ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ, ಕೆಂಪು ಬಾಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ: ಸಚಿವೆ ಶೋಭಾ ಕರಂದ್ಲಾಜೆ

ಯುವಕರ ನಡೆ–ಕೃಷಿಯ ಕಡೆ ಕಾರ್ಯಾಗಾರಕ್ಕೆ ಚಾಲನೆ
Last Updated 4 ಸೆಪ್ಟೆಂಬರ್ 2021, 13:34 IST
ಅಕ್ಷರ ಗಾತ್ರ

ಕಲಬುರ್ಗಿ: ಭೌಗೋಳಿಕ ವಿಶೇಷತೆ (ಜಿಐ)ಸ್ಥಾನಮಾನ ಪಡೆದಿರುವ ಜಿಲ್ಲೆಯ ತೊಗರಿ ಮತ್ತು ಕೆಂಪು ಬಾಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಇದರಿಂದ ಉತ್ತಮ ಬೆಲೆ ದೊರೆತು, ರೈತರ ಆದಾಯ ಹೆಚ್ಚಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ, ವಿಕಾಸ ಅಕಾಡೆಮಿಯು ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಯುವಕರ ನಡೆ–ಕೃಷಿಯ ಕಡೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೈಗೊಂಡ ರೈತರ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ನಮ್ಮ ರೈತರು ಬೆಳೆದ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಕ್ಲಸ್ಟರ್ ಆಧಾರಿತ ಮಾರುಕಟ್ಟೆಯನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಆ ವ್ಯವಸ್ಥೆಯಡಿ ತೊಗರಿ ಮತ್ತು ಕೆಂಪು ಬಾಳೆಗೆ ಯಾವ ದೇಶದಲ್ಲಿ ಬೇಡಿಕೆ ಇದೆಯೋ ಆ ದೇಶಕ್ಕೆ ಕಳುಹಿಸಿಕೊಡಲಾಗುವುದು. ಇದಕ್ಕಾಗಿ ವಿದೇಶ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ)ದ ಸಹಕಾರವನ್ನೂ ಪಡೆಯಲಾಗುವುದು’ ಎಂದರು.

‘ದಶಕಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆರಂಭಿಸಿದ್ದ ಕೈಗಾರಿಕೆಗಳು ಆಡಳಿತ ಮಂಡಳಿಯ ದುರಾಡಳಿತದಿಂದಾಗಿ ನಷ್ಟಕ್ಕೀಡಾಗಿ ಬಿಳಿಯಾನೆಯಂತಾಗಿವೆ. ಹಾಕಿದ್ದ ಹಣವೂ ನಷ್ಟವಾಗಿದೆ. ಹೀಗಾಗಿ, ಕೃಷಿಯತ್ತ ಎಲ್ಲರೂ ಗಮನ ಹರಿಸುತ್ತಿದ್ದಾರೆ. ಒಂದೇ ಬೆಳೆಯನ್ನು ತೆಗೆಯುವ ಬದಲು ಒಂದು ಜಮೀನಿನಲ್ಲಿ ಮಿಶ್ರ ಬೇಸಾಯವನ್ನು ಮಾಡಿದರೆ, ಜೊತೆಗೆ ಕುಕ್ಕುಟೋದ್ಯಮ, ಮೀನು ಸಾಕಣೆ ಇಂತಹ ಉಪ ಕಸುಬುಗಳನ್ನು ಮಾಡಿದರೆ ರೈತರು ಆರ್ಥಿಕವಾಗಿ ನಷ್ಟಕ್ಕೀಡಾಗುವ ಸಂಭವ ಇರುವುದಿಲ್ಲ. ಕೃಷಿ ಜೊತೆಗೆ ಕುರಿ ಸಾಕಣೆ, ಕೋಳಿ ಸಾಕಣೆ ಮಾಡುತ್ತಿರುವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ’ ಎಂದು ಹೇಳಿದರು.

‘ರೈತರು ಬೇಸಾಯ ಮಾಡುವುದರ ಜೊತೆಗೆ ಅದನ್ನು ಮಾರುಕಟ್ಟೆ ಮಾಡುವ ಕೌಶಲವನ್ನೂ ಅಳವಡಿಸಿಕೊಳ್ಳಬೇಕು. ಕೋಲಾರ ಭಾಗದಲ್ಲಿ ಟೊಮೆಟೊ ಬೆಳೆದವರು ಬೆಲೆ ಕಡಿಮೆಯಾಗಿದೆ ಎಂದು ರಸ್ತೆಯಲ್ಲಿ ಟೊಮೆಟೊ ಸುರಿಯುವುದನ್ನು ನೋಡುತ್ತೇವೆ. ಆದರೆ, ಅದೇ ಟೊಮೆಟೊವನ್ನು ಉದ್ಯಮಿ ಖರೀದಿಸಿ ಕಾರ್ಖಾನೆಯಲ್ಲಿ ಕೆಚಪ್ ತಯಾರಿಸಿ ಲಕ್ಷಾಂತರ ರೂಪಾಯಿ ಆದಾಯ ಮಾಡಿಕೊಳ್ಳುತ್ತಾರೆ. ಅದನ್ನು ರೈತರು ಮಾಡಿದರೆ ಆದಾಯ ಹೆಚ್ಚುತ್ತದೆ. ಇದಕ್ಕಾಗಿಯೇ ಕೃಷಿ ಉತ್ಪಾದಕರ ಸಹಕಾರ ಸಂಘಗಳನ್ನು ರಚಿಸಿಕೊಂಡರೆ 25 ಯೋಜನೆಗಳಿಗೆ ಕೇಂದ್ರ ಆರ್ಥಿಕ ನೆರವು ಹಾಗೂ ಸಾಲಸೌಲಭ್ಯ ನೀಡಲಿದೆ’ ಎಂದು ಶೋಭಾ ವಿವರಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿಯಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಆದರೆ, ಅದಕ್ಕೆ ಬೇಕಾದ ತಾಂತ್ರಿಕ ಕೌಶಲದ ಕೊರತೆ ಬಾಧಿಸುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘವು ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಕೃಷಿ ತಜ್ಞರನ್ನು ಕರೆಸಿ ಉಪನ್ಯಾಸ ಏರ್ಪಡಿಸುವ ಜೊತೆಗೆ ಪ್ರಾತ್ಯಕ್ಷಿಕೆಯನ್ನೂ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಯುವಕರು ಕೃಷಿಯನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ’ ಎಂದರು.

‘ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣದ ಜತೆಗೆ ಈ ಭಾಗದಲ್ಲಿ ಕೃಷಿ ಸ್ವಾವಲಂಬನೆ ಸೇರಿ ಇತರ ಕಾರ್ಯಗಳಲ್ಲಿ ಹೊಸ ಇತಿಹಾಸ ರಚಿಸುವ ಕನಸು ಇದೆ. ಹೀಗಾಗಿ ಒಂದೊಂದಾಗಿ ಹೆಜ್ಜೆ ಇಡಲಾಗುತ್ತಿದೆ’ ತಿಳಿಸಿದರು.

ಈಗ ಯುವಕರ ನಡೆ ಕೃಷಿಯ ಕಡೆ ಮೂಲಕ ಕೃಷಿ ಬಲವರ್ದನೆಗೊಳಿಸಲು ಮುಂದಾಗಿದೆ ಎಂದು ಸೇಡಂ ವಿವರಿಸಿದರು.

ತೆಲಂಗಾಣದ ಹೈದರಾಬಾದ್‌ನಲ್ಲಿರುವ ಕೃಷಿ ಮತ್ತು ವಿಸ್ತರಣಾ ನಿರ್ವಹಣಾ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಚಂದ್ರಶೇಖರ್ ಮಾತನಾಡಿ, ‘ಸಂಸ್ಥೆಯ ವತಿಯಿಂದ 75 ಸಾವಿರ ಯುವಕರಿಗೆ ತರಬೇತಿ ನೀಡಲಾಗಿದ್ದು, ಅವರೇ ಸ್ಟಾರ್ಟಪ್‌ಗಳನ್ನು ಆರಂಭಿಸಿ ಹಲವರಿಗೆ ಉದ್ಯೋಗ ನೀಡಿದ್ದಾರೆ. ₹ 20 ಲಕ್ಷ ಸಾಲಸೌಲಭ್ಯವನ್ನೂ ನೀಡಲಾಗುತ್ತಿದೆ. ಕೃಷಿ ಲಾಭಯದಾಯಕವಲ್ಲ ಎಂದು ಹೇಳುವ ಬದಲು ಅದನ್ನು ಹೇಗೆ ಲಾಭದಾಯವಕವನ್ನಾಗಿ ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆಸಬೇಕು. ಆಹಾರ ಸಂಸ್ಕರಣೆ, ಕೆಟರಿಂಗ್, ಎರೆಹುಳು ಗೊಬ್ಬರದ ಪ್ಯಾಕಿಂಗ್ ಮತ್ತಿತರ ಕೆಲಸವನ್ನು ಮಾಡುವ ಮೂಲಕ ಉದ್ಯೋಗದ ಹಾದಿ ಕಂಡುಕೊಂಡಿದ್ದಾರೆ’ ಎಂದು ಹೇಳಿದರು.

ಕೃಷಿ ವಿಜ್ಞಾನಿಗಳಾದ ಡಾ.ಗುಮ್ಮಗೋಳಮಠ, ಡಾ.ಗೋಪಾಲ ಸುತಾರಿಯಾ, ಬಸವರಾಜ ಗಿರೆನ್ನವರ, ಮಂಜುನಾಥ ಅವರು ವಿವಿಧ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್‌.ಎ. ಪಾಟೀಲ ನಿರ್ವಹಣೆ ಮಾಡಿದರು.

ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗಳ್ಳಿ ಅವರು ಪಂಡಿತ ದೀನದಯಾಳ ಉಪಾಧ್ಯಾಯ ಕೃಷಿ ವಿಜ್ಞಾನ ಪ್ರೋತ್ಸಾಹನ ಪುರಸ್ಕಾರ ಪಡೆದಿದ್ದಕ್ಕೆ ಹಾಗೂ ಜಗಜೀವನರಾಂ ಅಭಿನವ ಕಿಸಾನ್ ಪುರಸ್ಕಾರ ಪಡೆದ ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ಅವರನ್ನು ಸಚಿವೆ ಶೋಭಾ ಕರಂದ್ಲಾಜೆ ಸನ್ಮಾನಿಸಿದರು.

‘ರಾಜಕೀಯ ಗುರು ಬಸವರಾಜ ಪಾಟೀಲ’

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರ ಬಗ್ಗೆ ಸಭೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದರು.

‘ರಾಜ್ಯದ ಮೂಲೆಯಲ್ಲಿರುವ ಊರಿನಿಂದ ಬಂದರೂ ಬಸವರಾಜ ಪಾಟೀಲ ಅವರು ನನಗೆ ಊಟ ಹಾಕಿ ಪಕ್ಷದಲ್ಲಿ ಬೆಳೆಯಲು ಮಾರ್ಗದರ್ಶನ ಮಾಡಿದರು. ಇಂದು ಕೇಂದ್ರ ಸಚಿವೆಯಾಗಿದ್ದೇನೆ ಎಂದರೆ ಅದಕ್ಕೆ ನಿಸ್ಸಂದೇಹವಾಗಿ ಅವರೇ ಕಾರಣ. ಸರ್ಕಾರದ ಭಾಗವಾಗಲು ಅವರನ್ನು ಹಲವು ಬಾರಿ ಕೇಳಿಕೊಂಡಾಗಲೂ ಒಪ್ಪಿರಲಿಲ್ಲ. ಆದರೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದ ಸಂಘ ರಚನೆಯ ಪ್ರಸ್ತಾಪ ಮಾಡಿದಾಗ ಅದನ್ನು ಮುನ್ನಡೆಸಲು ಒಪ್ಪಿಕೊಂಡರು’ ಎಂದರು.

‘ಬೀಜ, ಗೊಬ್ಬರ ಪೂರೈಕೆ ಮಾಡಿ’

ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿರುವ ವೇಳೆಯೇ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ರೈತರೊಬ್ಬರು ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಉದ್ದೇಶಿಸಿ ಮೊದಲು ಸಕಾಲಕ್ಕೆ ಬೀಜ, ಗೊಬ್ಬರ ಪೂರೈಕೆ ಮಾಡಿ ಎಂದು ಒತ್ತಾಯಿಸಿದರು. ಇದನ್ನು ಅನುಸರಿಸಿ ಮತ್ತೊಬ್ಬ ರೈತ ಎದ್ದು ನಿಂತು ಇದೇ ಬೇಡಿಕೆಯನ್ನು ಮಂಡಿಸಿದರು.

ಸಂವಾದದ ಸಂದರ್ಭದಲ್ಲಿ ಪ್ರಶ್ನೆ ಕೇಳಲು ಅವಕಾಶವಿದೆ ಎಂದು ಬಸವರಾಜ ‍ಪಾಟೀಲ ಸೇಡಂ ಅವರು ಹೇಳಿದರೂ ಇಬ್ಬರೂ ರೈತರು ಸಚಿವರು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ, ರೈತರಿಗೆ ಪ್ರತಿಕ್ರಿಯೆ ನೀಡಿದ ಸಚಿವೆ ಶೋಭಾ, ‘ಶುಕ್ರವಾರ ಬೀದರ್‌ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೀಜ, ಗೊಬ್ಬರ ಸಮಸ್ಯೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಬುರ್ಗಿಯಲ್ಲಿಯೂ ಸಭೆ ನಡೆಸಬೇಕಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಭೆ ಆಗಲಿಲ್ಲ. ಈ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ಜಿಲ್ಲೆಯ ಕೃಷಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT