ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಯ 9 ಸ್ಥಾನಗಳನ್ನೂ ಬಿಜೆಪಿ ಗೆಲ್ಲಬೇಕು’

ಪ್ರಿಯಾಂಕ್‌, ಅಜಯ್ ಸಿಂಗ್‌ರನ್ನೂ ಸೋಲಿಸಿ ಕಲಬುರಗಿಯನ್ನು ಕಾಂಗ್ರೆಸ್‌ ಮುಕ್ತಗೊಳಿಸಿ: ಕಟೀಲ್
Last Updated 16 ಮೇ 2022, 15:54 IST
ಅಕ್ಷರ ಗಾತ್ರ

ಕಲಬುರಗಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ 9 ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ಸಂಕಲ್ಪ ಮಾಡಬೇಕು. ಆ ಮೂಲಕ ಪ್ರಿಯಾಂಕ್ ಖರ್ಗೆ, ಡಾ. ಅಜಯ್ ಸಿಂಗ್ ಅವರನ್ನು ಮನೆಗೆ ಕಳಿಸುವ ಮೂಲಕ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತಗೊಳಿಸುವ ಸಂಕಲ್ಪ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ಪಕ್ಷದ ನೂತನ ಕಾರ್ಯಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಅತಿ ದೀರ್ಘ ಕಾಲ ದೇಶವನ್ನು ಆಳಿದರೂ ಇಂದು ಅಸ್ತಿತ್ವಕ್ಕಾಗಿ ಪರದಾಡಬೇಕಾಗಿದೆ. ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕುಟುಂಬ ರಾಜಕಾರಣದಿಂದಾಗಿ ಇಂದು ಸಂಕಷ್ಟ ಸ್ಥಿತಿಗೆ ತಲುಪಿದೆ. ಈ ಬಗ್ಗೆ ನಾವೆಲ್ಲ ಎಚ್ಚರ ವಹಿಸಬೇಕು’ ಎಂದರು.

‘ಒಂದು ಕಾಲಕ್ಕೆ ಇಂದಿರಾ ಅಂದರೆ ಇಂಡಿಯಾ ಎಂಬ ಮಾತಿತ್ತು. ಆದರೆ, ಇಂದು ಪಕ್ಷವು ದೇಶದಲ್ಲಿ ಹೇಳ ಹೆಸರಿಲ್ಲದಂತಾಗಿದ್ದು, ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಸೋಲುವ ಭೀತಿಯಿಂದ ಕೇರಳಕ್ಕೆ ವಲಸೆ ಬಂದರು. ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಪ್ರಿಯಾಂಕಾ ಗಾಂಧಿ ನೇತೃತ್ವದ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ಆಗಿದೆ’ ಎಂದು ಹೇಳಿದರು.

‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ವಿದೇಶಗಳಲ್ಲಿ ಭಾರತದ ವರ್ಚಸ್ಸು ಜಾಸ್ತಿಯಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ರಕ್ಷಿಸಲು ರಷ್ಯಾ ಐದು ಬಾರಿ ಕದನ ವಿರಾಮವನ್ನು ಘೋಷಿಸಬೇಕಾಯಿತು. ಅಲ್ಲಿ ಸಿಲುಕಿರುವ ದೇಶದ ಪ್ರಜೆಗಳನ್ನು ಕರೆತರುವ ಮೂಲಕ ಎದೆಗಾರಿಕೆ ತೋರಿಸಿದ ಮೊದಲಿಗ ಮೋದಿ ಅವರಾಗಿದ್ದಾರೆ’ ಎಂದರು.

ಶಾಸಕರಾದ ಬಸವರಾಜ ಮತ್ತಿಮೂಡ, ಡಾ. ಅವಿನಾಶ್ ಜಾಧವ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಜಿಲ್ಲಾ ಕಾರ್ಯಾಲಯ ಕಟ್ಟಡಗಳ ರಾಜ್ಯ ಸಹ ಸಂಚಾಲಕ ಅಮರನಾಥ ಪಾಟೀಲ, ಬಿಜೆಪಿ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಶಿಕಲಾ ಟೆಂಗಳಿ, ಕೃಷ್ಣಾ ಕಾಡಾ (ಭೀಮರಾಯನಗುಡಿ) ಶರಣಪ್ಪ ತಳವಾರ, ಹರ್ಷಾನಂದ ಗುತ್ತೇದಾರ, ಶೋಭಾ ಬಾಣಿ ಇತರರು ವೇದಿಕೆಯಲ್ಲಿದ್ದರು.

₹ 2 ಕೋಟಿಗೂ ಹೆಚ್ಚು ದೇಣಿಗೆ

ಪಕ್ಷದ ಜಿಲ್ಲಾ ಕಾರ್ಯಾಲಯ ಕಟ್ಟಡಕ್ಕೆ ₹ 2 ಕೋಟಿಗೂ ಅಧಿಕ ಹಣವನ್ನು ನೀಡುವುದಾಗಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ವಾಗ್ದಾನ ಮಾಡಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ. ಅವಿನಾಶ್ ಜಾಧವ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ನಮೋಶಿ ಅವರು ತಲಾ ₹ 25 ಲಕ್ಷ ನೀಡುವುದಾಗಿ ತಿಳಿಸಿದರು. ದತ್ತಾತ್ರೇಯ ಪಾಟೀಲ ವೈಯಕ್ತಿಕ ನೆರವಿನ ಜೊತೆಗೆ ದಾನಿಗಳಿಂದ ₹ 20 ಲಕ್ಷ ಸಂಗ್ರಹಿಸಿಕೊಡುವುದಾಗಿ ತಿಳಿಸಿದರು.

ಮಾಲೀಕಯ್ಯ ಗುತ್ತೇದಾರ ₹ 5 ಲಕ್ಷ, ಪಕ್ಷದ ಮುಖಂಡರಾದ ರಾಘವೇಂದ್ರ ಕುಲಕರ್ಣಿ ಹಾಗೂ ಗಿರೀಶ ಭಜಂತ್ರಿ ತಲಾ ₹ 1 ಲಕ್ಷ ನೀಡುವುದಾಗಿ ಘೋಷಿಸಿದರು.

‘ಅದಾನಿ, ಅಂಬಾನಿ ಬದಲು ರೈತರಿಗೆ ಹೆಚ್ಚು ಸಬ್ಸಿಡಿ’

ನರೇಂದ್ರ ಮೋದಿ ಸರ್ಕಾರವು ಶ್ರೀಮಂತ ಉದ್ಯಮಿಗಳಾದ ಅದಾನಿ, ಅಂಬಾನಿ ಬದಲು ರೈತರ ಬಾಳು ಹಸನಾಗಲು ಹೆಚ್ಚು ಸಬ್ಸಿಡಿ ನೀಡಿದೆ. 84 ಕೋಟಿ ಕುಟುಂಬಗಳಿಗೆ ಎರಡೂವರೆ ವರ್ಷ ಉಚಿತ ಪಡಿತರ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಪಕ್ಷದ ವಿವಿಧ ಪ್ರಕೋಷ್ಠಗಳ ಮುಖಂಡರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೋದಿ ಅವರು ರೈತರು ಬಳಸುವ ರಸಗೊಬ್ಬರದ ಮೇಲೆ ₹ 6.57 ಲಕ್ಷ ಕೋಟಿ ಸಬ್ಸಿಡಿ ನೀಡಿದ್ದಾರೆ. ₹ 12 ಪಾವತಿ ಮಾಡಿದರೆ ₹ 2 ಲಕ್ಷದವರೆಗೆ ಜೀವ ವಿಮೆ ಲಭ್ಯವಾಗುವ ಯೋಜನೆ ರೂಪಿಸಿದ್ದಾರೆ. 2.53 ಕೋಟಿ ಬಡವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಸಿಕೊಟ್ಟಿದ್ದಾರೆ’ ಎಂದರು.

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಹೇಳಿದ್ದ ಮಾತು ಈಗಲೂ ಪ್ರಚಲಿತದಲ್ಲಿದೆ. ಕೇಂದ್ರದಿಂದ ₹ 100 ಬಿಡುಗಡೆಯಾದರೆ ಅದು ಫಲಾನುಭವಿಗೆ ಹೋಗಿ ತಲುಪುವಲ್ಲಿ ₹ 15 ಆಗಿರುತ್ತದೆ ಎಂದಿದ್ದರು. ಆಗ ಬಿಜೆಪಿ ಅಧಿಕಾರದಲ್ಲಿರಲಿಲ್ಲ. ಹಾಗಿದ್ದರೆ, ಮಧ್ಯೆ ನಡೆಯುತ್ತಿದ್ದ ಸೋರಿಕೆಯನ್ನು ತಡೆಯಲಿಲ್ಲ ಏಕೆ ಎಂದು ಪ್ರಶ್ನಿಸಿದರು.

‘ಈಗ ಹಾಗೆ ಸೋರಿಕೆಯಾಗಲು ಅವಕಾಶವೇ ಇಲ್ಲ. ನೇರವಾಗಿ ಬಿಡುಗಡೆಯಾದ ಹಣ ಫಲಾನುಭವಿಯ ಬ್ಯಾಂಕ್ ಖಾತೆಗೇ ಜಮಾ ಆಗುತ್ತಿದೆ. ಹೀಗೆ ಒಟ್ಟು ₹ 27.83 ಲಕ್ಷ ಕೋಟಿ ಹಣವನ್ನು ನೇರ ವರ್ಗಾವಣೆಯ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT