ಶನಿವಾರ, ಅಕ್ಟೋಬರ್ 23, 2021
25 °C
ಕೃಷಿ ಸಂಬಂಧಿ ಮೂರು ಪ್ರಮುಖ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನಗರದ ವಿವಿಧೆಡೆ ಮೆರವಣಿಗೆ

ಕಲಬುರ್ಗಿ: ಬಂದ್‌ ನೀರಸ, ಪ್ರತಿಭಟನೆ ಬಿರಿಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೃಷಿ ಸಂಬಂಧಿ ಮೂರು ಪ್ರಮುಖ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಸೋಮವಾರ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ಸಂಘಟನೆಗಳಿಂದ ನಗರದ ಬಹುತೇಕ ಕಡೆ ಬೃಹತ್‌ ಪ್ರತಿಭಟನೆ ನಡೆಯಿತು.

ಕೇಂದ್ರ ಬಸ್‌ ನಿಲ್ದಾಣದ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರು ಬೆಳಿಗ್ಗೆ 6 ರಿಂದ 11ರವರೆಗೂ ಬಸ್‌ಗಳು ಹೊರಹೋಗದಂತೆ ತಡೆದರು. ಸೂಪರ್‌ ಮಾರ್ಕೆಟ್‌, ಹಳೆ ಜೇವರ್ಗಿ ರಸ್ತೆ, ಸ್ಟೇಷನ್‌ ರೋಡ್‌ಗಳಲ್ಲಿ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ಬಂದ್‌ ಮಾಡಿದರು. ಆಟೊ ಚಾಲಕರ ಸಂಘದಿಂದ ಬೆಂಬಲ ನೀಡಿದ್ದರೂ ಸಂಚಾರ ಎಂದಿನಂತೆಯೇ ಇತ್ತು. ಹೋಟೆಲ್‌, ಪೆಟ್ರೋಲ್‌ ಬಂಕ್‌ಗಳು ನಿರಾತಂಕವಾಗಿ ನಡೆದವು. 

ಭಾರತ ಕಮ್ಯುನಿಸ್ಟ್‌ ಪಕ್ಷ– ಮಾರ್ಕ್ಸ್‌ವಾದಿ (ಸಿಪಿಐ–ಎಂ), ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ), ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ– ಕಮ್ಯುನಿಸ್ಟ್‌ (ಎಸ್‌ಯುಸಿಐ–ಸಿ), ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ), ಸ್ವರಾಜ್‌ ಇಂಡಿಯಾ ಪಕ್ಷ, ರೈತ ಸಂಘದ ಕೆ.ಎಸ್‌. ಪುಟ್ಟಣ್ಣಯ್ಯ (ಬಣ), ಕೋಡಿಹಳ್ಳಿ ಚಂದ್ರಶೇಖರ್ ಬಣಗಳು, ವಿವಿಧ ದಲಿತ ಸಂಘಟನೆಗಳು ಸೇರಿ ಸಂಯುಕ್ತವಾಗಿ ಹೋರಾಟ ನಡೆಸಿದವು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಕಾಂಗ್ರೆಸ್, ಆಮ್‌ ಆದ್ಮಿ ಪಕ್ಷ ಹಾಗೂ ಜಯ ಕರ್ನಾಟಕ ರಕ್ಷಣಾ ಸೇನೆಯ ಕಾರ್ಯಕರ್ತರು ಬೇರೆಬೇರೆ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಮೆರವಣಿಗೆ, ಧರಣಿ  ನಡೆಸಿದರು.

ಬೆಳಿಗ್ಗೆ 6ರಿಂದಲೇ ನಗರದಲ್ಲಿ ಮೆರವಣಿಗೆಯ ‘ಕಾವು’ ಏರತೊಡಗಿತು. ಸರ್ದಾರ್‌ ವಲ್ಲಭಭಾಯ್ ಪಟೇಲ್‌ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಜಗತ್‌ ಸರ್ಕಲ್‌, ಸೂಪರ್‌ ಮಾರ್ಕೆಟ್‌, ಚಂದ್ರಶೇಖರ ಬಿಲಗಂದಿ ವೃತ್ತ (ಖರ್ಗೆ ವೃತ್ತ), ರಾಮಮಂದಿರ ವೃತ್ತ, ಆಳಂದ ಚೆಕ್‌ಪೋಸ್ಟ್, ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಸಮಾವೇಶಗೊಂಡ  ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಎಲ್ಲೆಡೆ ‘ಜೈ ಜವಾನ್‌, ಜೈ ಕಿಸಾನ್‌’ ಘೋಷಣೆಗಳು ಮಾರ್ದನಿಸಿದವು.

ಹೋರಾಟ ಹತ್ತಿಕ್ಕಲಾಗದು: ಎಸ್‌ವಿಪಿ ವೃತ್ತದಲ್ಲಿ ಸಮಾವೇಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ– ಹಸಿರು ಸೇನೆಯ ಮುಖಂಡರು ‘ರೈತರ ಹೋರಾಟಕ್ಕೆ ಜಯವಾಗಲಿ– ಕಾರ್ಪೊರೇಟ್‌ ಕುಳಗಳ ಸರ್ಕಾರ ತೊಲಗಲಿ’ ಎಂದರು.

‘ದೇಶದ ಉದ್ಧಾರಕ್ಕೆ ಪ್ರತಿ ದಿನ 18 ಗಂಟೆ ಕೆಲಸ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಪ್ರಧಾನಿ, ರೈತರಿಗಾಗಿ ಯಾವ ಕೆಲಸ ಮಾಡಿದ್ದಾರೆ? ಕೃಷಿಯ ಲಾಭ ಹಾಗೂ ನಷ್ಟಗಳು ಒಬ್ಬ ರೈತನಿಗೆ ಗೊತ್ತಿರುತ್ತವೆ ಹೊರತು ಪ್ರಧಾನಿಗಲ್ಲ. ರೈತರ ಮತ ಪಡೆದು ಆಯ್ಕೆಯಾದ ಬಳಿಕ, ಕಾರ್ಪೊರೇಟ್‌ ಕಂಪನಿಗಳಿಗೆ ಇಡೀ ದೇಶವನ್ನು ಮಾರಲು ಹೊರಟಿದ್ದಾರೆ. ಇಂಥವರಿಗೆ ಮತ ಕೊಟ್ಟಿದ್ದಕ್ಕೆ ಈಗ ರೈತರೇ ಮರುಕ ಪಡುವಂತಾಗಿದೆ. ಈ ಹೋರಾಟ ಹತ್ತಿಕ್ಕಲು ನಿಮ್ಮಿಂದ ಸಾಧ್ಯವಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತಕುಮಾರ ಮಾಲಿಪಾಟೀಲ ದೂರಿದರು.

ಜಯ ಕರ್ನಾಟಕ ರಕ್ಷಣಾ ಸೇನೆಯಿಂದ ನಡೆದ ಪ್ರತಿಭಟನೆಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿ, ಉಪಾಧ್ಯಕ್ಷ ಶರಣು ಆರ್. ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮೀಸಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಪೂಜಾರಿ ನೇತೃತ್ವ ವಹಿಸಿದ್ದರು.

ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ವಿವಿಧೆಡೆ ಸಂಚರಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

‘ನಾಚಿಕೆಯಾಗಲಿ ಕೇಂದ್ರ ಸರ್ಕಾರಕ್ಕೆ’
‘ರೈತರಿಗೆ ಬೇಡವಾದ ಮಸೂದೆಗಳು ಕೇಂದ್ರ ಸರ್ಕಾರಕ್ಕೆ ಏಕೆ ಬೇಕು? ನಿಮ್ಮಿಬ್ಬರ ಪ್ರತಿಷ್ಠೆಗಾಗಿ ಇಡೀ ರೈತ ಸಂಕುಲವನ್ನೆ ಬಲಿ ಕೊಡಲು ಹೊರಟ ಮೋದಿ ಹಾಗೂ ಅಮಿತ್‌ ಶಾ ಅವರೇ ನಿಮಗೆ ನಾಚಿಕೆಯಾಗಬೇಕು’ ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾ ಘಟಕದ ಮುಖಂಡರು ಘೋಷಣೆ ಮೊಳಗಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಆಕ್ರೋಶ ಹೊರಹಾಕಿದರು. ‘ಶರಮ್‌ ಕರೋ ಭಾಯಿ ಶರಮ್‌ ಕರೋ, ಶರಮ್‌ ನಹಿ ತೋ ಡೂಬ್‌ ಮರೋ...’ ಎಂದರು.

ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಜಗದೀಶ ಬಳ್ಳಾರಿ, ಉಪಾಧ್ಯಕ್ಷ ಬಾಬರ್ ಮುಸ್ತಫಾ, ಕಾರ್ಯದರ್ಶಿ ಶೇಖರ್ ಸಿಂಗ್, ನಗರ ಘಟಕದ ಅಧ್ಯಕ್ಷ ಸಜ್ಜಾದ್ ಅಲಿ, ಯುವ ಯುವ ಘಟಕದ ಅಧ್ಯಕ್ಷ ಸಿರಾಜ್ ಶಾಬ್ದಿ, ದಕ್ಷಿಣ ಕ್ಷೇತ್ರದ ಸಂಚಾಲಕ ಕಿರಣ ರಾಠೋಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸುಲೇಮಾನ್‌ ಅಲಿ, ಎಂ.ಡಿ. ಹಿಸಾಮುದ್ದಿನ್, ಅಕಾಶ ರಿಡಲಾನ್, ಮಂಸುರಾಲಿ, ಪ್ರಮೋದ ಪೊಲೆ, ಸಂಜೀವಕುಮಾರ ನೇತೃತ್ವ ವಹಿಸಿದ್ದರು.

ನಗರದಾದ್ಯಂತ ಕಾಂಗ್ರೆಸ್‌ ರ್‍ಯಾಲಿ: ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಬೈಕ್‌, ಸ್ಕೂಟರ್‌ ಹಾಗೂ ಕಾರ್‌ಗಳ ಮೂಲಕ ನಗರದ ಮುಖ್ಯರಸ್ತೆಗಳಲ್ಲಿ ಬೃಹತ್ ರ್‍ಯಾಲಿ ನಡೆಸಿದರು.

ಬೆಳಿಗ್ಗೆ 10ಕ್ಕೆ ನಗರದ ಕಾಂಗ್ರೆಸ್‌ ಕಚೇರಿಯಿಂದ ಆರಂಭವಾದ ರ್‍ಯಾಲಿ ಎಸ್‌ವಿಪಿ ವೃತ್ತ, ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ಸೇಡಂ ರಸ್ತೆ, ಆಳಂದ ರಸ್ತೆ, ನೆಹರೂ ಗಂಜ್, ಜೇವರ್ಗಿ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲೂ ಸಂಚರಿಸಿತು. 

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಬಿ.ಆರ್‌. ಪಾಟೀಲ, ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಯೂನುಸ್‌ ಖಾನ್‌ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಹಲವು ಮುಖಂಡರು ಕಾರ್‌ಗಳಲ್ಲಿ ಸಂಚರಿಸಿದರು. ಕಾರ್ಯಕರ್ತರು ಬೈಕ್‌ಗಳಿಗೆ ಕಾಂಗ್ರೆಸ್‌ ಧ್ವಜ ಕಟ್ಟಿಕೊಂಡು ಸಂಚರಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಅಲ್ಲಲ್ಲಿ ವಾಹನ ನಿಲ್ಲಿಸಿ ಆಕ್ರೋಶ ಹೊರಹಾಕಿದರು.

5 ಗಂಟೆ ಬಸ್‌ ಸಂಚಾರ ಸ್ಥಗಿತ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 6ರಿಂದ ವಿವಿಧ ಸಂಘಟನೆಗಳವರು ರಸ್ತೆ ತಡೆ ನಡೆಸಿದ್ದರಿಂದ  5 ಗಂಟೆ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಬೆಳಿಗ್ಗೆ 6ರಿಂದ 9ರವರೆಗೆ ಮಾತ್ರ ರಸ್ತೆ ತಡೆ ನಡೆಸಲು ಪೊಲೀಸರು ಅವಕಾಶ ನೀಡಿದ್ದರೂ ಪ್ರತಿಭಟನಾಕಾರರು ಅಲ್ಲಿಂದ ಕದಲದ ಕಾರಣ 11ರವರೆಗೆ ಬಸ್‌ಗಳು ಸಂಚರಿಸಲಿಲ್ಲ. ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡರು ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

‘ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಇತ್ತು, ಮುಂದೆಯೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ. ಆದರೆ ಇದು ಸುಳ್ಳು ಎಂಬುದು ಅವರಿಗೇ ಗೊತ್ತಿದೆ. ಇಂತಹ ನಾಚಿಕೆಯಿಲ್ಲದೇ ಸುಳ್ಳು ‌ಹೇಳುವ ಪ್ರಧಾನಿ ಮತ್ತೊಬ್ಬರಿಲ್ಲ’ ಎಂದು ಮುಖಂಡರು ಟೀಕಿಸಿದರು.

ರೈತ ಕೃಷಿ ‌ಕಾರ್ಮಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ ನೀಲಾ, ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾ ಮುಲ್ಲಾ, ಮುಖಂಡರಾದ ಶ್ರೀಮಂತ ಬಿರಾದಾರ, ಕೆ.ಎಸ್. ಶರ್ಮಾ, ಪಾಂಡುರಂಗ ಮಾವಿನಕರ, ದತ್ತು ಭಾಸಗಿ, ಮಹೇಶ ಎಸ್.ಬಿ, ಜಗನ್ನಾಥ ಎಚ್.ಎಸ್., ಸ್ನೇಹಾ ಕಟ್ಟಿಮನಿ, ಅನಿತಾ ದೇಸಾಯಿ, ಶಹನಾಜ್ ಅಖ್ತರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು