ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಅಕ್ರಮಗಳ ಮೂಲ ಕೆಪಿಸಿಸಿ ಕಚೇರಿ: ಛಲವಾದಿ ನಾರಾಯಣಸ್ವಾಮಿ ಟೀಕೆ

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ
Last Updated 1 ಮೇ 2022, 8:50 IST
ಅಕ್ಷರ ಗಾತ್ರ

ಕಲಬುರಗಿ: ’ರಾಜ್ಯದಲ್ಲಿ ನಡೆದ ಎಲ್ಲ ಅಕ್ರಮ ನೇಮಕಾತಿಗಳ ಮೂಲ ಕೆಪಿಸಿಸಿ ಕಚೇರಿಯೇ ಆಗಿದೆ. ಪಿಎಸ್ಐ ಅಕ್ರಮದಲ್ಲಿ ಬಂಧಿತರು ಕಾಂಗ್ರೆಸ್‌ ಪಕ್ಷದ ಮುಖಂಡರು ಎಂದ ಕೂಡಲೇ ಅಲ್ಲಿಯವರೆಗೆ ಮುಚ್ಚಿಟ್ಟಿಕೊಂಡಿದ್ದ ಆಡಿಯೊವನ್ನು ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು’ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ದಶಕದಿಂದ ನಡೆಯುತ್ತಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಂಗ್ರೆಸ್‌ ಮುಖಂಡರು ಅಕ್ರಮ ಎಸಗಿದ್ದಾರೆ ಎಂಬುದು ಇದೀಗ ಗೊತ್ತಾಗುತ್ತಿದೆ. ಒಂದೊಂದಾಗಿ ವಿವರಗಳು ಬರುತ್ತಿರುವುದರಿಂದ ಕಾಂಗ್ರೆಸ್‌ ನಾಯಕರು ಈಗ ರಾಗ ಬದಲಿಸಿದ್ದಾರೆ’ ಎಂದರು.

‘ಸಿಐಡಿಯವರು ಪ್ರಿಯಾಂಕ್ ಖರ್ಗೆ ಅವರಿಗೆ ನಿಯಮಾನುಸಾರ ನೋಟಿಸ್ ನೀಡಿದ್ದಾರೆ. ಇದಕ್ಕೂ ಮುನ್ನ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದ ಸಚಿವ ಪ್ರಭು ಚವ್ಹಾಣ್, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ಬಳಿ ದಾಖಲೆಗಳಿದ್ದರೆ ಅದನ್ನು ಪಡೆಯಲು ಸಿಐಡಿ ಅವರು ನೋಟಿಸ್ ನೀಡಬಹುದು. ಆದರೆ, ಗೃಹಸಚಿವರೇ ಆರೋಪಿಯ ಮನೆಗೆ ಭೇಟಿ ನೀಡಿದ್ದನ್ನೇ ಕಾಂಗ್ರೆಸ್‌ನವರು ದೊಡ್ಡ ವಿಷಯ ಮಾಡುತ್ತಿರುವುದು ಸರಿಯಲ್ಲ. ನಾಯಕರಾದವರು ಪಕ್ಷದ ಕಾರ್ಯಕರ್ತರ ಮನೆಗೆ ಭೇಟಿ ಮಾಡುವುದು ಸಾಮಾನ್ಯ. ಹಾಗೆಂದು ಅವರನ್ನೇ ಆರೋಪಿ ಎಂಬಂತೆ ಬಿಂಬಿಸುತ್ತಿರುವುದನ್ನು ಒಪ್ಪಲಾಗದು’ ಎಂದು ಹೇಳಿದರು.

‘ದೇಶದಾದ್ಯಂತ ದಲಿತ ಸಮುದಾಯ ಬಿಜೆಪಿಯತ್ತ ಆಕರ್ಷಿತವಾಗುತ್ತಿದೆ. ರಾಜ್ಯದ 36 ಪರಿಶಿಷ್ಟ ಸಮುದಾಯಕ್ಕೆ ಮೀಸಲಾದ ವಿಧಾನಸಭಾ ಕ್ಷೇತ್ರಗಳಲ್ಲಿ 19 ಸ್ಥಾನಗಳು ಬಿಜೆಪಿಗೆ ಒಲಿದಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದ 77 ಸ್ಥಾನಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ 34 ಶಾಸಕರು ಆಯ್ಕೆಯಾಗಿದ್ದಾರೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರಿಶಿಷ್ಟ ಸಮುದಾಯದ ಕಾಳಜಿಗೆ ಪ್ರತಿಯಾಗಿ ಜನರು ನೀಡಿದ ಉಡುಗೊರೆಯಾಗಿದೆ’ ಎಂದರು.

‘ಡಾ.ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿದ ರಾಜ್ಯದ ವಿವಿಧ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಅವರು ವಿಶೇಷ ಆಸಕ್ತಿ ವಹಿಸಿದ್ದು, ಇದಕ್ಕಾಗಿ ₹ 25 ಕೋಟಿ ನೀಡಿದ್ದಾರೆ. ವಿಜಯಪುರ ಹಾಗೂ ಕಲಬುರಗಿಯ ವಾಡಿಯಲ್ಲೂ ಅವರ ಭೇಟಿಯ ನೆನಪಿಗಾಗಿ ಸ್ಮಾರಕಗಳು ಬರಲಿವೆ ಎಂದು ನಾರಾಯಣಸ್ವಾಮಿ ತಿಳಿಸಿದರು.

‘ಸಮಾಜ ಕಲ್ಯಾಣ ಇಲಾಖೆಗೆ ನೀಡಲಾದ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಿದ ರಾಜ್ಯ ಸರ್ಕಾರದ ಕ್ರಮ ಸಮರ್ಥನೀಯವಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುತ್ತೇನೆ. ಆದಾಗ್ಯೂ, ಇಂತಹ ರೂಢಿಯನ್ನು ಹಾಕಿದ್ದು ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಮೆಟ್ರೊ, ಲೋಕೋಪಯೋಗಿ ಇಲಾಖೆಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಹಣವನ್ನೇ ಕೊಟ್ಟಿದ್ದರು. ಆದರೂ, ಈ ಲೋಪವನ್ನು ಸರಿಪಡಿಸುವ ಕಾರ್ಯ ಮಾಡುತ್ತೇವೆ’ ಎಂದರು.

ಶಾಸಕ ಬಸವರಾಜ ಮತ್ತಿಮೂಡ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ರವಿಚಂದ್ರ, ಪರಶುರಾಮ ಕುರಗುಂದಿ, ಅಂಬಾರಾಯ ಚಳಗೇರಿ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT