ಭಾನುವಾರ, ಜೂನ್ 20, 2021
20 °C
ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಡಾ.ಉಮೇಶ ಜಾಧವ ಪುನರುಚ್ಚಾರ

ಇಎಸ್‍ಐಸಿಯಲ್ಲಿ ಶೀಘ್ರ ಆಮ್ಲಜನಕ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಜಿಲ್ಲೆಯ ಜನರನ್ನು ಕೋವಿಡ್‌ನಿಂದ ರಕ್ಷಿಸಲು ಪ್ರತ್ಯೇಕ ಆಮ್ಲಜನಕ ಉತ್ಪಾದನಾ ಘಟಕವನ್ನು ಇಲ್ಲಿನ ಇಎಸ್‌ಐಸಿ ಆಸ್ಪತ್ರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಪ್ರಾಥಮಿಕ ಹಂತದ ಕೆಲಸಗಳು ಮುಗಿದಿದ್ದು ಶೀಘ್ರದಲ್ಲೇ ಘಟಕ ಕಾರ್ಯಾರಂಭಮಾಡುವ ಭರವಸೆ ಇದೆ’ ಎಂದು ಸಂಸದ ಡಾ.ಉಮೇಶ ಜಾಧವ ಪುನರುಚ್ಚರಿಸಿದರು.

ಬಸವ ಜಯಂತಿ ಅಂಗವಾಗಿ ಇಲ್ಲಿನ ಜಗತ್‌ ವೃತ್ತದಲ್ಲಿ ಬಸವಣ್ಣನವರ ಅಶ್ವಾರೋಹಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಆಮ್ಲಜನಕ ಘಟಕ ನಿರ್ಮಾಣ ಕಾರ್ಯವನ್ನು ಡಿಆರ್‌ಡಿಒ ಮತ್ತು ಎನ್‍ಎಚ್‍ಎ ಜತೆಗೂಡಿ ಮಾಡುತ್ತಿವೆ. ಇದರಿಂದಾಗಿ ಇಎಸ್‍ಐಸಿ ಆಸ್ಪತ್ರೆಗೆ ಬೇಕಾಗುವಷ್ಟು ಆಮ್ಲಜನಕ ಸಹ ಉತ್ಪಾದನೆಯಾಗಲಿದೆ. ಇನ್ನೊಂದೆಡೆ 20 ಕೆ.ಎಲ್. ಸಾಮರ್ಥ್ಯದ ಲಿಕ್ವಿಡ್ ಆಮ್ಲಜನಕ ದಾಸ್ತಾನು ಮಾಡುವ ಸಂಗ್ರಹಗಾರವನ್ನು ಸಹ ಅಜೀಮ್‌ ಪ್ರೇಮ್‌ಜಿ ಫೌಂಡೇಷ ಮಾಡಲಿದೆ’ ಎಂದರು.

‘ಸದ್ಯ ಆಮ್ಲಜನಕ ಹಾಗೂ ರೆಮ್‍ಡಿಸಿವಿರ್ ಕೊರತೆ ನೀಗಿಸಲಾಗಿದೆ. ಪರಿಸ್ಥಿತಿ ದಿನೇದಿನೇ ಸುಧಾರಿಸುತ್ತಿದೆ. ಎಲ್ಲ ನಿಟ್ಟಿನಲ್ಲಿ ಕ್ರಮ ಕೈಗೊಂಡು ಸೋಂಕಿತರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

‘ಬೋಯಿಂಗ್ ಇಂಡಿಯಾ ಸಂಸ್ಥೆಯು 250 ಹಾಸಿಗೆಗಳ ಆಮ್ಲಜನಕ ಸಹಿತ ಕೊರೊನಾ ಸ್ಪೆಷಲ್‌ ಆಸ್ಪತ್ರೆಯನ್ನು ನಗರದಲ್ಲಿ ನಿರ್ಮಿಸಲು ಮುಂದೆ ಬಂದಿದೆ. ಈ ಕೆಲಸ ಕೂಡ ಶೀಘ್ರದಲ್ಲಿ ಆರಂಭವಾಗಲಿದ್ದು, ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅದಕ್ಕೂ ಮೊದಲೇ ಅಲ್ಲಿ ಆಮ್ಲಜನಕ ಉತ್ಪಾದನೆ ಶುರು ಮಾಡುವಂತೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಸೇವೆ ಸುಧಾರಿಸಲಿದೆ’ ಎಂದೂ ಸಂಸದ ಭರವಸೆ ನೀಡಿದರು.‌

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಮಾತನಾಡಿ, ‘ಬಸವಾದಿ ಶರಣರ ಆಶೀರ್ವಾದದಿಂದ ಕೊರೊನಾ ವಿಶ್ವದಿಂದ ಬೇಗ ತೊಲಗಲಿ ಎಂಬುದೇ ನನ್ನ ಪ್ರಾರ್ಥನೆ. ಸೋಂಕು ನಿಯಂತ್ರಿಸಲು ಸರ್ಕಾರ ಹಾಗೂ ಅಧಿಕಾರಿಗಳಿಂದ ಮಾದರಿ ಕೆಲಸ ನಡೆಯುತ್ತಿದೆ. ಬಸವಣ್ಣನವರ ತತ್ವಗಳನ್ನು ಪಾಲಿಸಿದರೆ ಆಯಸ್ಸು, ಆರೋಗ್ಯ ಎಲ್ಲವನ್ನೂ ಕಾಪಾಡಿಕೊಳ್ಳಬಹುದು’ ಎಂದರು.‌

ಇದೇ ವೇಳೆ ವಿಧಾನ ಪರಿಷತ್‌ ಸದಸ್ಯ ಶಶೀಲ್ ನಮೋಶಿ, ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ, ಮಾಜಿ ಶಾಸಕ ಬಿ.ಆರ್.ಪಾಟೀಲ, ಎಚ್‍ಕೆಇ ಅಧ್ಯಕ್ಷ ಡಾ.ಭೀಮಶಂಕರ ಬಿಲಗುಂದಿ ಮುಂತಾದವರು ಅವರು ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಇದ್ದರು.

‘ಬಸವೇಶ್ವರ ಆಸ್ಪತ್ರೆ; 10 ಹೊಸ ವೆಂಟಿಲೇಟರ್’
‘ಬಸವೇಶ್ವರ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರೂ ಸೇರಿದಂತೆ ಎಲ್ಲ ಸಾಮಾನ್ಯ ರೋಗಿಗಳಿಗೂ ಅನುಕೂಲವಾಗುವಂತೆ ₹ 1.75 ಕೋಟಿ ವೆಚ್ಚದ ವಿವಿಧ ವೈದ್ಯಕೀಯ ಉಪಕರಣಗಳನ್ನು ಸಹ ಖರೀದಿಸಲಾಗಿದೆ’ ಎಂದು ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಹೇಳಿದರು.

‘ನಗರದ ಬಸವೇಶ್ವರ ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ಹೊಸದಾಗಿ ಹತ್ತು ವೆಂಟಿಲೇಟರ್ ಅಳವಡಿಸಲಾಗುತ್ತಿದೆ. ಕ್ಲಿಷ್ಟಕರ ಸ್ಥಿತಿಯಲ್ಲಿ ಇರುವ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ಜರ್ಮನಿಯಿಂದ ಹೊಸ ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದೆ’ ಎಂದರು.

‘ಸದ್ಯ ಬಸವೇಶ್ವರ ಆಸ್ಪತ್ರೆಯಲ್ಲಿರುವ ಲಭ್ಯವಿರುವ ಬೆಡ್‍ಗಳಲ್ಲಿ 500 ಬೆಡ್‍ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಅದರಲ್ಲಿ 200 ಆಮ್ಲಜನಕ ಸವಲತ್ತು ಹೊಂದಿವೆ. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಇನ್ನೂ 25 ವೆಂಟಿಲೇಟರ್‌ ಖರೀದಿಸಲಾಗುವುದು. ರೋಗಿಗಳು ಮೊದಲು ಬಂದವರಿಗೆ ಆದ್ಯತೆಯ ಮೇಲೆ ಬೆಡ್‍ಗಳನ್ನು ನೀಡಲಾಗುತ್ತಿದೆ. ಬೆಡ್ ಹಂಚಿಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ’ ಎಂದರು.‌

‘ಶೇ 70ಕ್ಕೂ ಹೆಚ್ಚಿನ ಸೋಂಕಿತರಿಗೆ ಸರ್ಕಾರಿ ಕೋಟಾದಲ್ಲಿ ಆಯುಷ್ಮಾನ್ ಭಾರತ್‌ ಯೋಜನೆ ಅಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಪ್ರಯೋಜನ ಸೋಂಕಿತರು ಪಡೆದುಕೊಳ್ಳಬೇಕು’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.