ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರಾಹುಲ್‌ಗೆ ಸರಣಿ ಪ್ರಶ್ನೆ ಕೇಳಿದ ಬಿಜೆಪಿ

Published 18 ಏಪ್ರಿಲ್ 2024, 6:05 IST
Last Updated 18 ಏಪ್ರಿಲ್ 2024, 6:05 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜ್ಯದ ರೈತರಿಗೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೀರಾ?’, ‘ಬರ ಪರಿಹಾರಕ್ಕೆ ರಾಜ್ಯದಿಂದ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ಸೂಚಿಸುತ್ತೀರಾ?’, ‘ರಾಜ್ಯದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಮಹಿಳೆಯರ ರಕ್ಷಣೆಗೆ ಯಾರು ಹೊಣೆ’ ಎಂಬುದೂ ಸೇರಿದಂತೆ 13 ಪ್ರಶ್ನೆಗಳಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉತ್ತರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ‘ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಕಲಬುರಗಿಯಲ್ಲಿ ವಕೀಲರ ಹತ್ಯೆಯಾಯಿತು. ಆಳಂದ, ಅಫಜಲಪುರದಲ್ಲೂ ಕೊಲೆಗಳಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದರ ಹೊಣೆ ಹೊರುತ್ತೀರಾ?, ರಾಜ್ಯದಲ್ಲಿ  ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 11 ತಿಂಗಳಾದರೂ, ಯಾವುದೇ ಅಭಿವೃದ್ಧಿ ಕೆಲಸಗಳು ಆರಂಭವಾಗಿಲ್ಲ. ಇದಕ್ಕೆ ಉತ್ತರ ಕೊಡಿ. ದಾಖಲೆಯ 15ನೇ ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯತ್ತ ಸಾಗಿದೆ. ಇದಕ್ಕೆ ಏನು ಹೇಳುತ್ತೀರಿ? ಅಧಿಕಾರಿಗಳ ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ನೀವ್ಯಾಕೆ ಸುಮ್ಮನಿದ್ದೀರಿ?, ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ನಿಮ್ಮ ನಿಲುವೇನು?, ವಿಧಾನಸೌಧದಲ್ಲಿ ಪಾಕ್‌ಪರ ಘೋಷಣೆ ಕೂಗಿದ್ದನ್ನು ಖಂಡಿಸುತ್ತೀರಾ?, ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಕಮಿಷನ್‌ ಆರೋಪಕ್ಕೆ ನಿಮ್ಮ ಉತ್ತರವೇನು?, ಗ್ಯಾರಂಟಿ ಹೆಸರಲ್ಲಿ ಬೆಲೆ ಏರಿಕೆ, ವಿದ್ಯುತ್‌ ದರ ಹೆಚ್ಚಳಕ್ಕೆ ಏನು ಹೇಳುತ್ತೀರಿ?’ ಎಂದು ಪ್ರಶ್ನಿಸಿದರು.

‘ಬ್ರ್ಯಾಂಡ್‌ ಬೆಂಗಳೂರು ಬಾಂಬ್‌ ಸ್ಫೋಟ ಪ್ರಕರಣಗಳಿಂದ ಬಾಂಬ್‌ ಬೆಂಗಳೂರು ಆಗುತ್ತಿದ್ದು, ಅದಕ್ಕೆ ನಿಮ್ಮ ಉತ್ತರವೇನು? ಎಂದೂ ಅಮರನಾಥ ಪಾಟೀಲ ಕೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ, ನಾಗರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT