ಸೋಮವಾರ, ಆಗಸ್ಟ್ 8, 2022
21 °C

ಬಸವಕಲ್ಯಾಣ: ಮುಖಂಡರಿಗೆ ಪಿ.ಎ. ಆಗಿದ್ದ ಶಿಕ್ಷಕ; ಈಗ ಶಾಸಕ ಶರಣು ಸಲಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಅಭ್ಯರ್ಥಿ ಶರಣು ಸಲಗರ

ಕಲಬುರ್ಗಿ: ಶಾಸಕರ ಆಪ್ತಸಹಾಯಕರಾಗಿ ವಿಧಾನಸೌಧ ಸುತ್ತಿದ್ದ ಶರಣು ಸಲಗರ ಈಗ ಸ್ವತಃ ಶಾಸಕ. ಬಸವಕಲ್ಯಾಣ ಕ್ಷೇತ್ರಕ್ಕೆ ವಲಸೆ ಹೋಗಿ ಎರಡೇ ವರ್ಷದಲ್ಲಿ ಅಲ್ಲಿ ಬೀಡುಬಿಟ್ಟಿದ್ದಲ್ಲದೇ 16 ಜನ ಸ್ಥಳೀಯ ಘಟಾನುಘಟಿ ಆಕಾಂಕ್ಷಿಗಳನ್ನು ಹಿಂದಿಕ್ಕಿ ಬಿಜೆಪಿ ಟಿಕೆಟ್‌ ಗಿಟ್ಟಿಸಿಕೊಂಡರು. ಈಗ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ಮಹಾತ್ವಾಕಾಂಕ್ಷೆ ಈಡೇರಿಸಿಕೊಂಡಿದ್ದಾರೆ.

ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ವಿ.ಕೆ.ಸಲಗರ ಗ್ರಾಮದಲ್ಲಿ ಜನಿಸಿರುವ ಶರಣು ಸಲಗರ ಎಂ.ಎಸ್ಸಿ ಎಂ.ಇಡಿ ಓದಿದ್ದಾರೆ. 2002ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕ. ಅದೇ ವೇಳೆ ಶಾಸಕರಾಗಿದ್ದ ರೇವುನಾಯಕ ಬೆಳಮಗಿ ಅವರ ಆಪ್ತ ಸಹಾಯಕರಾಗಿದ್ದರು. 2004ರಿಂದ 2011ರ ವರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದವರಿಗೆ ಹಾಗೂ 2013ರಲ್ಲಿ ಜೇವರ್ಗಿ ಶಾಸಕ ಡಾ.ಅಜಯ ಸಿಂಗ್‌ ಅವರಿಗೆ ಆಪ್ತಸಹಾಯಕರಾಗಿದ್ದರು.

2011ರಲ್ಲಿ ಪ್ರೌಢಶಾಲೆ ಶಿಕ್ಷಕರಾಗಿ ಪದೋನ್ನತಿ ಹೊಂದಿದರು. 2014ರಲ್ಲಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದರು. 2016ರಲ್ಲಿ ಆಳಂದ ತಾಲ್ಲೂಕಿನ ಚಿಂಚನಸೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಟಿಕೆಟ್‌ ಸಿಗಲಿಲ್ಲ ಎಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಕಲಬುರ್ಗಿ ಗ್ರಾಮೀಣ ಮಂಡಲದ ಬಿಜೆಪಿ ಅಧ್ಯಕ್ಷರೂ ಆದರು.

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿಯಲ್ಲಿ ವೈಮನಸ್ಸು ಉಂಟಾಗಿದ್ದರಿಂದ ಮತ್ತು ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಇಲ್ಲಿ ತಮಗೆ (ಇವರು ವೀರಶೈವ ಲಿಂಗಾಯತ)  ರಾಜಕೀಯ ಭವಿಷ್ಯ ಇಲ್ಲ ಎಂಬ ಕಾರಣಕ್ಕೆ ಬಸವಕಲ್ಯಾಣ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿದರು. ಅವರ ಪತ್ನಿ ಸಾವಿತ್ರಿ ಅವರು ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕಿಯಾಗಿದ್ದರು. 2016ರ ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿ ತಹಶೀಲ್ದಾರರಾದರು. ಸುಮಾರು ಎರಡು ವರ್ಷಗಳಿಂದ ಬಸವಕಲ್ಯಾಣ ತಹಶೀಲ್ದಾರರಾಗಿದ್ದ ಅವರು ಚುನಾವಣೆ ಘೋಷಣೆಯಾಗುತ್ತಿದ್ದಂತೆ ವರ್ಗಾವಣೆಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು