ಕಲಬುರಗಿ: ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡುವ ಉದ್ದೇಶದಿಂದ ಕಲಬುರಗಿಯಲ್ಲಿ 1982ರಿಂದ ಆಗಾಗ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಗುಂಡೂರಾವ್, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಗಳು ನಡೆದರೂ ಜನರ ಆಶೋತ್ತರಗಳು ಈಡೇರಲಿಲ್ಲ.
ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪವಾದ ಯೋಜನೆಗಳ ಜಾರಿಯಲ್ಲಿ ಸರ್ಕಾರ ಬದ್ಧತೆಯೂ ತೋರಿಲ್ಲ ಎಂಬ ಆಕ್ರೋಶ ಜನವಲಯದಿಂದ ಕೇಳಿಬರುತ್ತಿದೆ. 371 (ಜೆ) ಕಲಂ ಜಾರಿಯ ದಶಮಾನೋತ್ಸವದಲ್ಲಿ ನಡೆಯುತ್ತಿರುವ ಈ ಸಚಿವ ಸಂಪುಟ ಸಭೆಯಿಂದಾದರೂ ಅಭಿವೃದ್ಧಿಯ ತಂಗಾಳಿ ಬೀಸಲಿ ಎಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.
ಸಮಗ್ರ ಆರ್ಥಿಕ ಮತ್ತು ಶೈಕ್ಷಣಿಕ ದೃಷ್ಟಿಯ 371 (ಜೆ) ಜಾರಿ ಬಳಿಕ ಸಾವಿರಾರು ಕೋಟಿ ರೂಪಾಯಿ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳ ಭರವಸೆಯ ಸುರಿಮಳೆಯನ್ನೇ ಕಂಡಿದೆ. ಆದರೆ, ಆ ಯೋಜನೆಗಳ ಕಾರ್ಯಗತ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟ್‌ಗಳಿಗೆ 371 (ಜೆ) ವರವಾದರೂ ಉದ್ಯೋಗ ಅವಕಾಶಗಳಿಗೆ ವಲಸೆ ಹೋಗುವುದು ಇನ್ನೂ ತಪ್ಪಿಲ್ಲ.
2014ರಲ್ಲಿ ಸಚಿವ ಸಂಪುಟ ಸಭೆ ನಡೆದಾಗ, ‘ಕಲ್ಯಾಣ ಕರ್ನಾಟಕ ಭಾಗದ ಖಾಲಿ ಇರುವ ಎಲ್ಲ ಹುದ್ದೆಗಳನ್ನು 2015ರ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ದಶಕದ ಬಳಿಕ ಮತ್ತೊಂದು ಸಭೆಗೆ ಸಜ್ಜಾಗಿದ್ದರೂ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. 371 (ಜೆ) ಅಡಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 1,09,416 ಹುದ್ದೆಗಳು ಮಂಜೂರಾಗಿವೆ. ಅವುಗಳ ಪೈಕಿ 79,990 ಹುದ್ದೆಗಳು ಭರ್ತಿಯಾಗಿದ್ದು, 29,426 ಹುದ್ದೆಗಳು ಖಾಲಿ ಇವೆ.
ಮಾನವ ಸಂಪನ್ಮೂಲ ಇದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ. ಗ್ರಾಮೀಣ ಭಾಗದ ಬಡ ಶ್ರಮಿಕರು ಕೂಲಿಗಾಗಿ ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪುತ್ತಿಲ್ಲ. ಮಹಿಳೆಯರು, ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಶಿಶು–ತಾಯಿ ಮರಣದಂತಹ ಪಿಡುಗು ನಿವಾರಣೆಯಾಗಿಲ್ಲ. ಜನರ ಜೀವನ ಮಟ್ಟ ಮತ್ತು ಆರ್ಥಿಕ ಸಮೃದ್ಧತೆ ಬಿಂಬಿಸುವ ತಲಾ ಆದಾಯವೂ ಕಳಪೆಯಾಗಿದೆ.
ಗಂಡೋರಿ ನಾಲಾ, ಅಮರ್ಜಾ, ಕೆಳದಂಡೆ ಮುಲ್ಲಾಮಾರಿ, ಬೆಣ್ಣೆತೊರಾ, ಚಂದ್ರಂಪಳ್ಳಿ, ಭೀಮಾ ಏತ ನೀರಾವರಿಯಂತಹ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದರೂ ಕೃಷಿ ಜಮೀನಿಗೆ ನಿರೀಕ್ಷಿತ ಮಟ್ಟದಲ್ಲಿ ನೀರು ತಲುಪಿಲ್ಲ. ಪ್ರವಾಸೋದ್ಯಮ, ಧಾರ್ಮಿಕ, ಐತಿಹಾಸಿಕ ಕ್ಷೇತ್ರಗಳೂ ಅಭಿವೃದ್ಧಿಯಿಂದ ದೂರಾಗಿವೆ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಸೆಪ್ಟೆಂಬರ್ 17ರ ಸಚಿವ ಸಂಪುಟ ಸಭೆಯಲ್ಲಿ ಆದ್ಯತೆ ಸಿಕ್ಕು, ವೇಗ ಪಡೆದುಕೊಳ್ಳಲಿ ಎಂಬುದು ಜಿಲ್ಲೆಯ ನಿವಾಸಿಗಳ ಒತ್ತಾಸೆಯಾಗಿದೆ.
ಸ್ಥಾಪನೆಯಾಗದ ಕಚೇರಿಗಳು: ಕಾಳಗಿ ತಾಲ್ಲೂಕು ರಚನೆಯಾಗಿ ಏಳು ವರ್ಷವಾದರೂ ಯಾವುದೇ ಸರ್ಕಾರಿ ಕಚೇರಿ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಿಲ್ಲ.
ಹೇರೂರ ಬೆಣ್ಣೆತೊರಾ ಜಲಾಶಯಕ್ಕೆ ಹಣದ ಹೊಳೆಯೇ ಹರಿದರೂ ನೀರಾವರಿ ಮರೀಚಿಕೆಯಾಗಿದೆ. ಜಮೀನು ಕೊಟ್ಟ ರೈತರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ.
ಕಾಳಗಿ ಸಮುದಾಯ ಆರೋಗ್ಯ ಕೇಂದ್ರವು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರದ ಪರಿಣಾಮ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸೌಕರ್ಯಗಳ ಕೊರತೆಯಿಂದಾಗಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಈಗ ಇರುವ ವೈದ್ಯರ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಭೂದಾನಿಗಳ ಸಹಕಾರ, ಸ್ಥಳವಕಾಶ ಇದ್ದರೂ ಮಿನಿ ವಿಧಾನಸೌಧ, ಕೋರ್ಟ್ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿಲ್ಲ.
ಚಿಂಚೋಳಿಯಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಚಂದ್ರಂಪಳ್ಳಿಯನ್ನು ಕೇಂದ್ರೀಕರಿಸಿ ಹೊಸ ಯೋಜನೆ ಘೋಷಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ
- ಸುಭಾಷ ರಾಠೋಡ್ ಕೆಪಿಸಿಸಿ ಉಪಾಧ್ಯಕ್ಷ
ಮಲ್ಲಾಬಾದ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ₹ 500 ಕೋಟಿ ಬಿಡುಗಡೆ ಮಾಡಿದ್ದು ಈ ಯೋಜನೆಯ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲಿದೆ
-ಕೇದಾರಲಿಂಗಯ್ಯ ಹಿರೇಮಠ ಮಲ್ಲಾಬಾದ ಏತ ನೀರಾವರಿ ಯೋಜನೆಯ ಹೋರಾಟಗಾರ
ಸೊನ್ನ ಭೀಮಾ ನದಿ ಏತ ನೀರಾವರಿ ಯೋಜನೆಯಿಂದ 43 ಗ್ರಾಮಗಳ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಹರಿಸಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು
-ಶ್ರೀಮಂತ ಬಿರಾದಾರ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅಫಜಲಪುರ
ಗಗನ ಕುಸುಮವಾದ ನೀರಾವರಿ ಕೃಷಿ
ಸಾವಿರಾರು ವರ್ಷಗಳ ಚರಿತ್ರೆ ಹೊಂದಿರುವ ನಾಗಾವಿ ಘಟಿಕಾಸ್ಥಾನ ಮತ್ತು ಸನ್ನತಿ–ಕನಗನಹಳ್ಳಿ ಸಮೀಪದ ಪುರಾತನ ಬೌದ್ಧವಿಹಾರದ ಸಮಗ್ರ ಅಭಿವೃದ್ಧಿ ಎಂಬುದು ಪರಿಶೀಲನೆ ಭಾಷಣಕ್ಕೆ ಸೀಮಿತವಾಗಿದೆ. ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ. ಕಾಗಿಣಾ ನದಿಗೆ ಮುಡಬೂಳ ಭಾಗೋಡಿ ಕದ್ದರಗಿ ಶಂಕರವಾಡಿ ಮತ್ತು ಗೋಳಾ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಪಂಪ್‌ಸೆಟ್ ಮೂಲಕ ನದಿಯಿಂದ ನೀರು ಪಡೆಯಲು ನದಿಯ ಎರಡೂ ದಡಗಳಲ್ಲಿ ವಿದ್ಯುತ್ ಸರಬರಾಜು ಬೇಕಾದ ವ್ಯವಸ್ಥೆಯನ್ನು ಮಾಡದ ಆಡಳಿತ ಯಂತ್ರ ಕೈಕಟ್ಟಿ ಕುಳಿತಿದೆ ಎನ್ನುತ್ತಾರೆ ಸ್ಥಳೀಯರು.
₹ 916 ಕೋಟಿ ಹರಿದರು ಜಮೀನಿಗೆ ಬಾರದ ನೀರು
ಅಫಜಲಪುರ: 3.16 ಟಿಎಂಸಿ ನೀರು ಹಿಡಿದಿಟ್ಟು 60 ಸಾವಿರ ಎಕರೆ ಭೂಮಿಗೆ ನೀರುಣಿಸುವ ಸೊನ್ನ ಭೀಮಾ ಏತ ನೀರಾವರಿ ಯೋಜನೆಗೆ 20 ವರ್ಷಗಳು ಕಳೆದಿವೆ. ಸುಮಾರು ₹ 916 ಕೋಟಿ ಖರ್ಚಾದರೂ ಕಾಲುವೆಯ ಕೊನೆಯ ಭಾಗದ ಜಮೀನಿಗೆ ಇನ್ನೂ ನೀರು ತಲುಪಿಲ್ಲ. ‘ಈ ಯೋಜನೆ ಪೂರ್ಣವಾಗಿ ಯಶಸ್ವಿಯಾದರೆ ತೆರೆದ ಬಾವಿ ಮತ್ತು ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಪ್ರತಿ ಬೇಸಿಗೆಯಲ್ಲಿ ತಲೆದೂರುವ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗುತ್ತಿದೆ. ಕಾಲುವೆಗೆ ನೀರು ಹರಿಸಲು ಹೋರಾಟ ಮಾಡುತ್ತಿದ್ದರೂ ನೀರು ದೊರೆಯುತ್ತಿಲ್ಲ’ ಎನ್ನುತ್ತಾರೆ ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ. ‘43 ಗ್ರಾಮಗಳ ಜಮೀನುಗಳ ಕಾಲುವೆಗಳಿಗೆ ಇದುವರೆಗೂ ನೀರು ಹರಿದಿಲ್ಲ. ಕಾಲುವೆ ಹೂಳು ತೆಗೆಯುವಲ್ಲಿ ಅವ್ಯವಹಾರ ನಡೆದಿದೆ. ವರ್ಷದಲ್ಲಿ 2 ಬೆಳೆ ಬೆಳೆಯಲು ಆಗುತ್ತಿಲ್ಲ. ಮೂವರು ಹಿರಿಯ ಎಂಜಿನಿಯರ್ ಸೇರಿ 80ಕ್ಕೂ ಹೆಚ್ಚು ನೌಕರರು ತಿಂಗಳ ಸಂಬಳ ಎಣಿಸುತ್ತಿದ್ದಾರೆ. ಆದರೆ ಕೃಷಿ ಜಮೀನಿಗೆ ನೀರು ಹರಿಸುವತ್ತ ಕಾಳಜಿ ತೋರುತ್ತಿಲ್ಲ. ಜನಪ್ರತಿನಿಧಿಗಳು ಚುರುಕು ಮುಟ್ಟಿಸುತ್ತಿಲ್ಲ’ ಎಂದರು.
ಮರೀಚಿಕೆಯಾದ ಜಂಗಲ್ ಲಾಡ್ಜ್
ಜಂಗಲ್ ಲಾಡ್ಜ್ ಅರಣ್ಯ ಮಹಾವಿದ್ಯಾಲಯ ಸ್ಥಾಪನೆ ಮರಿಚೀಕೆಯಾಗಿದ್ದು ಗುಲಬರ್ಗಾ ವಿಶ್ವವಿದ್ಯಾಲಯ ಅಡಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪೂರಕ ವರದಿಯ ಪ್ರಸ್ತಾವನೆ ದೂಳು ತಿನ್ನುತ್ತಿದೆ. ತಾಲ್ಲೂಕಿನಲ್ಲಿ 1 ಲಕ್ಷ ಎಕರೆ ಅರಣ್ಯ ಪ್ರದೇಶವಿದ್ದು ಅರಣ್ಯ ಸಂರಕ್ಷಣೆ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಅರಣ್ಯ ಮಹಾವಿದ್ಯಾಲಯ ಸ್ಥಾಪನೆ ಕನಸು ಈಡೇರುತ್ತಿಲ್ಲ. ಎತ್ತಿಪೋತೆ ಮಾಣಿಕಪುರ ಚಂದ್ರಂಪಳ್ಳಿ ಜಲಾಶಯಗಳು ಗೊಟ್ಟಂಗೊಟ್ಟ ನಿಸರ್ಗಧಾಮಗಳಲ್ಲಿ ಪ್ರವಾಸಿ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿಲ್ಲ. ಚಂದ್ರಂಪಳ್ಳಿಯಲ್ಲಿ ಜಂಗಲ್ ಲಾಡ್ಜ್ ಸ್ಥಾಪನೆಯನ್ನು ತಡೆ ಹಿಡಿಯಲಾಗಿದೆ. ಅರಣ್ಯ ಇಲಾಖೆಯು ಕುಂಚಾವರಂ ವನ್ಯಜೀವಿ ಧಾಮದ ಶೇರಿಭಿಕನಳ್ಳಿ ಸ್ಥಳಾಂತರ ಮತ್ತು ಪುನರ್ ವಸತಿಗೆ ಸ್ಥಳ ಗುರುತಿಸಿದೆ. ಹೊಸ ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸದೆ ಸ್ಥಳಾಂತರಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗಿದೆ. 15 ವರ್ಷಗಳ ಹೋರಾಟದಿಂದಾಗಿ ಐನಾಪುರ ಏತ ನೀರಾವರಿ ಯೋಜನೆಗೆ ಸುಮಾರು ₹ 205 ಕೋಟಿಯ ಟೆಂಡರ್ ತೆರೆದರೂ ಕಾಮಗಾರಿ ಆರಂಭವಾಗಿಲ್ಲ. ತಾಲ್ಲೂಕಿನಲ್ಲಿ 110 ಕೆವಿ ಸಾಮರ್ಥ್ಯದ ಒಂದೇ ವಿದ್ಯುತ್ ಉಪ ಕೇಂದ್ರವಿದೆ. ತಾಂತ್ರಿಕ ಸಮಸ್ಯೆಯಾದರೆ ಅರ್ಧ ತಾಲ್ಲೂಕಿಗೆ ಕತ್ತಲು ಆವರಿಸುತ್ತದೆ. ಕೊಳ್ಳೂರಿನಲ್ಲಿ 110 ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿ ಆರಂಭಿಸಿದ ಬಳಿಕ ಟೆಂಡರ್ ರದ್ದುಪಡಿಸಲಾಗಿದೆ.
ಎರಡು ಜಲಾಶಯ ಇದ್ದರೂ ನಿರುಪಯುಕ್ತ
6.80 ಟಿಎಂಸಿ ಸಾಮರ್ಥ್ಯದ ಬೆಣ್ಣೆತೊರೆ ಮತ್ತು ಗಂಡೋರಿನಾಲಾ ನೀರಾವರಿ ಯೋಜನೆಗಳು ಇದ್ದರೂ ರೈತರ ಪಾಲಿಗೆ ಅವು ನಿರುಪಯುಕ್ತವಾಗಿವೆ. ಉಭಯ ಜಲಾಶಯಗಳಿಂದ 12 ಗ್ರಾಮಗಳ ಸಾವಿರಾರು ಎಕರೆಯ ಫಲವತ್ತಾದ ಜಮೀನು ಮುಳುಗಡೆಯಾಗಿದೆ. ಯಾವೊಬ್ಬ ರೈತನ ಹೊಲಕ್ಕೆ ನೀರು ಮುಟ್ಟುತ್ತಿಲ್ಲ. ಈಚೆಗೆ ಗಂಡೋರಿನಾಲಾ ಜಲಾಶಯ ಕಾಲುವೆ ನವೀಕರಣಕ್ಕೆ ಸುಮಾರು ₹100 ಕೋಟಿ ಒದಗಿಸಲಾಗಿತ್ತು. ಕಳಪೆ ಕಾಮಗಾರಿ ಮಾಡಿ ಹಣ ಲಪಟಾಯಿಸಿದ ಆರೋಪ ಕೇಳಿಬಂದಿದೆ. ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ತಾಂಡಾಗಳಿದ್ದು ಅಲ್ಲಿನ ನಿವಾಸಿಗಳು ಕೂಲಿಗಾಗಿ ಮುಂಬೈ ಬೆಂಗಳೂರು ದುಬೈಗೆ ಗುಳೆ ಹೋಗಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಕಮಲಾಪುರ ಅಥವಾ ಮಹಾಗಾಂವ ಕ್ರಾಸ್ ಸಮೀಪ ಕೈಗಾರಿಕೆ ಸ್ಥಾಪಿಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ. ಹೊಸ ತಾಲ್ಲೂಕು ರಚನೆಯ ಬಳಿಕ ಚಿಂಚೋಳಿ ಮತ್ತು ಆಳಂದ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಕಮಲಾಪುರಕ್ಕೆ ಸೇರಿಸಲಾಯಿತು. ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯ ದಾಖಲಾತಿ ನೀಡುವ ಅಧಿಕಾರ ಮಾತ್ರ ಕಮಲಾಪುರಕ್ಕೆ ಸಿಕ್ಕಿದೆ. ಶಿಕ್ಷಣ ಕೃಷಿ ಪೊಲೀಸ್ ಉಪ ನೋಂದಣಾಧಿಕಾರಿ ಸೇರಿ ಉಳಿದೆಲ್ಲ ಇಲಾಖೆಯ ಕಾರ್ಯಗಳನ್ನು ಹಳೆಯ ತಾಲ್ಲೂಕು ಕೇಂದ್ರಗಳಿಗೆ ಅಲೆಯಬೇಕಿದೆ.
‘ಅನುಭವ ಮಂಟಪ–ಅಂಜನಾದ್ರಿ ನಡುವೆ ಪ್ರವಾಸಿ ಸರ್ಕಿಟ್’
‘ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೀದರ್‌ನ ಅನುಭವ ಮಂಟಪದಿಂದ ಕೊಪ್ಪಳದ ಅಂಜನಾದ್ರಿವರೆಗೆ ಪ್ರವಾಸಿ ಸರ್ಕಿಟ್ ಘೋಷಿಸಿ ಅಭಿವೃದ್ಧಿಪಡಿಸಬೇಕು’ ಎಂದು ಆರ್ಥಿಕ ತಜ್ಞೆ ಸಂಗೀತಾ ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ಈ ಪ್ರವಾಸಿ ಸರ್ಕಿಟ್ ಅಡಿ ಜೋಡಿಸಬೇಕು. ನದಿಗಳಲ್ಲಿ ಬೋಟಿಂಗ್ ಜಲಪಾತಗಳ ಬಳಿ ಅಡ್ವೆಂಚರ್ ಶೈಕ್ಷಣಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬೇಕು. ಕಾವೇರಿ ಆರತಿ ಮಾದರಿಯಲ್ಲಿ ಭೀಮಾ ಕೃಷ್ಣ ಆರತಿ ಮಾಡಬೇಕು’ ಎಂದರು. ‘ಸಿಎಜಿ ವರದಿ ಅನ್ವಯ ನಮ್ಮ ಭಾಗದಲ್ಲಿ ವೈದ್ಯರ ಮತ್ತು ರೋಗಿಗಳ ನಡುವಿನ ಅನುಪಾತ ಬಹಳ ಅಂತರವಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಗಮನ ಹರಿಸಬೇಕು’ ಎಂದು ಹೇಳಿದರು.
ಪೂರಕ ಮಾಹಿತಿ: ಜಗನ್ನಾಥ ಡಿ. ಶೇರಿಕಾರ, ಮಲ್ಲಿಕಾರ್ಜುನ ಎಚ್.ಎಂ., ವೆಂಕಟೇಶ ಹರವಾಳ, ತೀರ್ಥಕುಮಾರ ಬೆಳಕೋಟಾ, ಗುಂಡಪ್ಪ ಕರೆಮನೋರ, ಶಿವಾನಂದ ಹಸರಗುಂಡಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.