ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಜಿಲ್ಲೆಯ ಮಕ್ಕಳಿಗಿಲ್ಲ ಬಾಲಭವನ

ಹೊಸ ಕಟ್ಟಡ ನಿರ್ಮಾಣಕ್ಕೆ ಬಾಲಭವನ ಸೊಸೈಟಿಗೆ ಪ್ರಸ್ತಾವ ಸಲ್ಲಿಸಿದ ಅಧಿಕಾರಿಗಳು
Published 17 ನವೆಂಬರ್ 2023, 5:04 IST
Last Updated 17 ನವೆಂಬರ್ 2023, 5:04 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಎಸ್‌.ಎಂ. ಪಂಡಿತ್ ರಂಗಮಂದಿರದ ಬಳಿಯ ಜಿಲ್ಲಾ ಬಾಲಭವನ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ ಕಾರಣ ಲೋಕೋಪಯೋಗಿ ಇಲಾಖೆಯು ಬಳಕೆಗೆ ಯೋಗ್ಯವಲ್ಲ ಎಂದು ಪ್ರಮಾಣಪತ್ರ ನೀಡಿದೆ.

ಅದನ್ನು ಬಂದ್ ಮಾಡಲಾಗಿದ್ದು, ಎಚ್ಚರಿಕೆ ಸಂದೇಶ ಇರುವ ಬ್ಯಾನರ್ ತೂಗು ಹಾಕಿಕೊಂಡು ನಿಂತಿದೆ.

ಈ ಕಟ್ಟಡವನ್ನು ಪಾಲಿಕೆಗೆ ಸೇರಿದ ಉದ್ಯಾನದ ಜಾಗದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ ಈ ಭವನದಲ್ಲಿ ವರ್ಷಪೂರ್ತಿ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿದ್ದವು. ಸರ್ಕಾರೇತರ ಸಂಸ್ಥೆಗಳು ಸಹ ಇಲ್ಲಿಯೇ ಕಾರ್ಯಕ್ರಮಗಳನ್ನು ನಡೆಸುತ್ತಿದ್ದವು. ಬೇಸಿಗೆಯಲ್ಲಿ ಶಿಬಿರಗಳು ಸಹ ನಡೆಯುತ್ತಿದ್ದವು.

ಈ ಕಟ್ಟಡ ಹಲವು ದಿನಗಳಿಂದ ಕಾಯಕಲ್ಪಕ್ಕಾಗಿ ಕಾಯುತ್ತಿತ್ತು. ಇದನ್ನು ಗೋದಾಮಿನ ಮಾದರಿಯಲ್ಲಿ ನಿರ್ಮಿಸಿದ ಕಾರಣ ಸರಿಯಾಗಿ ಗಾಳಿ ಹಾಗೂ ಬೆಳಕು ಬರುತ್ತಿರಲಿಲ್ಲ. ಗೋಡೆಗಳು ಬಣ್ಣ ಮಾಸಿ ನಿಂತಿದ್ದವು. ಹಳೆ ಮಾದರಿಯ ಕಿಟಕಿಗಳನ್ನು ಅಳವಡಿಸಲಾಗಿತ್ತು. ಕೆಲವು ಕಿಟಕಿಗಳ ಗಾಜುಗಳು ಒಡೆದು ಹೋಗಿದ್ದವು. ಮಕ್ಕಳ ಆಟಿಕೆಗಳು ಸಹ ಇರಲಿಲ್ಲ.

ಅಲ್ಲಲ್ಲಿ ಸಿಮೆಂಟ್ ಕಿತ್ತು ಬಂದಿತ್ತು. ಮಳೆಗಾಲದಲ್ಲಿ ಇದರ ಮೇಲ್ಚಾವಣಿ ತೊಟ್ಟಿಕ್ಕುತ್ತಿತ್ತು. ಕಟ್ಟಡದಲ್ಲಿ ಆಸನಗಳೂ ಇರಲಿಲ್ಲ. ಈ ಕಟ್ಟಡದ ಒಂದು ಬದಿಯಲ್ಲಿ ಅನೈರ್ಮಲ್ಯ ಉಂಟಾಗಿದೆ. ಗಿಡ–ಗಂಟಿ ಬೆಳೆದು ನಿಂತಿದೆ. ಇಲ್ಲಿಂದ ಕೂಗಳತೆ ದೂರದಲ್ಲಿಯೇ ಚರಂಡಿ ಹರಿಯುತ್ತದೆ. ಅದರ ದುರ್ವಾಸನೆ ಈ ಕಟ್ಟಡವನ್ನೂ ತಲುಪುತ್ತದೆ.

ಪ್ರತಿ ಮಳೆಗಾಲ, ಈ ಕಟ್ಟಡದ ಒಳಗೆ ಕೃತಕ ಕೆರೆಗಳನ್ನು ಸೃಷ್ಟಿಸುತ್ತದೆ. ಕೊಳಚೆ ನೀರು ಕಟ್ಟಡದೊಳಗೆ ನುಗ್ಗುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟಡವನ್ನು ಬಂದ್ ಮಾಡಲಾಗಿದೆ. ಈಗ ಜಿಲ್ಲೆಯಲ್ಲಿ ಮಕ್ಕಳಿಗೆ ಬಾಲಭವನ ಇಲ್ಲದಂತಾಗಿದೆ.

ಈ ಕಟ್ಟಡ ಬಂದ್ ಆದ ಕಾರಣ ಬಹುತೇಕರು ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಕಿರು ಮೃಗಾಲಯ, ಮಕ್ಕಳ ಉದ್ಯಾನ ಹಾಗೂ ಸಾರ್ವಜನಿಕ ಉದ್ಯಾನಕ್ಕೆ ತೆರಳುತ್ತಿದ್ದಾರೆ.

ಹಳೆ ಕಟ್ಟಡ ತಗ್ಗು ಪ್ರದೇಶದಲ್ಲಿರುವುದರಿಂದ ನೀರು ನುಗ್ಗುತ್ತದೆ. ಹೊಸ ಕಟ್ಟಡವನ್ನು ಬೇರೆ ಕಡೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

‘ಬಾಲಭವನ ಸೊಸೈಟಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸೊಸೈಟಿಯಿಂದ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಹೊಸ ಕಟ್ಟಡದಲ್ಲಿ ಆಟಿಕೆಗಳ ಅಳವಡಿಕೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಲಾಗುವುದು. ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರ ಜೊತೆ ಚರ್ಚೆ ನಡೆಸಲಾಗಿದೆ. ಸದ್ಯ ಇಲಾಖೆಗೆ ಸೇರಿದ ಶಾಲೆಗಳು ಹಾಗೂ ಜಾಗದಲ್ಲಿ ಮಕ್ಕಳ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನಕುಮಾರ್ ಯು. ತಿಳಿಸಿದರು.

ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಕಾರಣ ಅಪಾಯ ಸಂಭವಿಸಬಹುದು ಎನ್ನುವ ಕಾರಣಕ್ಕೆ ಬಂದ್ ಮಾಡಲಾಗಿದೆ. ಅನುದಾನ ದೊರಕಿದ ಬಳಿಕ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು

–ನವೀನಕುಮಾರ್ ಯು. ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಮಕ್ಕಳ ಗ್ರಂಥಾಲಯಕ್ಕೆ ಯೋಜನೆ ‌

ನಗರದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಗ್ರಂಥಾಲಯ ಇಲ್ಲ. ನಗರ ಕೇಂದ್ರ ಗ್ರಂಥಾಲಯದಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಅಷ್ಟೊಂದು ಸೌಕರ್ಯಗಳಿಲ್ಲದ ಕಾರಣ ಮಕ್ಕಳಿಗಾಗಿ ಪ್ರತ್ಯೇಕ ಗ್ರಂಥಾಲಯ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಯೋಜನೆ ರೂಪಿಸಿದ್ದಾರೆ. ಗ್ರಂಥಾಲಯ ನಿರ್ಮಾಣಕ್ಕಾಗಿ ಈಗಾಗಲೇ ಹಲವು ಕಡೆ ನಿವೇಶನ ನೋಡಿದ್ದೇವೆ. ಬಹುತೇಕ ನಿವೇಶನಗಳು ಬಡಾವಣೆಗಳ ಒಳಗಡೆ ಇರುವ ಕಾರಣ ಸರಿ ಹೋಗುವುದಿಲ್ಲ. ಉದ್ಯಾನದಂತಹ ಸ್ಥಳಗಳಲ್ಲಿ ಗ್ರಂಥಾಲಯ ನಿರ್ಮಿಸಲು ನಿರ್ಧರಿಸಲಾಗಿದ್ದು ನಿವೇಶನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ದೊರಕಿದ ಬಳಿಕ ಗ್ರಂಥಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT