ಬುಧವಾರ, ಆಗಸ್ಟ್ 10, 2022
22 °C
ಶೀಘ್ರವೇ ದಾಖಲೆ ಬಿಡುಗಡೆ: ಪ್ರಿಯಾಂಕ್ ಖರ್ಗೆ

ಬಂಜಾರ ಸಮುದಾಯ ಎಸ್‌ಟಿಗೆ ಸೇರಿಸಲು ಸಂಸದ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ’ಕೋಲಿ ಕಬ್ಬಲಿಗ ಮತ್ತು ಕುರುಬ ಸಮಾಜದವರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಹೇಳಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಲಬುರ್ಗಿ ಸಂಸದ ಉಮೇಶ ಜಾಧವ ಈಗ ವರಸೆ ಬದಲಿಸಿ ಬಂಜಾರ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ಪ್ರಧಾನಿಯ ಮೊರೆ ಹೋಗಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆ ಇವೆ. ಶೀಘ್ರವೇ ಅವುಗಳನ್ನು ಬಿಡುಗಡೆ ಮಾಡುತ್ತೇನೆ‘ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಗಾಗಿ ಕೋಲಿ ಕಬ್ಬಲಿಗ ಮತ್ತು ಕುರುಬ ಸಮಾಜದವರು ಕಾಯುತ್ತಿದ್ದಾರೆ. ನೀವು ನೀಡಿದ ಭರವಸೆ ಈಡೇರಿಸಿ ಎಂದು ಅವರು ಒತ್ತಾಯಿಸಿದರು.

ಸುಳ್ಳು ಆಶ್ವಾಸನೆ ನೀಡಿ ಚುನಾವಣೆಯಲ್ಲಿ ಗೆದ್ದ ಬಿಜೆಪಿಯವರಿಗೆ ಈಗ ಜನರ ಬಳಿ ಹೋಗಲು ಮುಖವೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಅತ್ಯಲ್ಪ ಅನುದಾನ ನೀಡಿದೆ. ವಾರ್ಷಿಕ ₹ 1500 ಕೋಟಿಯಂತೆ ಹಿಂಬಾಕಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಬೇಸರ:  ಬರ, ನೆರೆ ಹಾವಳಿ ಹಾಗೂ ನಿರಂತರ ಕೋವಿಡ್‌ ಸಮಸ್ಯೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಅರುಣಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದು ಏನು ಸೂಚಿಸುತ್ತದೆ. ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ ಬಿಜೆಪಿ ಶಾಸಕರು ನಡೆಸುತ್ತಿರುವ ಭಿನ್ನಮತೀಯ ಚಟುವಟಿಕೆಗೆ ಇದು ಸಕಾಲವಲ್ಲ. ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಇರಬೇಕೆ ವಿನಃ ಖುರ್ಚಿಯ ವ್ಯಾಮೋಹ ಇರಬಾರದು ಎಂದು ಬಿಜೆಪಿ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆಗಲಿಲ್ಲ. ಮುಲ್ಲಾಮಾರಿ ಯೋಜನೆಯ ಕಳಪೆ ಕಾಮಗಾರಿ ತನಿಖೆಗೆ ಸೂಚಿಸಿದರು ತೆರೆಮರೆಯಲ್ಲಿ ಇದನ್ನು ತಡೆಯಲಾಗಿದೆ. ನಾನು ಸಚಿವನಾಗಿದ್ದಾಗ ಪರಿಶಿಷ್ಟ ಜಾತಿ ಜನರ ಕಾಲೊನಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ₹ 30 ಕೋಟಿ ಬಿಡುಗಡೆ ಮಾಡಿದ್ದೇ ಆದರೆ ಹಿಂದಿನ ಉಸ್ತುವಾರಿ ಸಚಿವರು ₹ 20 ಕೋಟಿ ವಾಪಸ್ ಕಳುಹಿಸಿದರು. ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ಕಾಳಜಿ ಇದ್ದರೆ ಪ್ರಶ್ನಿಸಬೇಕಿತ್ತು. ಬಿಜೆಪಿಯವರು ಹೇಳುವುದೊಂದು ಮಾಡುವೊಂದು‘ ಎಂದು ವ್ಯಂಗ್ಯವಾಡಿದರು.

ಸುಭಾಷ ರಾಠೋಡ್, ಅನಿಲಕುಮಾರ ಜಮಾದಾರ, ಜಗದೇವ ಗುತ್ತೇದಾರ, ರವಿರಾಜ ಕೊರವಿ, ಬಸವರಾಜ ಪಾಟೀಲ ಹೇರೂರು, ದೀಪಕನಾಗ್ಪುಣ್ಯಶೆಟ್ಟಿ, ಗೋಪಾಲರಾವ್ ಕಟ್ಟಿಮನಿ, ಬಸವರಾಜ ಮಲಿ, ಮಧುಸೂದನರೆಡ್ಡಿ ಪಾಟೀಲ ಮೊದಲಾದರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು