ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದ ಹಣದಲ್ಲಿ ರಾಹುಲ್‌ ಗಾಂಧಿಗೂ ಪಾಲು: ಯತ್ನಾಳ್

Published 31 ಮೇ 2024, 12:53 IST
Last Updated 31 ಮೇ 2024, 12:53 IST
ಅಕ್ಷರ ಗಾತ್ರ

ಕಲಬುರಗಿ: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಲ್ಲಿದ್ದ ₹ 187 ಕೋಟಿ ಹಣದ ಅವ್ಯವಹಾರದಲ್ಲಿ ಬರೀ ರಾಜ್ಯ ಸರ್ಕಾರವಷ್ಟೇ ಭಾಗಿಯಾಗಿಲ್ಲ. ಬದಲಾಗಿ, ಇದು ಕಾಂಗ್ರೆಸ್‌ ಹೈಕಮಾಂಡ್‌ವರೆಗೂ ಚಾಚಿದೆ. ರಾಹುಲ್ ಗಾಂಧಿ ಅವರಿಗೂ ಇದರಲ್ಲಿ ಪಾಲು ಹೋಗಿರುವ ಶಂಕೆ ಇದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಗರಣದಲ್ಲಿ ಬರೀ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ತಲೆದಂಡವಷ್ಟೇ ಸಾಲದು. ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯಬೇಕು. ಚುನಾವಣೆಗಾಗಿ ಖರ್ಚು ಮಾಡಲು ಹೈಕಮಾಂಡ್‌ಗೆ ಎಷ್ಟು ಹಣ ಹೋಗಿದೆ ಎಂಬುದರ ವಿವರವೂ ಬಹಿರಂಗವಾಗಬೇಕು. ಇದಕ್ಕಾಗಿ ಪ್ರಕರಣವನ್ನು ಸಿಐಡಿ ಬದಲು ಸಿಬಿಐಗೆ ಕೊಡಬೇಕು’ ಎಂದರು.

‘ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದು, ಜಾರ್ಖಂಡ್, ಛತ್ತೀಸಗಡ, ತೆಲಂಗಾಣ ಸೇರಿದಂತೆ ಎಲ್ಲಿಯೇ ಚುನಾವಣೆ ನಡೆದರೂ ಇಲ್ಲಿಂದ ಹಣ ಪೂರೈಕೆಯಾಗುತ್ತದೆ. ದೆಹಲಿಯಿಂದ ಆಗಾಗ ಬರುವ ಕಾಂಗ್ರೆಸ್ ಗಿರಾಕಿ ರಣದೀಪ್‌ಸಿಂಗ್ ಸುರ್ಜೇವಾಲಾ ತಾನು ಸರ್ಕಾರದ ಭಾಗವಲ್ಲದಿದ್ದರೂ ಐಎಎಸ್ ಅಧಿಕಾರಿಗಳ ಸಭೆ ನಡೆಸಿ ವಿವಿಧ ಇಲಾಖೆಗಳಿಂದ ಹಣ ವಸೂಲಿ ಮಾಡುತ್ತಾರೆ’ ಎಂದು ಯತ್ನಾಳ್ ಆರೋಪಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನಾನು ಶಾಸಕನಾಗಿ ಒಂದು ವರ್ಷವಾದರೂ ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಗುದ್ದಲಿ ಪೂಜೆ ನೆರವೇರಿಸಿಲ್ಲ. ಸರ್ಕಾರ ಶಾಸಕರಿಗೆ ದುಡ್ಡೇ ಕೊಡುತ್ತಿಲ್ಲ. ಗುತ್ತಿಗೆದಾರರು ಶೇ 5ರಿಂದ 10ರಷ್ಟು ಬಡ್ಡಿ ತೆತ್ತು ಹಣ ತಂದು ಗುತ್ತಿಗೆ ಕೆಲಸ ಮಾಡಿದ್ದಾರೆ. ಅವರಿಗೂ ಹಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಟೀಕಿಸಿದರು.

‘ವಿಧಾನಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರನ್ನು ಮತದಾರರು ಚುನಾಯಿಸಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ಅಮರನಾಥ ಪಾಟೀಲ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ ಸೇರಿದಂತೆ ಪಕ್ಷದ ಮುಖಂಡರು ಗೋಷ್ಠಿಯಲ್ಲಿದ್ದರು.

ದಲಿತ ಸಮುದಾಯವನ್ನು ತಾವೇ ಗುತ್ತಿಗೆ ಹಿಡಿದಂತೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ತಮ್ಮದೇ ಸರ್ಕಾರದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ

ಬಸನಗೌಡ ಪಾಟೀಲ ಯತ್ನಾಳ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT