ಭಾನುವಾರ, ನವೆಂಬರ್ 29, 2020
22 °C
ವಿವಿಧೆಡೆ ಮಕ್ಕಳ ದಿನ ಸರಳ ಆಚರಣೆ, ಜವಾಹರಲಾಲ್‌ ನೆಹರೂ ಸಾಧನೆಗಳ ಸ್ಮರಣೆ

‘ಮಕ್ಕಳನ್ನು ನಿರ್ಲಕ್ಷಿಸಿದರೆ ದೇಶವೇ ಕುಂಠಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮಕ್ಕಳು ದೇವರಿದ್ದಂತೆ. ಜಗತ್ತಿನಲ್ಲಿ ಎಲ್ಲರೂ ಮಕ್ಕಳನ್ನು ಪ್ರೀತಿಸುತ್ತಾರೆ. ಮಕ್ಕಳಲ್ಲಿ ಯಾವುದೇ ಜಾತಿ, ಧರ್ಮ, ವರ್ಗ, ವರ್ಣ, ಪಂಗಡ ಎಂಬುದಿಲ್ಲ. ಅವರಲ್ಲಿ ಶ್ರೇಷ್ಠ  ಗುಣಗಳಿರುತ್ತವೆ. ಮುಗ್ದ ನಗು, ನಿಷ್ಕಲ್ಮಶ ಪ್ರೀತಿಯನ್ನು ನಾವು ಪೋಷಿಸಬೇಕು’ ಎಂದು ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪನ ಪ್ರೊ.ಚನ್ನಾರಡ್ಡಿ ಪಾಟೀಲ ಹೇಳಿದರು.

ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಚಿಣ್ಣರ ಲೋಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ ಜವಾಹರ್‍ಲಾಲ್ ನೆಹರೂ ಅವರ ಜನ್ಮದಿನ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಮತ್ತು ಪ್ರಥಮ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.‌

‘ದೇಶದ ಭವಿಷ್ಯವಾದ ಮಕ್ಕಳ ಅಭಿವೃದ್ಧಿಗಾಗಿ ಅವರ ಪ್ರಗತಿಗಾಗಿ ಶಿಕ್ಷಕರು ಸದಾ ಶ್ರಮಿಸಬೇಕು. ಪ್ರತಿಯೊಂದು ಮಗುವಿನಲ್ಲಿ ವಿಶೇಷ ಗುಣವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದರು.

‘ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ ಅವರು ಹೇಳಿದ ಹಾಗೆ ‘ಮಕ್ಕಳು ದೇಶದ ಸಂಪತ್ತು, ಅವರನ್ನು ಕಡೆಗಣಿಸಿದರೆ ಈ ದೇಶದ ಭದ್ರ ಬುನಾದಿಯನ್ನೇ ಕಡೆಗಣಿಸಿದಂತೆ’ ಎನ್ನುವುದು ಅಕ್ಷರಶಃ ಸತ್ಯ. ಹಾಗಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಕರು, ಪಾಲಕರು ಲಕ್ಷ ವಹಿಸಬೇಕು’ ಎಂದರು.

ಎಂ.ಸಿ. ಕಿರೇದಳ್ಳಿ ಸ್ವಾಗತಿಸಿದರು. ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜು ಪ್ರಾಚಾರ್ಯರಾದ ವಿನುತಾ ಆರ್.ಬಿ., ಸರ್ವಜ್ಞ ಶಾಲೆ ಪ್ರಾಚಾರ್ಯರಾದ ರಾಮಚಂದ್ರ ಶಿಂಧೆ, ಪ್ರಭುಗೌಡ, ಕರುಣೇಶ ಹಿರೇಮಠ, ಪ್ರಶಾಂತ ಕುಲಕರ್ಣಿ, ಪ್ರಥ್ವಿರಾಜಗೌಡ, ಗುರುರಾಜ ಕುಲಕರ್ಣಿ, ಬೋಧಕ– ಬೋಧಕೇತರ ಸಿಬ್ಬಂದಿ ಇದ್ದರು.

ಲಕ್ಷ್ಮೀ, ಶೈಲಜಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ.ವಿದ್ಯಾವತಿ ಪಾಟೀಲ ನಿರೂಪಿಸಿದರು. ತ್ರಿವೇಣಿ ವಂದಿಸಿದರು. ನಂತರ ಶಿಕ್ಷಕರು ಮಕ್ಕಳಿಗಾಗಿ ಕಿರುನಾಟಕ ಪ್ರದರ್ಶಿಸಿದರು.

‘ಮಕ್ಕಳೂ ಸ್ವಾಭಿಮಾನಿ ಆಗಲಿ’ 

ಕಲಬುರ್ಗಿ: ‘ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವಾಭಿಮಾನದ ವ್ಯಕ್ತಿ ಆಗಿದ್ದರು. ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆ ನಡೆಯುತ್ತಿದ್ದು, ಈ ದೇಶದ ಎಲ್ಲ ಮಕ್ಕಳೂ ಅವರಂತೆ ಸ್ವಾಭಿಮಾನಿಗಳಾಗಲಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹರಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ಹಮ್ಮಿಕೊಂಡಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಸಂಭ್ರಮ, ಚಾಚಾ ನೆಹರೂ ಪ್ರಶಸ್ತಿ ಪ್ರದಾನ, ಸನ್ಮಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ನೆಹರೂ ಯಾವಾಗಲೂ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಸೌಹಾರ್ದಭಾವ, ಧರ್ಮ ನಿರಪೇಕ್ಷತೆ, ಸಾಮಾಜಿಕ ಕಳಕಳಿ ಮುಂತಾದ ವಿಚಾರಗಳಿಗೆ ಹೆಚ್ಚು ಒತ್ತು ನೀಡಿದರು. ಇದರ ಪ್ರತಿಫಲನವನ್ನು ನಾವು ಅವರ ಆಡಳಿತ ಅವಧಿಯಲ್ಲಿ ತಂದಂಥ ಕ್ರಾಂತಿಕಾರಕ ಬೆಳವಣಿಗೆಗಳ ಮೂಲಕ ಕಾಣಬಹುದು’ ಎಂದರು.

‘ಜಾಗತಿಕವಾಗಿ ವಿಶ್ವಸಂಸ್ಥೆಯು ನ. 20ನ್ನು ಮಕ್ಕಳ ದಿನಾಚರಣೆಯನ್ನಾಗಿ 1954ರಿಂದ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ, 1964ರಲ್ಲಿ ನೆಹರೂ ನಿಧನದ ನಂತರ ಅವರ ಜನ್ಮ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನಾಗಿ ಮಾಡಲಾಗುತ್ತಿದೆ. ಆದರೆ, ಇದರ ಹಿಂದೆ ಮುಖ್ಯವಾಗಿ ವಿ.ಎನ್. ಕುಲಕರ್ಣಿ ಅವರ ಶ್ರಮ ಮಹತ್ತರವಾದದ್ದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ‘ಮಕ್ಕಳನ್ನು ತುಂಬಾ ಪ್ರೀತಿಸಿ, ಉತ್ತಮ ಶಿಕ್ಷಣ ಕೊಡಿ, ಅವರು ದೇಶದ ಭವಿಷ್ಯ ಮತ್ತು ನಾಳಿನ ಜವಾಬ್ದಾರಿಯುತ ಪ್ರಜೆಗಳು ಎಂದು ಹೇಳುತ್ತಿದ್ದರು ನೆಹರೂ. ಮಕ್ಕಳೇ ದೇಶದ ನಿಜವಾದ ಶಕ್ತಿ. ಹೆಣ್ಣು, ಗಂಡು ಎನ್ನುವ ಭೇದ ಭಾವ ಮಾಡದೇ ಸಮಾನ ಅವಕಾಶ ಕೊಡಬೇಕು’ ಎಂಬುದು ಅವರ ಪ್ರತಿಪಾದಿಸುತ್ತಿದ್ದರು.

ಐವರು ಕ್ರಿಯಾತ್ಮಕ ಮಕ್ಕಳಿಗೆ ಚಾಚಾ ನೆಹರೂ ಪ್ರಶಸ್ತಿ ನೀಡಲಾಯಿತು. ವೇದಿಕೆಯ ಮೇಲೆ ಮಾಜಿ ಮಹಾಪೌರ ಶರಣಕುಮಾರ ಮೋದಿ, ಸಹಾರಾ ಶಿಕ್ಷಣ ಸಂಸ್ತೆಯ ಅಧ್ಯಕ್ಷ ಎಂ.ಡಿ. ಸಿದ್ದಿಕಿ, ಸಾಹಿತಿ ಬಿ.ಎಚ್. ನಿರಗುಡಿ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಇದ್ದರು.

ವೇದಿಕೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಪ್ರಲ್ಹಾದ್ ಹಡಗಿಲಕರ್, ದೀಪಕ ಶಹಾಪುರಕರ್, ಪ್ರದೀಪ್ ಬಾಚನಳ್ಳಿ, ನಿಸಾರ್ ಅಹ್ಮದ್, ಸುನೀಲ್, ಚಂದ್ರಕಾಂತ, ಉಮಾಕಾಂತ್ ನಾಟೀಕಾರ ಇದ್ದರು.

ಮಕ್ಕಳ ಹಕ್ಕು ರಕ್ಷಿಸಿ:

ಕಲಬುರಗಿ: ‘ಮಕ್ಕಳು ಶಿಕ್ಷಣ ಪಡೆಯುವ, ಭಾವನೆ ವ್ಯಕ್ತಪಡಿಸುವ, ಮಾಹಿತಿ ಪಡೆಯುವ, ಪೌಷ್ಟಿಕ ಆಹಾರವನ್ನು ಪಡೆಯುವ, ಶೋಷಣೆ ವಿರೋಧಿಸುವ ಮುಂತಾದ ಹಕ್ಕುಗಳನ್ನು ಹೊಂದಿದ್ದಾರೆ. ಅವರ ಹಕ್ಕುಗಳನ್ನು ರಕ್ಷಿಸುವ ಮೂಲಕ ಭವಿಷ್ಯದ ನಾಯಕರನ್ನು ನಿರ್ಮಾಣ ಮಾಡಲು ಸಾಧ್ಯ’ ಎಂದು ಸಾಹಿತಿ ಎಚ್.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರತಿಭಾವಂತ ಮಕ್ಕಳಿಗೆ ಸತ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡದರು.‌

‘ನೆಹರೂ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು, ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಭಾರತ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ನೀತಿಗಳನ್ನು ರಚಿಸಿ ಆಧುನಿಕ ಭಾರತದ ನಿರ್ಮಾತೃ ಆಗಿದ್ದಾರೆ’ ಎಂದರು.

ಸಂಸ್ಥೆಯ ಅಧ್ಯಕ್ಷ ಸತೀಶ ಟಿ.ಸಣಮನಿ ಮಾತನಾಡಿದರು. ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ವಿಠಲ ಕುಂಬಾರ, ಎಸ್.ಎಸ್.ಪಾಟೀಲ ಬಡದಾಳ, ಅಮರ ಜಿ.ಬಂಗರಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು