ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ವೀರಶೈವ ಲಿಂಗಾಯತ ಸಮಾವೇಶ ಇಂದು

ಬಿ.ಎಸ್‌.ಯಡಿಯೂರಪ್ಪ ಭಾಗಿ; 15 ಸಾವಿರ ಜನರ ನಿರೀಕ್ಷೆ
Last Updated 15 ಏಪ್ರಿಲ್ 2019, 7:17 IST
ಅಕ್ಷರ ಗಾತ್ರ

ಕಲಬುರ್ಗಿ: ಭಾರತೀಯ ಜನತಾ ಪಕ್ಷದಿಂದ ವೀರಶೈವ ಲಿಂಗಾಯತ ಸಮಾಜದ ಸಮಾವೇಶವನ್ನು ಏ.16ರಂದು ಸಂಜೆ 6ಕ್ಕೆ ಇಲ್ಲಿಯ ಎನ್‌.ವಿ. ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ ಶಶೀಲ್‌ ಜಿ.ನಮೋಶಿ, ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವೀರಶೈವ ಲಿಂಗಾಯತ ಸಮುದಾಯದಲ್ಲಿ 93 ಒಳಪಂಗಡಗಳಿವೆ. ಬಣಜಿಗ, ಗಾಣಿಗ, ರಡ್ಡಿ, ಹೂಗಾರ, ಜಂಗಮ ಸೇರಿದಂತೆ ಎಲ್ಲ ಒಳಪಂಗಡದವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ನಮೋಶಿ ಹೇಳಿದರು.

‘ಈ ವರ್ಗಗಳವರು ಬಿಜೆಪಿಯನ್ನು ಸದಾ ಬೆಂಬಲಿಸುತ್ತ ಬಂದಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ಸಿಗರು ಲಿಂಗಾಯತ ಬೇರೆ ಎನ್ನುತ್ತ ಧರ್ಮವನ್ನು ಒಡೆಯುವ ಕೆಲಸ ಮಾಡಿದರು. ಅದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಈ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದರು.

ರಾಜೀನಾಮೆ ನೀಡಲಿ: ‘ಡಾ.ಶರಣಪ್ರಕಾಶ ಪಾಟೀಲರು ಜಾಗತಿಕ ಲಿಂಗಾಯತ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ನಿಂದ ವೀರಶೈವ–ಲಿಂಗಾಯತ ಸಮಾವೇಶ ಮಾಡಿರುವ ಅವರು ಮೊದಲು ಆ ಹುದ್ದೆಗೆ ರಾಜೀನಾಮೆ ನೀಡಲಿ’ ಎಂದು ಮಾಜಿ ಮೇಯರ್‌ ಧರ್ಮಪ್ರಕಾಶ ಪಾಟೀಲ ಆಗ್ರಹಿಸಿದರು.

‘ನಮ್ಮ ಸಮಾಜದ ಗುರು ತುಮಕೂರು ಸಿದ್ಧಗಂಗಾ ಶ್ರೀಗಳು ನಿಧನರಾದಾಗ ಮುಖ್ಯಮಂತ್ರಿ ಸೇರಿ ಎಲ್ಲರೂ ಅಲ್ಲಿದ್ದರು. ಆದರೆ, ಮುಖ್ಯಮಂತ್ರಿ ಆದೇಶ ಧಿಕ್ಕರಿಸಿ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿದರು. ಈಗ ಅವರಿಗೆ ನಮ್ಮ ಸಮುದಾಯ ನೆನಪಾಯಿತೇ’ ಎಂದು ಅವರು ಪ್ರಶ್ನಿಸಿದರು.

‘ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರು ತಮ್ಮ ಹುದ್ದೆ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಕಾಂಗ್ರೆಸ್‌ ಪರವಾಗಿ ಸಮಾವೇಶ ಮಾಡಿ ಅವರು ತಪ್ಪು ಮಾಡಿದ್ದಾರೆ. ಅದನ್ನು ನಮ್ಮವರಿಗೆ ತಿಳಿಸಲು ಈ ಸಮಾವೇಶ ಮಾಡುತ್ತಿದ್ದೇವೆ’ ಎಂದು ರವಿ ಬಿರಾದಾರ ಹೇಳಿದರು.

ಎಚ್‌ಕೆಆರ್‌ಡಿಬಿ ಮಾಜಿ ಅಧ್ಯಕ್ಷ ಮಹಾಂತಗೌಡ, ಎಂ.ಎಸ್‌. ಪಾಟೀಲ ನರಿಬೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT