ಭಾನುವಾರ, ನವೆಂಬರ್ 1, 2020
19 °C
150 ಹಳ್ಳಿಗಳಿಗೆ ನೋಡಲ್ ಅಧಿಕಾರಿಗಳ ನೇಮಕ

ಭೀಮಾ ನದಿಯಲ್ಲಿ ಪ್ರವಾಹ: ಮಧ್ಯ ರಾತ್ರಿಯೂ ಜಿಲ್ಲಾಧಿಕಾರಿಗಳಿಂದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ಭೀಮಾನದಿಯಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ತೊಂದರೆಗೊಳಗಾಗುವ ಗ್ರಾಮಗಳಿಗೆ ಜಿಲ್ಲಾಡಳಿತ ಅಧಿಕಾರಿಗಳನ್ನು ನಿಯೋಜಿಸಿ, ಸ್ಥಳಕ್ಕೆ ಕಳುಹಿಸಿದೆ.

ಪ್ರವಾಹ ಹಿನ್ನೆಲೆಯಲ್ಲಿ ಮಧ್ಯರಾತ್ರಿ ತಮ್ಮ ಕಾರ್ಯಾಲಯದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು, ಆಯಾ ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮುಂತಾದವರ ಮೂಲಕ ಗ್ರಾಮಗಳ ಜನರ ತುರ್ತು ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರವಾಹಕ್ಕಿಡಾಗುವ ಸಂಭವವಿರುವ ಜೇವರ್ಗಿ, ಚಿತ್ತಾಪುರ, ಅಫಜಲಪುರ, ಕಲಬುರ್ಗಿ, ಶಹಾಬಾದ್ ಹಾಗೂ ಕಾಳಗಿ ತಾಲ್ಲೂಕುಗಳಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಆಯಾ ತಾಲ್ಲೂಕಿನ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷದ ನೆರೆ ಹಾವಳಿ  ಹಾಗೂ ನಕ್ಷೆಯನ್ನು ಪರಿಶೀಲಿಸಿ 150 ಹಳ್ಳಿಗಳ ಗ್ರಾಮದ ಜನರ ಸ್ಥಳಾಂತರಕ್ಕೆ ಸೂಚಿಸಲಾಗಿದ್ದರೂ, ಸ್ಥಳಕ್ಕೆ ತೆರಳಲಿರುವ ಅಧಿಕಾರಿಗಳು ಅಲ್ಲಿಯ ಪರಿಸ್ಥಿತಿ ಅವಲೋಕಿಸಿ ಕ್ರಮಕೈಗೊಳ್ಳಲಿದ್ದಾರೆ. ಒಟ್ಟು 27 ಅಧಿಕಾರಿಗಳನ್ನು ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನಿಯೋಜಿಸಿದ್ದು,ಈಗಾಗಲೇ ಎಲ್ಲಾ ಅಧಿಕಾರಿಗಳನ್ನು ಆಯಾ ಗ್ರಾಮಗಳಿಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.

ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು 4ರಿಂದ 6 ಹಳ್ಳಿಗಳ ಉಸ್ತುವಾರಿ ನೋಡಿಕೊಳ್ಳಲಿದ್ದು, ಕಾಳಜಿ ಕೇಂದ್ರ, ರಕ್ಷಣಾ ಕಾರ್ಯ ಮುಂತಾದವುಗಳ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದರು.

ಸ್ಥಳ ತಲುಪಿದ ಕೂಡಲೇ ಅಧಿಕಾರಿಗಳು ವಾಟ್ಸ್ ಆ್ಯಪ್ ಮೂಲಕ ಲೊಕೇಶನ್ ಹಂಚಿಕೊಳ್ಳಬೇಕು ಎಂಬುದನ್ನು ಕಟ್ಟುನಿಟ್ಟಾಗಿ ಸೂಚಿಸಿರುವುದದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ ರಕ್ಷಣಾ ತಂಡ: ಪ್ರವಾಹ ಪರಿಸ್ಥಿತಿ ನಿಭಾಯಿಸಲು ಉಡುಪಿ, ಬಳ್ಳಾರಿ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಬೋಟ್ ಗಳು ಹಾಗೂ ರಕ್ಷಣಾ ತಂಡಗಳ ವ್ಯವಸ್ಥೆ ಮಾಡಲಾಗುತ್ತಿದೆ. ದಾವಣಗೆರೆ ಹಾಗೂ ಮಂಗಳೂರಿನಿಂದ  ಎಸ್ ಡಿ ಆರ್ ಎಫ್ ತಂಡ ಬರಲಿವೆ.

ಅಗ್ನಿಶಾಮಕ ವಾಹನ: ಈಗಾಗಲೇ ಜಿಲ್ಲೆಯ 8 ಕಡೆ ಅಗ್ನಿಶಾಮಕ ಇಲಾಖೆಯ ಜಲವಾಹನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಫಜಲಪುರ ತಾಲ್ಲೂಕಿನ ಘತ್ತರಗಾ, ದೇವಲಗಾಣಗಪೂರ, ಜೇವರ್ಗಿಯ ನೆಲೋಗಿ, ಕಟ್ಟಿ ಸಂಗಾವಿ, ಕಲಬುರ್ಗಿ ತಾಲ್ಲೂಕಿನ ಹಾಗರಗುಂಡಗಿ, ಚಿತ್ತಾಪುರದ ಕಡಬೂರ, ಸೇಡಂ ತಾಲ್ಲೂಕಿನ ಮಳಖೇಡ ಹಾಗೂ ಶಹಾಬಾದ್ ಗಳಲ್ಲಿ ಅಗ್ನಿಶಾಮಕ ವಾಹನ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ ಎನ್ ಡಿ ಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಮಗ್ನವಾಗಿದ್ದು,ಅಗತ್ಯವಿದ್ದಲ್ಲಿ ಇನ್ನೂ ಎರಡು ತಂಡಗಳನ್ನು ಕರೆಸಿಕೊಳ್ಳಲಾಗುವುದು ಎಂದು ಜ್ಯೋತ್ಸ್ನಾ ತಿಳಿಸಿದರು.

ಬೀದರ್ ವಾಯುನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯ ನೆರೆ ಸಂತ್ರಸ್ತರ ರಕ್ಷಿಸಲೆಂದೇ 2 ಹೆಲಿಕಾಪ್ಟರ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಗತ್ಯವಿದ್ದಾಗ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕಲಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ನಲಿನ್ ಅತುಲ್, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ ಹಾಗೂ  ಸಂಬಂಧಪಟ್ಟ  ಅಧಿಕಾರಿಗಳು ಉಪಸ್ಥಿತರಿದ್ದರು.

ಮಹಾರಾಷ್ಟ್ರದ ‌ಉಜನಿ ಮತ್ತು ‌ವೀರ್ ಜಲಾಶಯಗಳಿಂದ ರಾತ್ರಿ ದಾಖಲೆಯ 7.5 ಲಕ್ಷ ‌ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಶುಕ್ರವಾರ ‌ಸಂಜೆ ಜಿಲ್ಲೆಯ ‌ಸೊನ್ನ ಭೀಮಾ ಬ್ಯಾರೇಜ್ ತಲುಪಲಿದೆ. 

ಅಷ್ಟೇ ಪ್ರಮಾಣದ ನೀರನ್ನು ‌ನದಿಗೆ ಹರಿಸಬೇಕಾಗುತ್ತದೆ. ಆಗ ಆರು ತಾಲ್ಲೂಕುಗಳ 100ಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗುವ ಸಂಭವವಿದೆ. ಹೀಗಾಗಿ ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿವ ನಿಟ್ಟಿನಲ್ಲಿ ಜಿಲ್ಲಾಡಳಿತ ಇಡೀ ರಾತ್ರಿ ಕೆಲಸ ಮಾಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು