ಬುಧವಾರ, ಸೆಪ್ಟೆಂಬರ್ 22, 2021
25 °C
ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಸಲ್ಲಿಸಿದಿ ಬಿ.ಜಿ. ಪಾಟೀಲ

‘ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಮಾಡಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕಲಬುರ್ಗಿ ವಿಭಾಗವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಖುದ್ದು ಮನವಿ ಸಲ್ಲಿಸಿದ ಬಿ.ಜಿ. ಪಾಟೀಲ ಅವರು, ‘ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ರದ್ದುಗೊಳಿಸುವ ಸಂಬಂಧ ಚರ್ಚೆಗಳು ನಡೆದಿವೆ. ಆದರೆ, ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳು ಬೆಂಗಳೂರಿನಿಂದ ಸುಮಾರು 700 ಕಿ.ಮೀ ದೂರ ಇವೆ. ಎಲ್ಲ ವಿಷಯಕ್ಕೂ ಇಷ್ಟು ದೂರ ಪ್ರಯಾಣಿಸಿ ಬೆಂಗಳೂರಿಗೆ ಅಲೆಯುವುದು ಈ ಭಾಗದ ಜನರಿಗೆ ಹೊರೆಯಾಗಲಿದೆ. ಅಲ್ಲದೇ, ಆಡಳಿತ ಸುಧಾರಣೆಗೂ ಸಾಕಷ್ಟು ಸಮಯ ವ್ಯರ್ಥವಾಗಲಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗ ಅತ್ಯಂತ ಹಿಂದುಳಿದಿದೆ ಎಂಬ ಕಾರಣಕ್ಕೆ ಸಂವಿಧಾನದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿ 371ಜೆ ನೀಡಲಾಗಿದೆ. ಅದರನ್ವಯ ಪ್ರಾದೇಶಿಕ ಆಯುಕ್ತರ ಕಚೇರಿ ಆರಂಭಿಸಲಾಗಿದೆ. ಸದ್ಯ ಈ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಆಡಳಿತ ವಿಕೇಂದ್ರಿಕರಣದಲ್ಲೂ ಇದರ ಪಾತ್ರ ದೊಡ್ಡದು. ರಾಜ್ಯ ಸರ್ಕಾರದ ಹಲವಾರು ಜನಸ್ನೇಹಿ ಯೋಜನೆಗಳನ್ನು ನೇರವಾಗಿ, ಶೀಘ್ರವಾಗಿ ಜನರಿಗೆ ತಲುಪಿಸಲು ಇದರಿಂದ ಸಾಧ್ಯವಾಗಿದೆ. ಆಡಳಿತಾತ್ಮಕ ಕಾರ್ಯಗಳಿಗೆ ಅನುಮೋದನೆ ಪಡೆಯುವುದೂ ಸುಲಭವಾಗಿದೆ. ಹೀಗಾಗಿ, ಈ ಕಚೇರಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು’ ಎಂದೂ ಅವರು ಕೋರಿದ್ದಾರೆ.

‘ಪ್ರಾದೇಶಿಕ ಆಯುಕ್ತ ಕಚೇರಿ ರದ್ದಾದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರು ರಸ್ತೆಗಿಳಿದು ಹೋರಾಟ ಮಾಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಇದನ್ನು ರದ್ದುಪಡಿಸುವ ಬದಲು, ಇನ್ನಷ್ಟು ಗಟ್ಟಿಗೊಳಿಸಬೇಕು. ಇದರಿಂದ ಪ್ರಾದೇಶಿಕ ಅಸಮತೋಲನ ನಿವಾರಣೆಯಲ್ಲಿ ನಮ್ಮ ಸರ್ಕಾರದ ಕೊಡುಗೆ ಹೆಚ್ಚು ಇರಲಿದೆ’ ಎಂದೂ ಬಿ.ಜಿ. ಪಾಟೀಲ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.