ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಾಂಗ್ರೆಸ್‌ನಲ್ಲಿ ರಜಾಕಾರರ ದೆವ್ವ ನುಸುಳಿದೆ’

ಬಿಜೆಪಿ ಜಿಲ್ಲಾ ಯುವ ಸಮಾವೇಶ: ಸಿ.ಟಿ. ರವಿ ವಾಗ್ದಾಳಿ
Published 30 ಏಪ್ರಿಲ್ 2024, 6:08 IST
Last Updated 30 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಚಿತ್ತಾಪುರ: ‘ರಜಾಕಾರರ ದೆವ್ವ ಕಾಂಗ್ರೆಸ್ ಪಕ್ಷದಲ್ಲಿ ನುಸುಳಿದ್ದು, ಅಂದು ರಜಾಕಾರರು ಮಾಡಲಾಗದ ಕೆಲಸವನ್ನು ಈಗ ಕಾಂಗ್ರೆಸ್ ಮಾಡುತ್ತಿದೆ’ ಎಂದು ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ಪಟ್ಟಣದ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ಯುವ ಘಟಕ ಆಯೋಜಿಸಿದ್ದ ಜಿಲ್ಲಾ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮರಿ ಖರ್ಗೆ (ಪ್ರಿಯಾಂಕ್ ಖರ್ಗೆ) ನೇತೃತ್ವದಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಮರಿ ಖರ್ಗೆ ದರ್ಬಾರಿನ ನಾಲ್ಕು ತಿಂಗಳಲ್ಲಿ ಬಿದ್ದ ಹೆಣಗಳು ಎರಡಂಕಿ ದಾಟಿದ್ದು, ಮೂರಂಕಿ ದಾಟುವ ಕಾಲ ದೂರ ಇಲ್ಲ. ಪೊಲೀಸರು, ಅಧಿಕಾರಿಗಳು ಮರಿ ಖರ್ಗೆ ಹಾಕಿದ ಗೆರೆ ದಾಟುತ್ತಿಲ್ಲ. ಹಾಗಿದ್ದರೇ ಬೀಳುತ್ತಿರುವ ಕೊಲೆಗಳಿಗೆ ಹೊಣೆ ಯಾರು’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರವು ದಲಿತರ ಅಭಿವೃದ್ಧಿಗಾಗಿ ಮೀಸಲಿರಿಸಿದ ಎಸ್‌ಸಿಪಿ ಮತ್ತು ಟಿಎಸ್‌ಪಿಯ ₹25 ಸಾವಿರ ಕೋಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿತ್ತು. ಈ ಬಗ್ಗೆ ದೊಡ್ಡ ಖರ್ಗೆ (ಮಲ್ಲಿಕಾರ್ಜುನ ಖರ್ಗೆ) ಮತ್ತು ಮರಿ ಅವರು ತಮ್ಮದೇ ಸರ್ಕಾರದ ವಿರುದ್ಧ ಒಂದೂ ಮಾತನಾಡಲಿಲ್ಲ. ಇದೇನಾ ನಿಮ್ಮ ದಲಿತಪರ ಕಾಳಜಿ’ ಎಂದು ಕೇಳಿದರು.

‘ಎಲ್ಲಾ ಖಾತೆಗಳ ಬಗ್ಗೆ ಮಾತನಾಡುವ ಮರಿ ಖರ್ಗೆ ಅವರು ದಲಿತರ ಅನುದಾನ ದುರ್ಬಳಕೆ ವಿರೋಧಿಸಿ ರಾಜೀನಾಮೆ ಕೊಡಬೇಕಾಗಿತ್ತು’ ಎಂದರು.

‘ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿಗೆ ಜೈ, ಪಾಕಿಸ್ತಾನ ಜೈ ಎನ್ನಲು ಅನುಮತಿ ಬೇಕಿಲ್ಲ. ಆದರೆ, ಭಾರತ್ ಮಾತಾ ಕಿ ಜೈ ಎನ್ನಲು ಅನುಮತಿ ಬೇಕು. ಇದಕ್ಕಿಂತ ಕೆಟ್ಟ ಸ್ಥಿತಿ ಮತ್ತೊಂದಿಲ್ಲ. ಭಾರತ್ ಮಾತಾ ಕಿ ಜೈ ಎನ್ನಲಾ ಎಂದು ಖರ್ಗೆ ಅವರಿಗೆ ಕೇಳಿದ ಲಕ್ಷ್ಮಣ್ ಸವದಿ ಅವರ ದಯನೀಯ ಸ್ಥಿತಿ ನೋಡಿ ಅಯ್ಯೊ ಎನ್ನಿಸುತ್ತಿದೆ’ ಎಂದು ಕಿಚಾಯಿಸಿದರು.

‘ಕಾಂಗ್ರೆಸ್ಸಿಗರು ಡಾ. ಬಿ.ಆರ್‌. ಅಂಬೇಡ್ಕರ್ ಅವರನ್ನು ಮುಂಬೈ ಮತ್ತು ಬಾಂದ್ರ ಉಪ ಚುನಾವಣೆಯಲ್ಲಿ ಸೋಲಿಸಿದ್ದರು. ಸತ್ತ ಮೇಲೂ ಅಂಬೇಡ್ಕರ್ ಅವರಿಗೆ ದೆಹಲಿಯಲ್ಲಿ ಜಾಗ ಕೊಡದೆ ಅಪಮಾನ ಮಾಡಿದ್ದರು. ಇದನ್ನು ಅಂಬೇಡ್ಕರ್ ಅನುಯಾಯಿಗಳು ಮರೆಯಬಾರದು’ ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿದರು.

ಸಮಾವೇಶದಲ್ಲಿ ತಾಲ್ಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಜಿಲ್ಲಾ ಯುವ ಅಧ್ಯಕ್ಷ ಪ್ರವೀಣ ತೆಗನೂರು, ತಾಲ್ಲೂಕು ಯುವ ಅಧ್ಯಕ್ಷ ದೇವರಾಜ ತಳವಾರ, ಉಸ್ತುವಾರಿ ಶರಣಪ್ಪ ತಳವಾರ, ಮುಖಂಡರಾದ ನೀಲಕಂಠ ಪಾಟೀಲ, ಗುರು ಕಾಮಾ, ಭಾಗೀರಥಿ, ನಾಗುಬಾಯಿ ಜಿತುರೆ, ಸೋಮಶೇಖರ ಪಾಟೀಲ ಬೆಳಗುಂಪಾ, ಶರಣಗೌಡ ಮಾದ್ವಾರ, ವಿಠಲ್ ನಾಯಕ, ಚಂದ್ರಶೇಖರ ಅವಂಟಿ, ಬಸವರಾಜ ಬೆಣ್ಣೂರಕರ್, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಮಾಲಗತ್ತಿ ಉಪಸ್ಥಿತರಿದ್ದರು.

‘ದಲಿತರ ಅನುದಾನದ ದುರ್ಬಳಕೆಗೆ ಕಣ್ಣೀರು ಹಾಕದ ಖರ್ಗೆ’ ‘

ದಲಿತರ ಅನುದಾನ ದುರ್ಬಳಕೆಯಾದಾಗ ಕಣ್ಣೀರು ಹಾಕದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಳಿಯನಿಗೆ ಒಂದು ನೆಲೆ ಒದಗಿಸಲು ಕಣ್ಣೀರು ಹಾಕಿ ಭಾವನಾತ್ಮಕವಾಗಿ ಮಾತನಾಡಿದರು’ ಎಂದು ಸಿ.ಟಿ. ರವಿ ಟೀಕಿಸಿದರು. ‘ಎಐಸಿಸಿ ಅಧ್ಯಕ್ಷರ ದೂರದೃಷ್ಟಿಗೆ ದಲಿತ ಕಾರ್ಯಕರ್ತರು ಕಾಣಲಿಲ್ಲ. ಅವರ ಮನೆಯವರೇ ಮುಖ್ಯವಾದರು. ಮಗನಿಗೆ ರಾಜಕೀಯ ನೆಲೆ ಕೊಟ್ಟಂತೆ ಅಳಿಯನಿಗೂ ಸೆಟ್ಲ್ ಮಾಡಲು ಅತ್ತರೆ ಹೊರತು ಜನರಿಗಾಗಿ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT