ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿಗೂ ಅಳಿಯದ ಜಾತಿ ಪದ್ಧತಿ, ಮೂಢನಂಬಿಕೆ: ಮರಿಯಪ್ಪ ಹಳ್ಳಿ

Published 10 ಮೇ 2024, 5:41 IST
Last Updated 10 ಮೇ 2024, 5:41 IST
ಅಕ್ಷರ ಗಾತ್ರ

ಕಲಬುರಗಿ: ‘12ನೇ ಶತಮಾನದ ಬಸವಾದಿ ಶರಣರು ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿ 900 ವರ್ಷಗಳು ಗತಿಸಿದರೂ ಸಮಾಜದಲ್ಲಿ ಇಂದಿಗೂ ಜಾತಿ ಪದ್ಧತಿ, ಮೂಢನಂಬಿಕೆ ತಾಂಡವವಾಡುತ್ತಿದೆ’ ಎಂದು ಹಿರಿಯ ಜನಪರ ಹೋರಾಟಗಾರ ಮರಿಯಪ್ಪ ಹಳ್ಳಿ ಕಳವಳ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಬಸವ ಉತ್ಸವದಲ್ಲಿ ವಚನ ಸಾಂಸ್ಕೃತಿಕ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೇವಲ ಶರಣರ ಜಯಂತಿ ಆಚರಿಸಿದರೆ ಜವಾಬ್ದಾರಿ ಮುಗಿಯಲ್ಲ, ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಜಾರಿಗೆ ತರಬೇಕಿದೆ. ಅಂದಾಗ ಮಾತ್ರ ಮಹಾತ್ಮರ ಜಯಂತಿಗೆ ನಿಜವಾದ ಅರ್ಥ ಬರುತ್ತದೆ. ದಲಿತರು, ಹಿಂದುಳಿದ ವರ್ಗದವರೇ ಬಸವಣ್ಣನವರ ನಿಜವಾದ ಅನುಯಾಯಿಗಳು’ ಎಂದು ಪ್ರತಿಪಾದಿಸಿದರು.

‘ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಭಾರತೀಯರು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ. ಮಹಾತ್ಮರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಇಂದು ಜಾತಿಗೊಬ್ಬ ಶರಣರನ್ನು ಹಂಚಿಕೊಂಡು ಜಾತಿ ಪದ್ಧತಿ ಜೀವಂತ ಇಡುವ ಪ್ರಯತ್ನ ನಡೆಯುತ್ತಿದೆ. ಬಸವಣ್ಣನ ಅನುಯಾಯಿಗಳೆಂದು ಹೇಳಿಕೊಳ್ಳುವವರೇ ಬಸವ ತತ್ವ ಅನುಸರಿಸುತ್ತಿಲ್ಲ’ ಎಂದು ವಿಷಾದಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ಶರಣಾನುಯಾಯಿ ಬಸವರಾಜ ಮೊರಬದ, ಸಿದ್ಧಲಿಂಗ ಜಿ. ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ ವಿಶ್ವನಾಥ ತೊಟ್ನಳ್ಳಿ ವೇದಿಕೆಯಲ್ಲಿದ್ದರು.

ವಚನ ವೈಭವದಲ್ಲಿ ಅವಂತಿಕಾ ಘಂಟೆ, ಶ್ರಾವಣಿ ರಾಠೋಡ, ಬಾಬುರಾವ ಪಾಟೀಲ ಚಿತ್ತಕೋಟಾ, ಎಂ.ಎನ್.ಸುಗಂಧಿ ರಾಜಾಪೂರ ಅವರು ವಚನಗಾಯನ ನಡೆಸಿಕೊಟ್ಟರು. ವಿಧವಾ ತಾಯಂದಿರಿಗೆ ಉಡಿ ತುಂಬುವ ಮೂಲಕ ಶರಣರ ವೈಚಾರಿಕ ಪ್ರಜ್ಞೆ ಮೆರೆಯಲಾಯಿತು.

ಜಿಲ್ಲೆಯ ವಿವಿಧ ಕ್ಷೇತ್ರದ ಪ್ರಮುಖರಾದ ವಿದ್ಯಾಸಾಗರ ದೇಶಮುಖ, ಚೆನ್ನಣ್ಣ ಬಾಳಿ ರಾವೂರ, ವಿಜಯಲಕ್ಷ್ಮಿ ನೆಪೆರಿ, ಮಹಾಲಿಂಗಪ್ಪಗೌಡ ಬಂಡೆಪ್ಪಗೌಡರ್, ಪ್ರಭುಲಿಂಗಯ್ಯ ಹಿರೇಮಠ ಕೊಂಡಗುಳಿ, ಶಂಕರ ಹಿಪ್ಪರಗಿ, ಶರಣಬಸಪ್ಪ ಪಾಟೀಲ ಉದನೂರ, ನವಾಜಖಾನ್, ನೀಲಲೋಹಿತ ಹಿರೇಮಠ ಗಂವ್ಹಾರ, ನಂದಿಕುಮಾರ ಪಾಟೀಲ ಪೋಲಕಪಳ್ಳಿ, ನಾಗಪ್ಪ ಕೋಟಗಾರ, ಜಗನ್ನಾಥ ಸೂರ್ಯವಂಶಿ ಅವರಿಗೆ ಬಸವ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT