ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ಅಪಾಯದಲ್ಲಿವೆ 563 ಶಾಲಾ ಕೊಠಡಿಗಳು

308 ಶಿಥಿಲ ಕೊಠಡಿಗಳು
Published : 14 ಆಗಸ್ಟ್ 2024, 6:00 IST
Last Updated : 14 ಆಗಸ್ಟ್ 2024, 6:00 IST
ಫಾಲೋ ಮಾಡಿ
Comments

ಚಿಂಚೋಳಿ: ತಾಲ್ಲೂಕಿನಲ್ಲಿ ವಿವಿಧೆಡೆ ಸರ್ಕಾರಿ ಶಾಲೆಗಳು ಸೋರುತ್ತಿದ್ದು ಅಪಾಯದ ಸ್ಥಿತಿಯಲ್ಲಿವೆ. ಕೆಲವು ಶಾಲೆಗಳ ಛತ್ತಿನ ಪ್ಲಾಸ್ಟರ್ ಕಿತ್ತು ಬೀಳುತ್ತಿದ್ದು ಮಕ್ಕಳು ಹೆದರಿಕೆಯಲ್ಲಿಯೇ ಪಾಠ ಪ್ರವಚನ ಆಲಿಸುವಂತಾಗಿದೆ.

ತಾಲ್ಲೂಕಿನಲ್ಲಿ 298 ಸರ್ಕಾರಿ ಶಾಲೆಗಳಿವೆ. ಇಲ್ಲಿ 28,340 ಮಕ್ಕಳ ದಾಖಲಾತಿಯಿದೆ. ಇವರಿಗೆ ಪಾಠ ಪ್ರವಚನ ನಡೆಸಲು ಒಟ್ಟು 2,073 ಶಾಲಾ ಕೊಠಡಿಗಳಿದ್ದು, ಈ ಪೈಕಿ 1,200 ಕೊಠಡಿಗಳು ಸುಸ್ಥಿತಿಯಲ್ಲಿವೆ. 308 ಶಿಥಿಲ ಕೊಠಡಿಗಳು ಸೇರಿ 563 ಕೊಠಡಿಗಳು ಅಪಾಯದಲ್ಲಿವೆ. 255 ಕೊಠಡಿಗಳಿಗೆ ಭಾರಿ ದುರಸ್ತಿಯ ಅಗತ್ಯವಿದ್ದು, ಇದಲ್ಲದೇ 310 ಕೊಠಡಿಗಳು ಚಿಕ್ಕಪುಟ್ಟ ದುರಸ್ತಿಗಾಗಿ ಕಾಯುತ್ತಿವೆ.

118 ಶಾಲೆಗಳಲ್ಲಿ ಅಕ್ಷರ ದಾಸೋಹದ ಮಧ್ಯಾಹ್ನದ ಬಿಸಿಯೂಟದ ಅಡುಗೆ ತಯಾರಿಗೆ ಪ್ರತ್ಯೇಕ ಕೊಠಡಿಯಿಲ್ಲ. 125 ಬಾಲಕಿಯರ ಮತ್ತು 126 ಬಾಲಕರ ಮತ್ತು 72 ಅಂಗವಿಕಲರಿಗೆ ಸೇರಿ ಒಟ್ಟು 323 ಶೌಚಾಲಯಗಳ ಬೇಡಿಕೆಯಿದೆ.

ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸೇರಿ 50 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್ ಸೌಲಭ್ಯವಿದೆ. ಬಹುತೇಕ ಪ್ರೌಢ ಶಾಲೆಗಳಲ್ಲಿ ಆಟದ ಮೈದಾನದ ಸಮಸ್ಯೆಯಿಲ್ಲ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ಕ್ರೀಡಾಂಗಣಗಳ ಕೊರತೆಯಿದೆ.

ಹೊಸದಾಗಿ 66 ಕೊಠಡಿಗಳ ನಿರ್ಮಾಣ ನಡೆಯುತ್ತಿದೆ. ಇದರ ಜತೆಗೆ 157 ಶಾಲೆಗಳಲ್ಲಿ ಹೊಸ ಕೊಠಡಿಗಳ ಅತಿ ಅಗತ್ಯವಿದೆ. 141 ಶಾಲೆಗಳಲ್ಲಿ ಹೊಸ ಕೊಠಡಿಗಳ ಅಗತ್ಯವಿಲ್ಲ. ತಾಲ್ಲೂಕಿನ ಹೊಡೇಬೀರನಹಳ್ಳಿ, ಹೂವಿನಭಾವಿ, ಕರ್ಚಖೇಡ, ರುಸ್ತಂಪುರ, ನೀಮಾಹೊಸಳ್ಳಿ, ಯಲಮಾಮಡಿ, ಶಿರೋಳ್ಳಿ, ಕಲ್ಲೂರು ರೋಡ್, ಐನೋಳ್ಳಿ ಮೊದಲಾದ ಕಡೆ ಶಿಥಿಲ ಕಟ್ಟಡ ಗೋಚರಿಸುತ್ತವೆ.

ಮಳೆಗಾಲವಿರುವುದರಿಂದ ಶಿಥಿಲ ಕಟ್ಟಡಗಳತ್ತ ಮಕ್ಕಳು ಹೋಗದಂತೆ ನೋಡುತ್ತ ಕುಳಿತುಕೊಳ್ಳುವುದೇ ಶಿಕ್ಷಕರ ಕೆಲಸವಾದರೆ, ಇನ್ನೂ ಕೆಲವು ಶಾಲೆಗಳಲ್ಲಿ ಶಿಥಿಲ ಕೊಠಡಿಗಳಿಗೆ ಶಾಶ್ವತ ಬೀಗ ಹಾಕಿದ್ದಾರೆ. ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ 25,937 ಮಕ್ಕಳ ದಾಖಲಾಗಿದ್ದು ಇದರಲ್ಲಿ ಬಾಲಕಿಯರ ಸಂಖ್ಯೆ ಬಾಲಕರ ಸಂಖ್ಯೆಗಿಂತಲೂ 1483 ಬಾಲಕಿಯರು ಹೆಚ್ಚಾಗಿರುವುದು ಗಮನಾರ್ಹವಾಗಿದೆ.

ಚಿಂಚೋಳಿ ತಾಲ್ಲೂಕಿನ ಕರ್ಚಖೇಡ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಗೋಡೆ ಶಿಥಿಲಗೊಂಡಿರುವುದು
ಚಿಂಚೋಳಿ ತಾಲ್ಲೂಕಿನ ಕರ್ಚಖೇಡ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಗೋಡೆ ಶಿಥಿಲಗೊಂಡಿರುವುದು

298 ಸರ್ಕಾರಿ ಪ್ರಾಥಮಿಕ ಶಾಲೆಗಳು 31 ಸರ್ಕಾರಿ ಪ್ರೌಢ ಶಾಲೆಗಳು 1200 ಸುಸ್ಥಿತಿಯಲ್ಲಿರುವ ಕೊಠಡಿಗಳು 323 ಶೌಚಾಲಯಗಳ ಅಗತ್ಯ 118 ಶಾಲೆಗಳಲ್ಲಿಲ್ಲ ಬಿಸಿಯೂಟ ಕೊಠಡಿ

ನಮ್ಮ ಊರಿನ ಪ್ರಾಥಮಿಕ ಶಾಲಾ ಕಟ್ಟಡ ಹಳೆಯದಾಗಿದ್ದು ಅಪಾಯಕಾರಿಯಾಗಿವೆ. ಆದಷ್ಟು ಬೇಗ ಇಲ್ಲಿ ಹೊಸ ಕಟ್ಟಡ ಮಂಜೂರು ಮಾಡಬೇಕು. ಪ್ರೌಢಶಾಲೆಗೆ ಆವರಣ ಗೋಡೆ ನಿರ್ಮಿಸಬೇಕು
-ಜಗನ್ನಾಥರಡ್ಡಿ ಹೂವಿನಭಾವಿ ನಿವಾಸಿ
ನಿರಂತರ ಮಳೆ ಸುರಿಯುತ್ತಿರುವುದರಿಂದ ಅಪಾಯದಲ್ಲಿರುವ ಕೊಠಡಿಗಳತ್ತ ಮಕ್ಕಳು ಸುಳಿಯದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಶಿಥಿಲ ಕೊಠಡಿಗಳು ಬಳಸದಂತೆ ನಿಗಾವಹಿಸಬೇಕು
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್‌ ಚಿಂಚೋಳಿ
563 ಶಾಲಾ ಕೊಠಡಿಗಳು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿರುವುದರಿಂದ ಮುಖ್ಯಶಿಕ್ಷಕರಿಗೆ ಅಪಾಯಕಾರಿ ಕೊಠಡಿಗಳನ್ನು ಬಳಸದಂತೆ ಸೂಚಿಸಲಾಗಿದೆ. ದುರಸ್ತಿ ಹಾಗೂ ಹೊಸ ಕಟ್ಟಡಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ವಿ.ಲಕ್ಷ್ಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಚಿಂಚೋಳಿ
ಕೆಕೆಆರ್‌ಡಿಬಿಯ ಅನುದಾನದಿಂದ ನಿರ್ಮಿಸುವ ಶಾಲಾ ಕಟ್ಟಡ ಪ್ಯಾಕೇಜ್ ಮಾದರಿಯಲ್ಲಿ ಗುತ್ತಿಗೆಗೆ ಟೆಂಡರ್ ಕರೆಯಬೇಕು. ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಬೇಕು. ಎಸ್‌ಎಸ್‌ಎ ಅಡಿಯಲ್ಲಿ ನಿರ್ಮಿಸಿದ ಕಟ್ಟಡ ಈಗ ನೆಲಸಮವಾಗಿವೆ
ಹಣಮಂತ ಭೋವಿ ಸಾಮಾಜಿಕ ಕಾರ್ಯಕರ್ತ ಗಾರಂಪಳ್ಳಿ

ಶಿಕ್ಷಣ ಇಲಾಖೆ ಕಚೇರಿಗಳ ದಯನೀಯ ಸ್ಥಿತಿ

ಮನೆಯ ಸ್ಥಿತಿಗತಿ ಮನೆಯ ಅಂಗಳ ಹೇಳುವಂತೆ ತಾಲ್ಲೂಕಿನ ಶೈಕ್ಷಣಿಕ ಸ್ಥಿತಿಗತಿಗೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಮಿನಿಡಯಟ್ ಎಂದೇ ಕರೆಯುವ ಸೇವಾನಿರತ ಶಿಕ್ಷಕರಿಗೆ ತರಬೇತಿ ನೀಡುವ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಟ್ಟಡಗಳು ಸೋರುತ್ತಿವೆ. ಬಿಇಒ ಚೇಂಬರ್‌ನಲ್ಲಿರುವ ಮತ್ತು ಆಡಳಿತ ಶಾಖೆಗೆ ಹೊಂದಿಕೊಂಡ ಸಿಬ್ಬಂದಿ ಶೌಚಾಲಯ ಕೊಠಡಿಗಳು ಯಾವುದೇ ಕ್ಷಣದಲ್ಲೂ ಉರುಳುವ ಆತಂಕವಿದೆ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಟ್ಟಡದಲ್ಲಿ ಹೋಗಲು ಭಯವಾಗುತ್ತಿದೆ.ಶಿಕ್ಷಣ ಇಲಾಖೆಯ ತಾಲ್ಲೂಕುಮಟ್ಟದ ಅಧಿಕಾರಿಗಳ ಕಚೇರಿಯ ಸ್ಥಿತಿಯೇ ಹೀಗಿರುವಾಗ ಶಾಲೆಗಳ ಸ್ಥಿತಿ ಇದಕ್ಕಿಂತಲೂ ಅಪಾಯಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT