೆಗೆ ಪ್ರಾದೇಶಿಕವಾದ ಉಪಯುಕ್ತ ಮಾಹಿತಿಗಳನ್ನು ಒಳಗೊಂಡ ಅಭಿನಂದನ ಗ್ರಂಥವೂ ಸಾಹಿತ್ಯದಹೊಸ ಪ್ರಕಾರ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ ಹೇಳಿದರು.

ಅಪ್ಪಾರಾವ ಅಕ್ಕೋಣೆ ಅವರ 85ನೇ ಜನ್ಮದಿನ ಹಾಗೂ ದಾಂಪತ್ಯದ ಷಷ್ಠ್ಯಬ್ದಿ ಅಂಗವಾಗಿ ನಗರದಲ್ಲಿ ಭಾನುವಾರ ಅಪ್ಪಾರಾವ ಅಕ್ಕೋಣೆ ಅವರ ಅಭಿನಂದನ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅವಿಶ್ರಾಂತ ಅಭಿನಂದನ ಸಂಪುಟ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪ್ರಾಚಿನ ಸಾಹಿತ್ಯ, ಶಾಸನ ಸಾಹಿತ್ಯ, ವಿಮರ್ಶಾ ಸಾಹಿತ್ಯ ಪ್ರಕಾರಗಳ ಪೈಕಿ ಅಭಿನಂದನೆ ಗ್ರಂಥವು ಹೊಸ ಅಲೆಯ ಸಾಹಿತ್ಯ. ಅಭಿನಂದನ ಗ್ರಂಥವು ಒಬ್ಬ ವ್ಯಕ್ತಿಯ ಪರಿಚಯದ ಜತೆಗೆ ಆ ವ್ಯಕ್ತಿ ಬದುಕಿದ್ದ ಪ್ರದೇಶ, ಸನ್ನಿವೇಶ, ಸಂದರ್ಭ, ಪರಿಸ್ಥಿತಿಗಳನ್ನು ಕುರಿತು ಚಿತ್ರಿಸುವಂತಹ ಉಪಯುಕ್ತವಾದ ಲೇಖನಗಳನ್ನು ಒಳಗೊಂಡಿರುತ್ತದೆ. ಇದು ಕೂಡ ಒಳ್ಳೆಯ ದಾಖಲೆಯ ಗ್ರಂಥವಾಗಿದ್ದು, ಎಲ್ಲರೂ ಓದಬೇಕು’ ಎಂದರು.

‘ಅಪ್ಪಾರಾವ ಅವರ ಗ್ರಂಥ ಅಭಿಮಾನಿಗಳ ಅಭಿಮಾನಕ್ಕೆ ಸಾಕ್ಷಿ ಯಾಗಿದೆ. ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಬಳಕೆಗೂ ಇದು ಉಪಯುಕ್ತವಾಗಿದೆ. ಕಲಬುರಗಿಗೆ ಸೀಮಿತವಾಗದೆ ಕರ್ನಾಟಕದ ಎಲ್ಲಾ ಭಾಗಗಳಿಗೂ ತಲುಪಿಸಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

‘ಅಪ್ಪರಾವ ಅವರು ಯಾವುದೇ ಕೆಲಸವನ್ನು ಯಾಂತ್ರಿಕವಾಗಿ ಮಾಡಿದೆ ತನು, ಮನದಿಂದ ಒಪ್ಪಿ ಅದರಲ್ಲಿ ಕಾರ್ಯಪ್ರವೃತರಾಗಿದ್ದರಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಸರ್ಕಾರಿ ಸೇವೆ ಸಲ್ಲಿಸುವುದರ ಜತೆಗೆ ನಾನಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಅವುಗಳ ಪೋಷಕರಾಗಿ, ಪದಾಧಿಕಾರಿಯಾಗಿ, ಸಲಹೆಗಾರರಾಗಿ, ಮಾರ್ಗದರ್ಶಕರಾಗಿ, ಹಿತೈಷಿಗಳಾಗಿ ಶ್ರಮಿಸಿದ್ದಾರೆ’ ಎಂದರು.

‘ಐದು ದಶಕಗಳಲ್ಲಿ ನಾನು ಅವರಲ್ಲಿ ಸಮಾನ ವ್ಯಕ್ತಿತ್ವವನ್ನು ಕಂಡಿದ್ದೇನೆ. ಅವರೊಬ್ಬ ಮಾನವೀಯ ಮೌಲ್ಯಗಳು ಹೊಂದಿದ ಒಳಗಣ್ಣಿನ ಬೆಳಕು. ನೂರಾರು ವರ್ಷಗಳ ಕಾಲ ಆಳುವವರ ಅವಕೃಪೆಗೆ ಒಳಗಾಗಿದ್ದ ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ ಸಲ್ಲಬೇಕಾದ ನ್ಯಾಯಯುತವಾದ ಹಕ್ಕುಗಳಿಗಾಗಿ ಸದಾ ಧ್ವನಿ ಎತ್ತಿದವರು’ ಎಂದು ಅವರು ಬಣ್ಣಿಸಿದರು.

ಸಾಹಿತಿ ಸ್ವಾಮಿರಾವ ಕುಲಕರ್ಣಿ ಮಾತನಾಡಿ, ‘ಸಮಾಜವನ್ನು ನಾಶ ಮಾಡುವವರೇ ತುಂಬಿರುವಾಗ ಪ್ರೀತಿಯಿಂದ ಬದುಕುವ ಕ್ಷಣಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಅಭಿನಂದನ ಸಮಾರಂಭಗಳನ್ನು ಆಯೋಜಿಸಿ ಹೃದಯಗಳನ್ನು ಹೊಲೆಯು ವಂತಹ ಸೂಜಿ–ದಾರದ ಕೆಲಸ ಇನ್ನಷ್ಟು ಹೆಚ್ಚಾಗಲಿ’ ಎಂದು ಹೇಳಿದರು.

‘ಹುತಾತ್ಮ ಸೊಲ್ಲಾಪುರದ ಧನಶೆಟ್ಟಿ ಮಲ್ಲಪ್ಪನವರು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಗುಲಬರ್ಗಾ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ, ‘ಅಪ್ಪಾರಾವ ಅವರಿಂದ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ಸಲ್ಲಿಸುವಂತಹ ಕೆಲಸ ಆಗಬೇಕಿದೆ. ಶರಣರ ಕಾಯಕವೇ ಕೈಲಾಸ ಎಂಬ ತತ್ವವನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದ್ದು, ಅವರ ಜೀವನ ನಮಗೆ ಮಾದರಿ’ ಎಂದರು.

ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು, ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ರಾಜ್ಯ ಶಾಖೆ ಚೇರಮನ್ ವಿಜಯಕುಮಾರ ಪಾಟೀಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ, ಶಾಸಕರಾದ ಬಸವರಾಜ ಮತ್ತಿಮೂಡ, ಬಿ.ಜಿ. ಪಾಟೀಲ, ಸಮಿತಿ ಅಧ್ಯಕ್ಷ ಪ್ರೊ.ಕೆ.ವಿಶ್ವನಾಥ, ಕಾರ್ಯಾಧ್ಯಕ್ಷ ನಾಗಣ್ಣ ಗಣಜಲಖೇಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT