ಗುರುವಾರ , ಮೇ 6, 2021
25 °C
ಕಲಬುರ್ಗಿ ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ 8,456 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ಕಲಬುರ್ಗಿ | ಸಿಇಟಿ: ಮೊದಲ ದಿನ ಸುಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಗುರುವಾರ 8,456 ವಿದ್ಯಾರ್ಥಿಗಳು ಸಿಇಟಿಗೆ ಹಾಜರಾದರು. 40 ಮಂದಿ ಮಾತ್ರ ಗೈರಾದರು. ಬೆಳಿಗ್ಗೆ ನಡೆದ ಜೀವವಿಜ್ಞಾನ ಹಾಗೂ ಮಧ್ಯಾಹ್ನದ ಗಣಿತ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.‌

ಪರೀಕ್ಷಾ ಕೇಂದ್ರಗಳಿಗೆ ಕೆಲವರು ಮಾತ್ರ ಒಂದು ತಾಸು ಮುಂಚೆಯೇ ಬಂದರು. ಬಹುಪಾಲು ಮಂದಿ ಸರಿಯಾದ ಸಮಯಕ್ಕೆ (ಬೆಳಿಗ್ಗೆ 10.20) ಹಾಜರಾದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕಂಡುಬಂದ ಆತಂಕ ಈ ಬಾರಿ ಯಾರಲ್ಲೂ ಕಾಣಿಸಲಿಲ್ಲ. ಕೋವಿಡ್‌ ಉಪಟಳದ ಕಾರಣ ಈ ಹಿಂದಿನ ಪರೀಕ್ಷೆಗಳಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ, ಈ ಬಾರಿ ಪರೀಕ್ಷಾರ್ಥಿಗಳು ನಿರಾಳವಾಗಿ ಬಂದರು.

ಹಲವರನ್ನು ಪಾಲಕರೇ ತಮ್ಮ ಸ್ವಂತ ವಾಹನಗಳಲ್ಲಿ ಕರೆತಂದು ಕೇಂದ್ರಕ್ಕೆ ಬಿಟ್ಟರು. ಮತ್ತೆ ಕೆಲವರು ಸ್ಕೂಟರ್‌ ಹಾಗೂ ಆಟೊಗಳಲ್ಲಿ ಬಂದರು.

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿ, ಎಲ್ಲರಿಗೂ ಹ್ಯಾಂಡ್‌ ಸ್ಯಾನಿಟೈಸರ್‌ ನೀಡಲಾಯಿತು. ಥರ್ಮಲ್‌ ಗನ್‌ನಿಂದ ಪ್ರತಿಯೊಬ್ಬರ ಸ್ಕ್ರೀನಿಂಗ್‌ ನಡೆಸಿಯೇ ಒಳಗೆ ಬಿಡಲಾಯಿತು.‌

ಎಲ್ಲ ಕೇಂದ್ರಗಳಲ್ಲೂ ಸುಸೂತ್ರ: ನಗರದಲ್ಲಿ 23 ಮತ್ತು ಆಳಂದ ಮತ್ತು ಚಿತ್ತಾಪುರದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಎಲ್ಲ ಕೇಂದ್ರಗಳಲ್ಲೂ ಮೊದಲ ದಿನದ ಎರಡೂ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ ತಿಳಿಸಿದ್ದಾರೆ.

ಪರೀಕ್ಷಾ ಕೋಣೆ, ಶೌಚಾಲಯ, ಡೆಸ್ಕ್‌ಗಳ ಸ್ಯಾನಿಟೈಸ್ ಮಾಡಲಾಗಿತ್ತು.‌ ಬೆಳಿಗ್ಗೆ ಜೀವವಿಜ್ಞಾನ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ್ನ ಗಣಿತ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತೆ ಸ್ಯಾನಿಟೈಸ್‌ ಮಾಡಿ ಒಳಗೆ ಬಿಡಲಾಯಿತು.

ಕಟ್ಟುನಿಟ್ಟಿನಿಂದ ಆದೇಶ ಪಾಲನೆ: ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕಟ್ಟುನಿಟ್ಟಾಗಿ ಆದೇಶ ಪಾಲಿಸಲಾಯಿತು. ಪ್ರತಿ ಕೇಂದ್ರಕ್ಕೆ ಒಬ್ಬ ಮುಖ್ಯಸ್ಥ, ಇಬ್ಬರು ಸಿಟಿಂಗ್‌ ಸ್ಕ್ಯಾಡ್‌, ಜಿಲ್ಲಾಡಳಿತದಿಂದ ನೇಮಕಗೊಂಡ ಒಬ್ಬ ‍ಪರಿವೀಕ್ಷಕ ಕೂಡ ಕಾರ್ಯನಿರ್ಯಹಿಸಿದರು. ಜತೆಗೆ, ಪ್ರತಿ ನಾಲ್ಕು ಕೇಂದ್ರಗಳಿಗೆ ಒಬ್ಬ ಕ್ಷೇತ್ರಶಿಕ್ಷಣಾಧಿಕಾರಿಯನ್ನು ಪರಿವೀಕ್ಷಣೆಗೆ ನೇಮಿಸಲಾಗಿತ್ತು.

ಎಂಆರ್‌ಎಂಸಿಯಿಂದ ಸ್ಯಾನಿಟೈಸರ್‌: ಸಿಇಟಿಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೂ ಕಲಬುರ್ಗಿಯ ಮಹಾದೇವಪ್ಪ ರಾಮಪೂರೆ ಮೆಡಿಕಲ್‌ ಕಾಲೇಜಿನಿಂದ ತಲಾ ಒಂದೊಂದು ಸ್ಯಾನಿಟೈಸರ್‌ ದೇಣಿಗೆ ನೀಡಲಾಯಿತು.

ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಅಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಇವುಗಳನ್ನು ಹಸ್ತಾಂತರ ಮಾಡಿದರು.

ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ನಮಗೆ ಸ್ವಲ್ಪ ಧೈರ್ಯ ಬಂತು. ಹೀಗಾಗಿ, ಯಾವುದೇ ಹಿಂಜರಿಕೆ– ಅಳಕು ಇಲ್ಲದೇ ಸಿಇಟಿ ಬರೆದಿದ್ದೇನೆ. ಇಂದಿನ ಪರೀಕ್ಷೆ ಖುಷಿ ತಂದಿದೆ.

–ಸೌಂದರ್ಯ ಎಸ್‌. ಬಿರಾದಾರ, ಕಲಬುರ್ಗಿ

ಈ ಹಿಂದಿನ ಪರೀಕ್ಷೆಗಳಲ್ಲಿ ಹೆಚ್ಚೇನೂ ವಿದ್ಯಾರ್ಥಿಗಳಿಗೆ ಕೋವಿಡ್‌ ಅಂಟಿಕೊಳ್ಳದಂತೆ ನೋಡಿಕೊಂಡಿದ್ದರಿಂದ ನಮಗೆ ಭಯ ಇರಲಿಲ್ಲ. ಕೇಂದ್ರಗಳ ಸ್ಯಾನಿಟೈಸೇಷನ್‌ ಬಗ್ಗೆ, ಸುರಕ್ಷತಾ ವ್ಯವಸ್ಥೆ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದಿದ್ದೆ. ನಿರಾತಂಕವಾಗಿ ಬರೆದೆ.

–ಆರತಿ ಪುಕಾಳೆ, ಕಲಬುರ್ಗಿ

ಜೀವಿವಿಜ್ಞಾನ ನನಗೆ ಹೆಚ್ಚು ಆಪ್ತವಾದ ವಿಷಯ. ಮುಂದೆ ಅಗ್ರಿಕಲ್ಚರಲ್‌ ಸೈನ್ಸ್‌ ಓದಬೇಕು ಎಂಬ ಆಸೆ ಇದೆ. ಅದಕ್ಕೆ ತಕ್ಕ ತಯಾರಿ ಮಾಡಿಕೊಂಡಿದ್ದೇನೆ. ಇದು ಸಾಮಾನ್ಯ ಪ್ರವೇಶ ಪರೀಕ್ಷೆ ಎನ್ನುವುದಕ್ಕಿಂತ ನನ್ನ ಅದೃಷ್ಟ ಪ್ರವೇಶ ಪರೀಕ್ಷೆ ಎನ್ನಬೇಕು.

–ರಕ್ಷಿತಾ ಪಾಟೀಲ, ಕಲಬುರ್ಗಿ

ಲಾಕ್‌ಡೌನ್‌ ಇಲ್ಲದ ಕಾರಣ ಪರೀಕ್ಷೆಗೆ ಬರಲು ಅನುಕೂಲ ಆಯಿತು. ಕೊಠಡಿ ಒಳಗೆ ನಾವು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದಾರೆ. ಆದರೆ, ಹೊರಗಡೆ ಎಲ್ಲರೂ ಗುಂಪುಗೂಡುತ್ತಾರೆ. ಕೇಂದ್ರದ ಹೊರಗೂ ಅಂತರ ಇರುವಂತೆ ನೋಡಿಕೊಳ್ಳಬೇಕು.

–ಕಾವೇರಿ ಬಿ.ಬಿ., ಕಲಬುರ್ಗಿ

ಕೋವಿಡ್‌ನಿಂದಾಗಿ ಈಗ ಎಲ್ಲರೂ ತುಸು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ಇಂಥ ವಿಷಮ ಸಂದರ್ಭದಲ್ಲಿ ಸಿಇಟಿ ಪತ್ರಿಕೆ ತುಸು ಸುಲಭ ಇರಬಹುದು ಎಂದು ಅಂದಾಜಿಸಿದ್ದೆ. ಆದರೆ, ಅದು ಸುಳ್ಳಾಯಿತು. ನನ್ನ ಸೀನಿಯರ್‌ ವಿದ್ಯಾರ್ಥಿಗಳು ಹೇಳುವಂತೆ; ಈ ಬಾರಿ ಹಿಂದಿಗಿಂತಲೂ ಕಠಿಣವಾಗಿತ್ತು.

–ಮುನಾವರ್‌ ನದಾಫ, ಅಫಜಲಪುರ

ಕೋವಿಡ್‌ ಇರಲಿ– ಬಿಡಲಿ ನಾನೇನೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಪಿಯು ವಾರ್ಷಿಕ ಪರೀಕ್ಷೆಯಲ್ಲೂ ಹೀಗೇ ನಿರಾಳವಾಗಿದ್ದೆ, ಈಗಲೂ ಅಷ್ಟೇ ನಿರಾಳವಾಗಿ ಬರೆದಿದ್ದೇನೆ. ಪರೀಕ್ಷೆ ಮುಗಿದಾಗಿನಿಂದ ಟಿ.ವಿ ನೋಡುವುದೇ ಬಿಟ್ಟಿದ್ದೇನೆ. ಕೇವಲ ಸಿಇಟಿ ತಯಾರಿ ಮಾಡಿಕೊಂಡಿದ್ದೇನೆ.

–ರಾಜಶೇಖರ ಪಾಟೀಲ, ಕಲಬುರ್ಗಿ

ಆಂಬುಲೆನ್ಸ್‌ನಲ್ಲಿ ಬಂದು ಸಿಇಟಿ ಬರೆದ ಇಬ್ಬರು ಸೋಂಕಿತರು

ಕಲಬುರ್ಗಿ: ಕೋವಿಡ್‌–19 ಸೋಂಕಿತರಾದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿ ಕೂಡ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಬರೆಯುವ ಮೂಲಕ ಮಾದರಿಯಾದರು.

ಸೋಂಕಿತ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಿಶೇಷ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ಎಲ್ಲ ಕೇಂದ್ರಗಳಂತೆ ಸಿ.ಸಿ.ಟಿ.ವಿ ಕ್ಯಾಮೆರಾ, ಸಿಟಿಂಗ್‌ ಸ್ಕ್ವಾಡ್‌, ಪರಿವೀಕ್ಷಕರನ್ನೂ ಇಲ್ಲಿಗೆ ನೇಮಿಸಲಾಯಿತು.

ಈ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್‌ ಕೇಂದ್ರಗಳಿಂದ ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. ಒಬ್ಬರು ಎಂಬಿಬಿಎಸ್‌ ವೈದ್ಯ ಹಾಗೂ ಒಬ್ಬ ಸ್ಟಾಫ್‌ ನರ್ಸ್‌ಗಳನ್ನು ಇವರ ಆರೋಗ್ಯ ವಿಚಾರಣೆಗೆ ನಿಯೋಜನೆ ಮಾಡಲಾಗಿತ್ತು.

ಪಿಪಿಇ ಕಿಟ್‌ ಧರಿಸಿಯೇ ಅವರಿಗೆ ಪ್ರಶ್ನೋತ್ತರ ಪತ್ರಿಕೆ ನೀಡಲಾಯಿತು. ಇಬ್ಬರ ಪತ್ರಿಕೆಗಳನ್ನೂ ಪ್ರತ್ಯೇಕವಾಗಿಯೇ ಪ್ಯಾಕ್‌ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು