ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ತೆಲಂಗಾಣ ಪಾಲಾಗಿದ್ದ ಅರಣ್ಯವೀಗ ಗೋಡಂಬಿ ವನ

Published 4 ಜೂನ್ 2023, 23:38 IST
Last Updated 4 ಜೂನ್ 2023, 23:38 IST
ಅಕ್ಷರ ಗಾತ್ರ

ಜಗನ್ನಾಥ ಡಿ. ಶೇರಿಕಾರ

ಚಿಂಚೋಳಿ (ಕಲಬುರಗಿ ಜಿಲ್ಲೆ): ಇಲ್ಲಿಗೆ ನೀವೊಮ್ಮೆ ಭೇಟಿ ನೀಡಿದರೆ ಇದು ಅರಣ್ಯ ಇಲಾಖೆಯ ನೆಡುತೋಪು ಅಥವಾ ಜಮೀನ್ದಾರರ ಫಾರಂ ಹೌಸ್‌ ಎಂಬ ಸಂಶಯ ಮೂಡುತ್ತದೆ.

ತಾಲ್ಲೂಕಿನ ಗಡಿಗ್ರಾಮದ ಮೊಗದಂಪುರದಲ್ಲಿ ರಾಜ್ಯದ ನೂರಾರು ಎಕರೆ ಜಮೀನನ್ನು ನೆರೆಯ ತೆಲಂಗಾಣದ ಜನರು ಒತ್ತುವರಿ ಮಾಡಿಕೊಂಡಿದ್ದರು. ಇದರ ತೆರವು ಅರಣ್ಯ ಇಲಾಖೆಗೆ ಸವಾಲಾಗಿತ್ತು. ಒತ್ತುವರಿದಾರರು ವಿಷದ ಬಾಟಲಿ, ಕತ್ತಿ, ಕುಡಗೋಲು ಹಿಡಿದುಕೊಂಡು ಬರುವುದರ ಜತೆಗೆ ಮಹಿಳೆಯರನ್ನು ಮುಂದುಮಾಡಿ ಒತ್ತುವರಿ ತೆರವಿಗೆ ಅಡ್ಡಪಡಿಸುತ್ತಿದ್ದರು. ಇದರ ಜತೆಗೆ ಒತ್ತುವರಿದಾರರ ಪ್ರಭಾವ, ರಾಜಕಾರಣಿಗಳ, ಮುಖಂಡರ ಒತ್ತಡ, ನೆರೆ ರಾಜ್ಯದ ಜನಪ್ರತಿನಿಧಿಗಳ ಎಚ್ಚರಿಕೆ ಮಧ್ಯೆಯೂ ಕರ್ನಾಟಕದ ಅರಣ್ಯಾಧಿಕಾರಿಗಳು ಮೇಲಧಿಕಾರಿಗಳ ಸಹಕಾರದೊಂದಿಗೆ ಅರಣ್ಯ ಒತ್ತುವರಿ ತೆರವು ಮಾಡಿ ಸುಮಾರು 300 ಎಕರೆ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿಪಡಿಸಿದ್ದಾರೆ.

ಕರ್ನಾಟಕಕ್ಕೆ ಸೇರಿದ ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆ ಚಿಂಚೋಳಿ ವನ್ಯಜೀವಿ ಧಾಮಕ್ಕಿದೆ. ಗಡಿಗೆ ಹೊಂದಿಕೊಂಡ ರಾಜ್ಯದ ಕಟ್ಟ ಕಡೆಯ ಗ್ರಾಮಗಳಾದ ಮೊಗದಂಪುರ ಮತ್ತು ಲಕ್ಷ್ಮಾಸಾಗರ ಗ್ರಾಮಕ್ಕೆ ಹೋದರೆ  ವನ್ಯಜೀವಿ ಧಾಮದ ಕಾಜು (ಗೋಡಂಬಿ) ನೆಡುತೋಪು ನೋಡುಗರ ಮನಸೆಳೆಯುತ್ತದೆ.

ಕರ್ನಾಟಕದ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದ ತೆಲಂಗಾಣದವರು ಈ ಮಾರ್ಗದ ರಸ್ತೆಯನ್ನೂ ಬಂದ್ ಮಾಡಿದ್ದರು. ಆಗ ದಾಖಲೆಗಳನ್ನು ತಡಕಾಡಿದಾಗ ಇದು ರಾಜ್ಯದ ಅರಣ್ಯ ಜಮೀನು ಎಂಬುದು ದೃಢಪಟ್ಟಿತು.

ತೆರವುಗೊಂಡ ಮೊಗದಂಪುರ ಗ್ರಾಮದಲ್ಲಿ 170 ಎಕರೆ, ಲಕ್ಷ್ಮಾಸಾಗರದ 30 ಎಕರೆ ಪ್ರದೇಶದಲ್ಲಿ 75 ಸಾವಿರ ಗೋಡಂಬಿ ಸಸಿ ಜತೆಗೆ ಸಾಗವಾನಿ, ನೆಲ್ಲಿ, ಹೊಂಗೆ, ಅರಳಿ, ನೇರಳೆ ಸಸಿ ನೆಟ್ಟು ಬೆಳೆಸಲಾಗಿದೆ. ಕೇವಲ 3 ವರ್ಷದಲ್ಲಿ ಉತ್ತಮ ಬೆಳವಣಿಗೆ ಹೊಂದಿರುವ ಕಾಜು ಗಿಡಗಳು 6ರಿಂದ 10 ಅಡಿ ಎತ್ತರ ಬೆಳೆದು ಫಲ ನೀಡುತ್ತಿವೆ. ಕುಸ್ರಂಪಳ್ಳಿ ಗಸ್ತಿನಲ್ಲಿ ಬರುವ ಮಾಣಿಕಪುರದಲ್ಲಿ 40 ಎಕರೆ, ಸೋಮಲಿಂಗದಳ್ಳಿ 35 ಎಕರೆ ಸೇರಿ ಒಟ್ಟು 275 ಎಕರೆ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿಪಡಿಸಿದ್ದು ಈ ನೆಡುತೋಪುಗಳು ಫಾರಂ ಹೌಸ್‌ನಂತೆ ಗೋಚರಿಸುತ್ತಿವೆ.

ಹೊಂಗೆ, ತಾರೆ, ಸೀತಾಫಲ, ಕಕ್ಕೆ, ತಬಸಿ, ಬಿದಿರು ಮೊದಲಾದ ಸಸಿಗಳನ್ನು ಬೆಳೆಸಲಾಗಿದೆ ಎನ್ನುತ್ತಾರೆ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ. 

ಚಿಂಚೋಳಿ ತಾಲ್ಲೂಕು ಮೊಗದಂಪುರದಲ್ಲಿ ಅರಣ್ಯ ಒತ್ತುವರಿ ತೆರವು ಮಾಡಿ ಬೆಳೆಸಿದ ಕಾಡು ಮೈದುಂಬಿಕೊಂಡಿದೆ
ಚಿಂಚೋಳಿ ತಾಲ್ಲೂಕು ಮೊಗದಂಪುರದಲ್ಲಿ ಅರಣ್ಯ ಒತ್ತುವರಿ ತೆರವು ಮಾಡಿ ಬೆಳೆಸಿದ ಕಾಡು ಮೈದುಂಬಿಕೊಂಡಿದೆ

ಅರಣ್ಯದಲ್ಲಿ ಕಾಜು ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿ ವನ್ಯಜೀವಿಗಳಿಗೆ ಆಹಾರ ದೊರೆಯುವಂತೆ ಮಾಡಲಾಗಿದೆ. ಅಲ್ಲಿನ ಮಣ್ಣಿನ ಗುಣ ಆಧರಿಸಿ ಅದಕ್ಕೆ ಹೊಂದುವ ಗಿಡಗಳನ್ನು ಬೆಳೆಸಲಾಗಿದೆ - ಸಂಜೀವಕುಮಾರ ಚವ್ಹಾಣ ವಲಯ ಅರಣ್ಯಾಧಿಕಾರಿ ವನ್ಯಜೀವಿ ಧಾಮ ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT